More

    ಐಎಎಸ್ ಅಧಿಕಾರಿ ಹಿಡಿತಕ್ಕೆ ಪಾಲಿಕೆ?

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂದು ಖ್ಯಾತಿ ಪಡೆದುಕೊಂಡಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಇದೀಗ ಸರ್ಕಾರವು ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡಲು ಮುಂದಾಗಿದೆ.

    ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿಯ ಸಮಗ್ರ ಅಭಿವೃದ್ಧಿ, ನಗರ ಯೋಜನಾ ವ್ಯಾಪ್ತಿ ವಿಸ್ತರಣೆಗೆ ಪೂರಕ ವಾತಾವರಣ ನಿರ್ಮಾಣ, ಪಾಲಿಕೆ ವ್ಯಾಪ್ತಿಯಲ್ಲಿ ಯೋಜನೆಗಳ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಆಯುಕ್ತರ ಸ್ಥಾನಕ್ಕೆ ಕೆಎಎಸ್ ಬದಲಾಗಿ ಐಎಎಸ್ ಅಧಿಕಾರಿ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಜತೆಗೆ, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದುಕೊಂಡಿದೆ.

    1951ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಹಾನಗರ ಪಾಲಿಕೆಯಲ್ಲಿ ಇಲ್ಲಿಯವರೆಗೆ 60 ಕೆಎಎಸ್ ಅಧಿಕಾರಿಗಳೇ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಐದು ಬಾರಿ ಆಡಳಿತಾಧಿಕಾರಿ ನೇತೃತ್ವದಲ್ಲಿ ಆಡಳಿತ ನಡೆದಿದೆ. ಆದರೆ, ಇಲ್ಲಿಯವರೆಗೆ ಐಎಎಸ್ ಅಧಿಕಾರಿಗಳು ಆಯುಕ್ತರಾಗಿ ನೇಮಕವಾಗಿಲ್ಲ. ಪಾಲಿಕೆಯಲ್ಲಿ ಆಡಳಿತಾಧಿಕಾರಿ ನೇಮಕಗೊಂಡ ವೇಳೆ ಮಾತ್ರ ಜಿಲ್ಲಾಧಿಕಾರಿ ಅಥವಾ ಪ್ರಾದೇಶಿಕ ಆಯುಕ್ತರು ಅಧಿಕಾರ ನಡೆಸಿಕೊಂಡು ಬಂದಿದ್ದಾರೆ.

    ಸರ್ಕಾರ ತಕ್ಷಣ ನೇಮಿಸಲಿ: ಸದ್ಯ ಕೆಎಎಸ್ ಅಧಿಕಾರಿಗಳೇ ಇಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ನಿರ್ಧಾರ ಇನ್ನಿತರ ವಿಷಯ ಕುರಿತು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ವ್ಯವಸ್ಥೆಯಿದೆ. ಇದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಜತೆಗೆ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುತ್ತಿಲ್ಲ ಎಂಬ ದೂರು ಸಹ ಕೇಳಿಬರುತ್ತಿದೆ.

    ಬೆಳಗಾವಿ ಪಾಲಿಕೆಗಿದೆ ವಿಶೇಷ ಸ್ಥಾನಮಾನ: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಮೈಸೂರು ಹೊರತು ಪಡಿಸಿ ಇನ್ನುಳಿದ ಬೆಳಗಾವಿ, ಬಳ್ಳಾರಿ, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ಕಲಬುರ್ಗಿ ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳಿಂತ ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸ್ಥಾನಮಾನ ಹೊಂದಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಹಂತದಲ್ಲಿಯೇ ಆಯ್ಕೆಯಾಗಿದೆ. ಹಾಗಾಗಿ ಸರ್ಕಾರವು ಐಎಎಸ್ ಅಧಿಕಾರಿಯೊಬ್ಬರನ್ನು ಆಯುಕ್ತರನ್ನಾಗಿ ನೇಮಕ ಮಾಡಿದರೆ ಅನುಕೂಲವಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಮೇಲಿಂದ ಮೇಲೆ ವಿನಂತಿಸಲಾಗಿದೆ. ಆದರೆ, ಇಲ್ಲಿಯವರೆಗೆ ಕ್ರಮ ವಹಿಸುತ್ತಿಲ್ಲ ಎಂದು ಪಾಲಿಕೆಯ ಮಾಜಿ ಸದಸ್ಯರು ದೂರಿದ್ದಾರೆ.

    2030ಕ್ಕೆ ಬೃಹತ್ ನಗರ ನಿರ್ಮಾಣ: 2011ರ ಜನಸಂಖ್ಯೆಯ ವರದಿ ಪ್ರಕಾರ ಬೆಳಗಾವಿ 4,88,157 ಜನಸಂಖ್ಯೆ ಹೊಂದಿದೆ. ಆದರೆ, ವಿವಿಧ ಇಲಾಖೆಗಳ ಇತ್ತೀಚಿನ ಯೋಜನಾ ವರದಿಗಳ ಪ್ರಕಾರ ನಗರ ಸಂಖ್ಯೆ 15 ಲಕ್ಷ ದಾಟಿದೆ.

    ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ 2030ರ ವೇಳಗೆ ಬೆಳಗಾವಿ ನಗರದ ಭೌಗೋಳಿಕ ವಿಸ್ತೀರ್ಣ 120 ರಿಂದ 150 ಕಿ.ಮೀ. ಆಗಲಿದೆ. ಪರಿಣಾಮ ನಗರ ಯೋಜನಾ ವ್ಯಾಪ್ತಿಯನ್ನು ವಿಸ್ತರಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಮೊದಲ ಹಂತದಲ್ಲಿ ಬೆಳಗಾವಿ ನಗರದ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳನ್ನು ಸೇರ್ಪಡೆ ಮಾಡಲು ಯೋಜನೆ ರೂಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

    ಸದಸ್ಯರ ಆಯ್ಕೆ ಮುನ್ನ ನೇಮಕ

    ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮನಸ್ಸು ಮಾಡಿದರೆ 24 ಗಂಟೆಗಳಲ್ಲಿ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರಿ ನೇಮಕ ಆಗುತ್ತದೆ. ಆದರೆ, ಜನಪ್ರತಿನಿಧಿಗಳು ಪಾಲಿಕೆ ಅಧಿಕಾರದ ಚುಕ್ಕಾಣಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶದಿಂದಲೇ ಕೆಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ಮುಂದುವರಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಾಲಿಕೆಗೆ ಐಎಎಸ್ ಅಧಿಕಾರಿ ನೇಮಕ ಅವಶ್ಯಕವಾಗಿದೆ. ಪಾಲಿಕೆಗೆ ಹೊಸದಾಗಿ ಸದಸ್ಯರು ಆಯ್ಕೆಗೊಳ್ಳುವ ಮುನ್ನವೇ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಪಾಲಿಕೆಯ ಮಾಜಿ ಮೇಯರ್, ಸದಸ್ಯರ ಒತ್ತಾಸೆಯಾಗಿದೆ.

    ಬೆಳಗಾವಿ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರಿ ನೇಮಕಾತಿ ಕುರಿತು ಪರಿಶೀಲನೆ ನಡೆಸಲಾಗುವುದು. ಯಾವ ಕಾರಣಕ್ಕೆ ಕೆಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ಮುಂದುವರಿಸಲಾಗಿದೆ ಎಂಬುದರ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು.
    | ಬಿ.ಬಸವರಾಜ ನಗರಾಭಿವೃದ್ಧಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts