More

    ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ; ಐಪಿಎಲ್ ಹಾದಿ ಸುಗಮ…

    ದುಬೈ: ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲು ಐಸಿಸಿ ಸೋಮವಾರ ನಿರ್ಧಾರ ಕೈಗೊಂಡಿದೆ. ಕರೊನಾ ವೈರಸ್​ ಹಾವಳಿಯಿಂದಾಗಿ, ಸೋಮವಾರ ನಡೆದ ಐಸಿಸಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಬಿಸಿಸಿಐಗೆ ಐಪಿಎಲ್ 13ನೇ ಆವೃತ್ತಿಯನ್ನು ಈ ವರ್ಷವೇ ಆಯೋಜಿಸಲು ಹಾದಿ ಸುಗಮವಾಗಿದೆ.

    ಇದನ್ನೂ ಓದಿ: VIDEO| ಆಸ್ಟ್ರೇಲಿಯಾದಲ್ಲಿ ಫುಟ್‌ಬಾಲ್ ಪಂದ್ಯಕ್ಕೆ ಕಾಂಗರೂ ಅಡಚಣೆ!

    ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಿಗದಿಯಾಗಿತ್ತು. ಇದೀಗ ಟೂರ್ನಿ ಮುಂದೂಡಿಕೆಯಿಂದಾಗಿ ಬಿಸಿಸಿಐಗೆ ಸೆಪ್ಟೆಂಬರ್ 26ರಿಂದ ನವೆಂಬರ್ 7ರವರೆಗೆ ಐಪಿಎಲ್ ಟೂರ್ನಿ ಆಯೋಜಿಸುವ ಯೋಜನೆಯೊಂದಿಗೆ ಮುಂದುವರಿಯಲು ಅವಕಾಶ ದೊರೆತಿದೆ. ಕಳೆದ ಕೆಲ ಸಭೆಗಳಲ್ಲಿ ಐಸಿಸಿ, ಟಿ20 ವಿಶ್ವಕಪ್​ ಟೂರ್ನಿಯ ಭವಿಷ್ಯವನ್ನು ನಿರ್ಧರಿಸದೆ ಬಿಸಿಸಿಐಯನ್ನು ಕಾಡಿಸುತ್ತ ಬಂದಿತ್ತು. ಆದರೆ ಇದೀಗ, ಶಶಾಂಕ್​ ಮನೋಹರ್​ ಐಸಿಸಿ ಚೇರ್ಮನ್​ ಹುದ್ದೆಯಿಂದ ನಿರ್ಗಮಿಸಿರುವ ಬೆನ್ನಲ್ಲೇ ಟಿ20 ವಿಶ್ವಕಪ್​ ಟೂರ್ನಿ ಮುಂದೂಡಿಕೆಯಾಗಿದ್ದು, ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ. ಇನ್ನು ಬಿಸಿಸಿಐ, ಐಪಿಎಲ್​ ಆಯೋಜನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿರೀಕ್ಷೆ ಇದೆ.

    ಇನ್ನು ಸತತ 3 ವರ್ಷಗಳಲ್ಲಿ ಐಸಿಸಿ ಟೂರ್ನಿಗಳು ನಡೆಯಲಿವೆ. 2021 ಮತ್ತು 2022ರಲ್ಲಿ ಅಕ್ಟೋಬರ್-ನವೆಂಬರ್​ನಲ್ಲಿ ಐಸಿಸಿ ಟಿ20 ವಿಶ್ವಕಪ್​ಗಳು ನಡೆದರೆ, 2023ರ ಅಕ್ಟೋಬರ್​-ನವೆಂಬರ್​ನಲ್ಲಿ ಏಕದಿನ ವಿಶ್ವಕಪ್​ ಟೂರ್ನಿ ಭಾರತದಲ್ಲಿ ನಡೆಯಲಿದೆ. 2021 ಮತ್ತು 2022ರಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ಸತತ 2 ಟಿ20 ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಲಾಗುವುದು. ಹಿಂದಿನ ವೇಳಾಪಟ್ಟಿ ಪ್ರಕಾರ 2021ರ ವಿಶ್ವಕಪ್ ಭಾರತದಲ್ಲಿ ನಡೆಯಬೇಕಿದೆ. ಆದರೆ 2021ರಲ್ಲೇ ಭಾರತದಲ್ಲಿ ನಡೆಯುವುದೇ ಅಥವಾ 2021ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದು 2022ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗುವುದೇ ಅಥವಾ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವುದೇ ಎಂಬುದು ಸ್ಪಷ್ಟವಾಗಿಲ್ಲ.

    ಆಸ್ಟ್ರೇಲಿಯಾದಲ್ಲೂ ಕರೊನಾ ಹಾವಳಿ ಇರುವುದರಿಂದ ಖಾಲಿ ಕ್ರೀಡಾಂಗಣದಲ್ಲಿ ಮತ್ತು 16 ತಂಡಗಳ ಟೂರ್ನಿ ಆಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ಐಸಿಸಿ ತಿಳಿಸಿದೆ. ಇದಲ್ಲದೆ ಅಕ್ಟೋಬರ್-ನವೆಂಬರ್ ಸಮಯದಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಮರುನಿಗದಿಪಡಿಸಲು ಐಸಿಸಿ, ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿದೆ.

    ಇತರ ದೊಡ್ಡ ದೇಶಗಳಿಗೆ ಹೋಲಿಸಿದರೆ ಆಸೀಸ್‌ನಲ್ಲಿ ಕರೊನಾ ಹಾವಳಿ ಕಡಿಮೆ ಇದೆ. ಒಟ್ಟಾರೆ 3 ಸಾವಿರ ಪ್ರಕರಣಗಳಿವೆ. ಆದರೆ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ನಿಗದಿಯಾಗಿರುವ ಮೆಲ್ಬೋರ್ನ್‌ನಲ್ಲಿ ಸ್ವಲ್ಪ ಹೆಚ್ಚಿನ ಪ್ರಕರಣಗಳಿದ್ದು, ಈ ನಗರ ಈಗ ಲಾಕ್‌ಡೌನ್ ಆಗಿದೆ. ನ್ಯೂ ಸೌತ್ ವೇಲ್ಸ್‌ನ ಗಡಿಯನ್ನು ಇತರ ರಾಜ್ಯಗಳು ಬಂದ್ ಮಾಡಿವೆ. ಇನ್ನು ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಪಾಕಿಸ್ತಾನ ಮುಂತಾದ ದೇಶಗಳು ಕರೊನಾದಿಂದಾಗಿ ಹೆಚ್ಚಿನ ತೊಂದರೆ ಎದುರಿಸಿವೆ.

    2021ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಿಗದಿಯಾಗಿರುವ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯನ್ನು ನಿಗದಿಯಂತೆ ನಡೆಸಲು ಐಸಿಸಿ ನಿರ್ಧರಿಸಿದ್ದರೂ, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸುವುದಾಗಿಯೂ ತಿಳಿಸಿದೆ.

    PHOTOS |ನತಾಶಾ ಪ್ರೆಗ್ನನ್ಸಿ ಫೋಟೋಶೂಟ್ ಮಾಡಿಸಿದ ಹಾರ್ದಿಕ್​ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts