More

    ‘ನಿವೃತ್ತಿ’ ಘೋಷಿಸಿ ಚಮಕ್​ ನೀಡಿದ ಪಿವಿ ಸಿಂಧು; ಆಟಕ್ಕಲ್ಲ, ಕರೊನಾ ನಕಾರಾತ್ಮಕತೆಗೆ ಗುಡ್‌ಬೈ!

    ನವದೆಹಲಿ: ರಿಯೋ ಒಲಿಂಪಿಕ್ಸ್ ರಜತ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಪಿವಿ ಸಿಂಧು ಸೋಮವಾರ ‘ನಾನು ನಿವೃತ್ತಿಯಾಗುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಅಭಿಮಾನಿಗಳಿಗೆ ಕೆಲಕಾಲ ಆಘಾತ ನೀಡಿದರು. ಅವರ ಪೋಸ್ಟ್‌ಅನ್ನು ಪೂರ್ತಿಯಾಗಿ ಓದದೆ ಕೆಲ ಮಾಧ್ಯಮಗಳೂ ‘ಸಿಂಧು ನಿವೃತ್ತಿ’ ಎಂದು ಬ್ರೇಕಿಂಗ್ ನ್ಯೂಸ್ ನೀಡಿ ಎಡವಟ್ಟು ಮಾಡಿಕೊಂಡವು. ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಹರಡಿರುವ ನಕಾರಾತ್ಮಕತೆ, ಭಯ ಮತ್ತು ಅನಿಶ್ಚಿತತೆಗೆ ಗುಡ್‌ಬೈ ಹೇಳುತ್ತಿದ್ದೇನೆ ಎಂಬುದು 25 ವರ್ಷದ ಪಿವಿ ಸಿಂಧು ‘ನಿವೃತ್ತಿ’ ಪೋಸ್ಟ್‌ನ ಒಟ್ಟಾರೆ ಸಾರಾಂಶವಾಗಿದೆ.

    ಪೌಷ್ಟಿಕತೆ ಮತ್ತು ಫಿಟ್ನೆಸ್‌ನತ್ತ ಗಮನಹರಿಸುವ ಸಲುವಾಗಿ ಸದ್ಯ ಲಂಡನ್‌ನಲ್ಲಿರುವ ಪಿವಿ ಸಿಂಧು, ‘ಡೆನ್ಮಾರ್ಕ್ ಓಪನ್ ನನ್ನ ಸಹನೆಯ ಪರಿಮಿತಿ. ನಾನು ನಿವೃತ್ತಿಯಾಗುತ್ತೇನೆ’ ಎಂದು ಪೋಸ್ಟ್‌ನ ಆರಂಭದಲ್ಲಿ ಬರೆದಿದ್ದರು. ಕಳೆದ ತಿಂಗಳು ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದುದನ್ನು ಪ್ರಸ್ತಾಪಿಸಿ ಅವರು ಈ ಮಾತು ಹೇಳಿದ್ದರು. ಬಳಿಕ, ‘ನಾನಿಂದು ಮನಸ್ಸಿನ ಹಾಲಿ ತಳಮಳದಿಂದ ನಿವೃತ್ತಿಯಾಗಲು ಬಯಸಿರುವೆ. ನಕಾರಾತ್ಮಕತೆ, ಪದೇಪದೇ ಉಂಟಾಗುತ್ತಿರುವ ಭಯ ಮತ್ತು ಅನಿಶ್ಚಿತತೆಯಿಂದ ನಿವೃತ್ತಿಯಾಗುತ್ತಿದ್ದೇನೆ. ಕಳಪೆ ನೈರ್ಮಲ್ಯ ಮತ್ತು ವೈರಸ್ ಬಗೆಗಿನ ಉದಾಸೀನದಿಂದಲೂ ನಿವೃತ್ತಿಯಾಗುತ್ತಿದ್ದೆನೆ’ ಎಂದು ವಿವರಿಸಿದ್ದಾರೆ.

    ಸಿಂಧು ಪೋಸ್ಟ್ ಕಂಡ ಅಭಿಮಾನಿಗಳು ಮೊದಲಿಗೆ, ಅವರು ನಿವೃತ್ತಿಯಾಗುತ್ತಿದ್ದಾರೆ ಎಂದೇ ಭಾವಿಸಿ ಆಘಾತಕ್ಕೊಳಗಾಗಿದ್ದರು. ಅವರ ಬರಹ ಪೂರ್ತಿಯಾಗಿ ಓದಿದ ಬಳಿಕ ನಿರಾಳವಾಗಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸಿಂಧು ನೀವು ನಮಗೆ ಸಣ್ಣ ಶಾಕ್ ಒಂದನ್ನು ನೀಡಿದಿರಿ. ಆದರೆ ನಿಮ್ಮ ದೃಢ ನಿಶ್ಚಯದ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಭಾರತಕ್ಕೆ ಇನ್ನಷ್ಟು ಹೆಮ್ಮೆ ತರುವ ಸಾಮರ್ಥ್ಯ ನಿಮಗಿದೆ’ ಎಂದು ಟ್ವೀಟಿಸಿದ್ದಾರೆ.

    ಕಳೆದ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯದಾಗಿ ಆಡಿರುವ ಪಿವಿ ಸಿಂಧು, ಮುಂದಿನ ಜನವರಿಯಲ್ಲಿ ಏಷ್ಯನ್ ಓಪನ್‌ನಲ್ಲಿ ಮರಳಿ ಕಣಕ್ಕಿಳಿಯುವ ಹಂಬಲದಲ್ಲಿದ್ದಾರೆ. ಕರೊನಾ ಹಾವಳಿಯ ನಡುವೆಯೂ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಸಿಂಧು ಸೋಮವಾರದ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದು, ಬಲಿಷ್ಠ ಹೋರಾಟ ತೋರದೆ ನಿರ್ಗಮಿಸಲಾರೆ. ಭಯವನ್ನು ಹಿಮ್ಮೆಟ್ಟಿಸಿ ಗೆಲುವಿನ ಶಿಖರ ಏರುವವವರೆಗೆ ಹೋರಾಟವನ್ನು ಬಿಟ್ಟುಕೊಡಲಾರೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts