More

    ಕೇನ್ ವಿಲಿಯಮ್ಸನ್ ಈಗ ವಿಶ್ವ ನಂ. 1 ಟೆಸ್ಟ್ ಬ್ಯಾಟ್ಸ್‌ಮನ್

    ದುಬೈ: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸ್ಟೀವನ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ನಂ. 1 ಪಟ್ಟಕ್ಕೇರಿದ್ದಾರೆ. ಮೆಲ್ಬೋರ್ನ್‌ನಲ್ಲಿ ಅಮೋಘ ಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಹಂಗಾಮಿ ನಾಯಕ ಅಜಿಂಕ್ಯ ರಹಾನೆ 6ನೇ ಸ್ಥಾನಕ್ಕೇರಿದ್ದರೆ, ವಿರಾಟ್ ಕೊಹ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡದಿದ್ದರೂ 2ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

    ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಸಾಧನೆಯೊಂದಿಗೆ ವಿಲಿಯಮ್ಸನ್ 3ರಿಂದ ಅಗ್ರಸ್ಥಾನಕ್ಕೆ ನೆಗೆದಿದ್ದರೆ, ಭಾರತ ವಿರುದ್ಧದ ಮೊದಲೆರಡೂ ಟೆಸ್ಟ್‌ಗಳಲ್ಲಿ ವಿಫಲರಾದ ಸ್ಟೀವನ್ ಸ್ಮಿತ್ ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

    ಇದನ್ನೂ ಓದಿ: ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ಮೆಲ್ಬೋರ್ನ್‌ನಲ್ಲಿ 112 ಮತ್ತು ಅಜೇಯ 27 ರನ್ ಗಳಿಸಿದ ರಹಾನೆ 5 ಸ್ಥಾನ ಬಡ್ತಿ ಕಂಡಿದ್ದರೆ, ರನ್‌ಬರ ಎದುರಿಸುತ್ತಿರುವ ಚೇತೇಶ್ವರ ಪೂಜಾರ 2 ಸ್ಥಾನ ಕುಸಿದಿದ್ದರೂ, ಅಗ್ರ 10ರೊಳಗೆ ಉಳಿದುಕೊಂಡಿದ್ದಾರೆ.

    ಕೇನ್ 5 ವರ್ಷಗಳ ಬಳಿಕ ನಂ. 1
    2015ರಲ್ಲಿ ಸ್ವಲ್ಪ ಸಮಯದ ಮಟ್ಟಿಗೆ ಮೊದಲ ಬಾರಿ ನಂ. 1 ಬ್ಯಾಟ್ಸ್‌ಮನ್ ಎನಿಸಿದ್ದ ಕೇನ್ ವಿಲಿಯಮ್ಸನ್, ಇದೀಗ 5 ವರ್ಷಗಳ ಬಳಿಕ ಈ ಸಾಧನೆ ಮರುಕಳಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ 129 ಮತ್ತು 21 ರನ್ ಗಳಿಸಿದ ಅವರು 13 ಅಂಕ ಕಲೆಹಾಕಿದ್ದು, 2ನೇ ಸ್ಥಾನಿ ಕೊಹ್ಲಿಗಿಂತ 11 ಅಂಕ ಮುಂದಿದ್ದಾರೆ.

    ಇದನ್ನೂ ಓದಿ:  PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

    ಅಶ್ವಿನ್, ಬುಮ್ರಾಗೆ ಬಡ್ತಿ
    ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಕೂಡ ಬಡ್ತಿ ಪಡೆದಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ 5 ವಿಕೆಟ್ ಗಳಿಸಿದ ಅಶ್ವಿನ್ 2 ಸ್ಥಾನ ಮೇಲೇರಿ 7ನೇ ಸ್ಥಾನ ಗಳಿಸಿದ್ದರೆ, ಬುಮ್ರಾ 10ರಿಂದ 9ನೇ ಸ್ಥಾನಕ್ಕೇರಿದ್ದಾರೆ. 57 ರನ್ ಮತ್ತು 3 ವಿಕೆಟ್ ಕಬಳಿಸಿ ಮಿಂಚಿದ ರವೀಂದ್ರ ಜಡೇಜಾ, ಆಲ್ರೌಂಡರ್ ರ‌್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲೇ ಉಳಿದುಕೊಂಡಿದ್ದರೂ, 2ನೇ ಸ್ಥಾನಿ ಜೇಸನ್ ಹೋಲ್ಡರ್‌ಗಿಂತ ಕೇವಲ 7 ಅಂಕ ಹಿಂದೆ ನಿಂತಿದ್ದಾರೆ. ಬ್ಯಾಟಿಂಗ್-ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಜಡೇಜಾ ಕ್ರಮವಾಗಿ 36 ಮತ್ತು 14ನೇ ಸ್ಥಾನಕ್ಕೇರಿದ್ದಾರೆ.

    ಐಸಿಸಿ ಟೆಸ್ಟ್ ರ‌್ಯಾಂಕಿಂಗ್ ಟಾಪ್-10:
    ಬ್ಯಾಟಿಂಗ್: 1. ಕೇನ್ ವಿಲಿಯಮ್ಸನ್, 2. ವಿರಾಟ್ ಕೊಹ್ಲಿ, 3. ಸ್ಟೀವನ್ ಸ್ಮಿತ್, 4. ಮಾರ್ನಸ್ ಲಬುಶೇನ್, 5. ಬಾಬರ್ ಅಜಮ್, 6. ಅಜಿಂಕ್ಯ ರಹಾನೆ, 7. ಡೇವಿಡ್ ವಾರ್ನರ್, 8. ಬೆನ್ ಸ್ಟೋಕ್ಸ್, 9. ಜೋ ರೂಟ್, 10. ಚೇತೇಶ್ವರ ಪೂಜಾರ.
    ಬೌಲಿಂಗ್: 1. ಪ್ಯಾಟ್ ಕಮ್ಮಿನ್ಸ್, 2. ಸ್ಟುವರ್ಟ್ ಬ್ರಾಡ್, 3. ನೀಲ್ ವ್ಯಾಗ್ನರ್, 4. ಟಿಮ್ ಸೌಥಿ, 5. ಮಿಚೆಲ್ ಸ್ಟಾರ್ಕ್, 6. ಕಗಿಸೊ ರಬಾಡ, 7. ಆರ್. ಅಶ್ವಿನ್, 8. ಜೋಶ್ ಹ್ಯಾಸಲ್‌ವುಡ್, 9. ಜಸ್‌ಪ್ರೀತ್ ಬುಮ್ರಾ, 10. ಜೇಮ್ಸ್ ಆಂಡರ್‌ಸನ್.

    ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ನಂ. 1 ಪಟ್ಟಕ್ಕೆ ತ್ರಿಕೋನ ಸ್ಪರ್ಧೆ
    ಐಸಿಸಿ ಟೀಮ್ ರ‌್ಯಾಂಕಿಂಗ್‌ನಲ್ಲಿ ಸದ್ಯ ನಂ. 1 ಪಟ್ಟಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸದ್ಯ ಆಸ್ಟ್ರೇಲಿಯಾ (116), ನ್ಯೂಜಿಲೆಂಡ್ (116), ಭಾರತ (114) ಅಗ್ರ 3 ಸ್ಥಾನದಲ್ಲಿವೆ. ಪಾಕ್ ವಿರುದ್ಧ ಕಿವೀಸ್ ಸರಣಿ ಗೆದ್ದರೆ ನಂ. 1 ಆಗಲಿದೆ. ಆದರೆ ಇದನ್ನು ಉಳಿಸಿಕೊಳ್ಳಬೇಕಾದರೆ ಭಾರತ-ಆಸೀಸ್ ಸರಣಿ ಡ್ರಾಗೊಳ್ಳಬೇಕು. ಕಿವೀಸ್ 2-0ಯಿಂದ ಸರಣಿ ಗೆದ್ದರೆ, ಭಾರತ ತಂಡ 2-1ರಿಂದ ಸರಣಿ ಗೆದ್ದರೂ, ಕಿವೀಸ್ ತಂಡವೇ ನಂ. 1 ಆಗಿರಲಿದೆ. ಭಾರತ 3-1ರಿಂದ ಸರಣಿ ಗೆದ್ದರೆ ನಂ. 1 ಆಗಲಿದೆ. ಆಸೀಸ್ 2-1 ಅಥವಾ 3-1ರಿಂದ ಸರಣಿ ಗೆದ್ದರೆ ನಂ. 1 ಪಟ್ಟಕ್ಕೆ ಮರಳಲಿದೆ.

    PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    ಸಿಡ್ನಿ ಟೆಸ್ಟ್‌ಗೆ ರೋಹಿತ್ ಬಲ ತುಂಬುವ ನಿರೀಕ್ಷೆ; ಮಯಾಂಕ್, ವಿಹಾರಿಗೆ ಕೊಕ್ ಸಾಧ್ಯತೆ

    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೇರಲು ಭಾರತಕ್ಕೆ ಇನ್ನೂ 4 ಗೆಲುವು ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts