More

    ಲದ್ದಿ ಹುಳು ಹತೋಟಿಗೆ ರಾಣೆಬೆನ್ನೂರ ರೈತರ ಐಡಿಯಾ…!

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಮೆಕ್ಕೆಜೋಳ ಬೆಳೆಗೆ ತಗಲುವ ಲದ್ದಿ ಹುಳು ಹತೋಟಿಗೆ ರೈತರು ಭರ್ಜರಿ ಐಡಿಯಾ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಸಾವಿರಾರು ರೂ. ಕೊಟ್ಟು ಔಷಧ ಖರೀದಿಸುವ ಬದಲು ಸ್ಥಳೀಯವಾಗಿ ದೊರೆಯುವ ಶಾಂಪೂ, ಸೋಪಿನ ಪೌಡರ್, ಬಣ್ಣಕ್ಕೆ ಉಪಯೋಗಿಸುವ ಟಿನ್ನರ್, ಡೀಸೆಲ್ ಹಾಗೂ ಇರುವೆ, ಜಿರಳೆ ಬಾರದಂತೆ ಉಪಯೋಗಿಸುವ ಲಕ್ಷ್ಮ್ಮ ರೇಖೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗಳಿಗೆ ಸಿಂಡಪಣೆ ಮಾಡಲಾಗುತ್ತಿದೆ.

    ಇದರಿಂದ ಹೊರಬರುವ ದುರ್ವಾಸನೆಗೆ ಬೆಳೆಗಳಿಗೆ ಅಂಟಿಕೊಂಡಿರುವ ಲದ್ದಿ ಹುಳುಗಳು ಕ್ಷಣಾರ್ಧದಲ್ಲಿ ನಾಪತ್ತೆಯಾಗುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ಹುಳುಗಳ ಪಾಲಾಗುವುದು ಬಹುತೇಕ ತಪ್ಪುತ್ತದೆ.

    ಮೆಕ್ಕೆಜೋಳ ನಂಬಿರುವ ರೈತರು

    ತಾಲೂಕಿನಲ್ಲಿ 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ರೈತರು ಎಕರೆಗೆ 25 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದಾರೆ. ಶೇಂಗಾ, ಹತ್ತಿ, ಸೋಯಾಬೀನ್ ಸೇರಿ ಇತರ ಬೆಳೆಗಳನ್ನು 15 ಸಾವಿರ ಹೆಕ್ಟೇರ್​ನಲ್ಲಿ ಬೆಳೆದಿದ್ದರು. ಆದರೆ, ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಎಲ್ಲ ಬೆಳೆಗಳು ಹಾಳಾಗಿ ಹೋಗಿವೆ. ಮಳೆ ಕೊರತೆ ನಡುವೆಯೂ ಕೆಲವೆಡೆ ಮಳೆ ಆಶ್ರಿತ ಮೆಕ್ಕೆಜೋಳ ತೆನೆ ಕಟ್ಟಿದೆ. ಅಲ್ಲದೆ, ನೀರಾವರಿ ಮಾಡಿಕೊಂಡು ಬೆಳೆದಿರುವ ಮೆಕ್ಕೆಜೋಳ ಈಗ ಬೆಳೆಯುತ್ತಿದೆ.

    ಆದ್ದರಿಂದ ತೆನೆ ಕಟ್ಟಿದ ಮೆಕ್ಕೆಜೋಳ ಜಮೀನುಗಳ ರೈತರು ಕೊಂಚ ಬೆಳೆಯಾದರೂ ಬರಲಿದೆ ಎಂದು ನಂಬಿದ್ದಾರೆ. ಇದೇ ವೇಳೆ ಲದ್ದಿ ಹುಳು ಕಾಟದಿಂದ ತೆನೆ ಕಟ್ಟಿದ ಬೆಳೆ ಕೂಡ ಸಂಪೂರ್ಣ ಹಾಳಾಗುತ್ತಿದೆ. ಸಾವಿರಾರು ರೂ. ಖರ್ಚು ಮಾಡಿ ಔಷಧ ಸಿಂಪಡಣೆ ಮಾಡಿದರೂ ಲದ್ದಿ ಹುಳು ಕಾಟ ಹತೋಟಿಗೆ ಬರುತ್ತಿಲ್ಲ. ಇದರಿಂದ ರೈತರು ಬೇಸತ್ತು ಹೋಗಿದ್ದಾರೆ.

    ಕಡಿಮೆ ಖರ್ಚಿನಲ್ಲಿ ಹತೋಟಿಗೆ

    ಲದ್ದಿ ಹುಳುವಿನ ಹತೋಟಿಗಾಗಿ ರೈತರು ಸಾವಿರಾರು ರೂ. ಖರ್ಚು ಮಾಡಿ ಹಲವಾರು ಕಂಪನಿಗಳ ಔಷಧಗಳನ್ನು ಸಿಂಪಡಿಸಿದ್ದಾರೆ. ಔಷಧ ಸಿಂಪಡಿಸಿದ ಮೂರು ದಿನಗಳವರೆಗೆ ನಾಪತ್ತೆಯಾಗುವ ಹುಳು ನಂತರ ಮತ್ತೆ ಕಾಣಿಸಿಕೊಳ್ಳುತ್ತವೆ. ಇದರಿಂದ ಬೇಸತ್ತ ರೈತರು ಔಷಧ ಬದಲು ಶಾಂಪೂ, ಸೋಪಿನ ಪೌಡರ್, ಟಿನ್ನರ್ ಹಾಗೂ ಡಿಸೇಲ್​ಅನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುತ್ತಿದ್ದಾರೆ. ಇದರಿಂದ ತಕ್ಕಮಟ್ಟಗೆ ಹುಳು ಕಾಟ ಹತೋಟಿಗೆ ಬರುತ್ತಿದೆ ಎಂದು ಅವರು ತಿಳಿಸುತ್ತಾರೆ.

    ನಾವು 3 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದೇವೆ. ಲದ್ದಿ ಹುಳಿವಿನ ಕಾಟದಿಂದ ಸಾಕಾಗಿದೆ. ಭೂಮಿಯಿಂದ 4 ಅಡಿ ಎತ್ತರಕ್ಕೆ ಬೆಳೆದಿರುವ ಮೆಕ್ಕೆಜೋಳಕ್ಕೆ ಈಗಾಗಲೇ 6 ಬಾರಿ ವಿವಿಧ ಕಂಪನಿಗಳ ಔಷಧ ಸಿಂಪಡಿಸಿದ್ದೇವೆ. ಆದರೂ ಹತೋಟಿಗೆ ಬಂದಿಲ್ಲ. ಆದ್ದರಿಂದ ಬಟ್ಟೆ ಸೋಪಿನ ಪೌಡರ್, ಟಿನ್ನರ್, ಡೀಸೆಲ್ ಮಿಕ್ಸ್ ಮಾಡಿ ಸಿಂಪಡಣೆ ಮಾಡಿದ್ದೇವೆ. ಇದರಿಂದ ಹುಳು ಕಾಟ ಕೊಂಚ ಹತೋಟಿಗೆ ಬರುತ್ತಿದೆ.

    | ರುದ್ರಪ್ಪ ಬಿ., ಮೆಕ್ಕೆಜೋಳ ಬೆಳೆಗಾರ

    ಲದ್ದಿ ಹುಳು ಕಾಟದಿಂದ ರೈತರು ಬೇರೆ ಬೇರೆ ರೀತಿಯಲ್ಲಿ ದ್ರಾವಣಗಳನ್ನು ಸಿಂಪಡಣೆ ಮಾಡುತ್ತಿರುವ ಕುರಿತು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಬೆಳೆಗಳ ಸ್ಥಿತಿಗತಿ ಬಗ್ಗೆ ವಿಜ್ಞಾನಿಗಳಿಂದ ವರದಿ ಪಡೆಯಬೇಕು. ಆದರೆ, ಕೃಷಿ ಇಲಾಖೆಯಿಂದ ಮೆಲಾತಿಯಾನ್ ಪೌಡರ್ ಸಿಂಪಡಣೆ ಮಾಡಿದರೆ ಹುಳು ಬಾಧೆ ಕಡಿಮೆ ಆಗಲಿದೆ ಎಂದು ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದೆ.

    | ಶಿವಾನಂದ ಹಾವೇರಿ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts