More

    ಇಡಿ ದಾಳಿಯಲ್ಲಿ ನನ್ನ ಪಾತ್ರವಿಲ್ಲ: ಆರಗ ಜ್ಞಾನೇಂದ್ರ ಸ್ಪಷ್ಟನೆ

    ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮನೆಗಳ ಮೇಲೆ ನಡೆದಿರುವ ಇಡಿ ದಾಳಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

    ಆರ್‌ಎಂಎಂ ಮನೆಗಳ ಮೇಲೆ ನಡೆದ ಇಡಿ ದಾಳಿಯನ್ನು ಖಂಡಿಸಿ ಶುಕ್ರವಾರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆ ವೇಳೆ ಕಿಮ್ಮನೆ ರತ್ನಾಕರ್ ಮಾಡಿದ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಂಜುನಾಥಗೌಡರ ಬಗ್ಗೆ ವಿಧಾನಸಭೆಯಲ್ಲಿ ಮತ್ತು ಜಿಲ್ಲಾ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಿಮ್ಮನೆ ಅವರು ವಿಷ ಕಾರಿರುವುದು ಜಿಲ್ಲೆಗೇ ತಿಳಿದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
    ನಕಲಿ ಬಂಗಾರದ ಪ್ರಕರಣದಲ್ಲಿ ರೈತರ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡಿದ್ದೇನೆಯೇ ಹೊರತು ವೈಯಕ್ತಿಕ ದ್ವೇಷದಿಂದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕೇಸ್ ಪುನಃ ಓಪನ್ ಆಗಿದೆ. ಇಡಿ ದಾಳಿಯಿಂದ ಹೆಚ್ಚು ಸಂತೋಷ ಪಟ್ಟವರು ಕಿಮ್ಮನೆ ಅವರೇ ಎಂದು ತಿರುಗೇಟು ನೀಡಿದರು.
    ನಮ್ಮದೇ ಆದ ಬಲಿಷ್ಠ ಸಂಘಟನೆ ಹೊಂದಿರುವ ನನಗೆ ವಾಮಮಾರ್ಗದಲ್ಲಿ ರಾಜಕೀಯ ಮಾಡುವ ಅನಿವಾರ್ಯತೆ ಇಲ್ಲ. ಇವರಿಬ್ಬರು ಸೇರಿ ಚುನಾವಣೆ ಮಾಡಿದರೂ ನನ್ನನ್ನು ಸೋಲಿಸಲಾಗಲಿಲ್ಲ. ನಾನು ಗಾಂಧಿವಾದಿ ಎಂದು ಹೇಳಿಕೊಳ್ಳುವ ಕಿಮ್ಮನೆ ಬಳಸುವ ಭಾಷೆ ಸರಿಯಿಲ್ಲ. ಈಗಲಾದರೂ ತಮ್ಮ ಮಾತಿನ ವರಸೆಯನ್ನು ಬದಲಿಸಿಕೊಳ್ಳಬೇಕು ಎಂದರು.
    ಸದನದಲ್ಲಿ ಕಿಮ್ಮನೆ ಆಡಿದ ಮಾತು ಮತ್ತು ಸಚಿವ ಮಧು ಬಂಗಾರಪ್ಪ ಕಿಮ್ಮನೆ ವಿರುದ್ಧ ಆಡಿರುವ ಮಾತಿನ ಆಡಿಯೋ ತುಣುಕುಗಳನ್ನು ಆರಗ ಕೇಳಿಸಿದರು. ಪ್ರಮುಖರಾದ ಕೆ.ನಾಗರಾಜ ಶೆಟ್ಟಿ, ಸಂದೇಶ್ ಜವಳಿ, ಚಂದವಳ್ಳಿ ಸೋಮಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts