More

    ನಾನು ಇಂದಿರಾ ಗಾಂಧಿ ಮೊಮ್ಮಗಳು, ಅದೇನು ಮಾಡ್ಕೋತೀರೋ ಮಾಡ್ಕೊಳಿ…

    ನವದೆಹಲಿ: ನಾನು ಇಂದಿರಾ ಗಾಂಧಿ ಮೊಮ್ಮಗಳು. ಜನಸೇವಕಿಯಾಗಿ ಸತ್ಯ ಹೇಳುವುದನ್ನು ಮುಂದುವರಿಸುತ್ತೇನೆ. ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

    ಶುಕ್ರವಾರ ಸರಣಿ ಟ್ವೀಟ್​ ಮಾಡಿರುವ ಅವರು, ಜನಸೇವಕಿಯಾಗಿ ಉತ್ತರ ಪ್ರದೇಶದ ಜನರಿಗೆ ಸೇವೆ ಸಲ್ಲಿಸುವುದು ನನ್ನ ಕರ್ತವ್ಯ. ಅವರಿಗೆ ಸತ್ಯ ತಿಳಿಸುವುದು ಕೂಡ ನನ್ನ ಕೆಲಸ. ಸರ್ಕಾರದ ಪ್ರೊಪಗಾಂಡಾವನ್ನು ಬೆಂಬಲಿಸುವುದು ನನ್ನ ಕರ್ತವ್ಯ ಅಲ್ಲ. ನನಗೆ ಧಮ್ಕಿ ಹಾಕುವುದರಲ್ಲೇ ಉತ್ತರ ಪ್ರದೇಶ ಸರ್ಕಾರ ಸಮಯ ವ್ಯರ್ಥಗೊಳಿಸುತ್ತಿದೆ. ನನ್ನ ವಿರುದ್ಧ ಅದೇನು ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ. ನಾನು ಸದಾ ಸತ್ಯವನ್ನೇ ಎತ್ತಿಹಿಡಿಯಲು ಪ್ರಯತ್ನಿಸುತ್ತೇನೆ. ನಾನು ಇಂದಿರಾ ಗಾಂಧಿ ಅವರ ಮೊಮ್ಮಗಳು. ಬಿಜೆಪಿಯ ಅನಾಮಧೇಯ ವಕ್ತಾರೆ ನಾನಲ್ಲ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

    ಉತ್ತರ ಪ್ರದೇಶದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸರ್ಕಾರದ ಬಾಲ ಮಂದಿರದಲ್ಲಿರುವ 57 ಬಾಲಕಿಯರು ಕರೊನಾ ಸೋಂಕಿಗೆ ತುತ್ತಾಗಿರುವುದು, ಅದರಲ್ಲಿ ಇಬ್ಬರು ಗರ್ಭಿಣಿಯರಾಗಿದ್ದು, ಒಬ್ಬಾಕೆಗೆ ಏಡ್ಸ್​ ಸೋಂಕು ತಗುಲಿರುವುದನ್ನು ಪ್ರಸ್ತಾಪಿಸಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಭಾನುವಾರ ಪೋಸ್ಟ್​ ಹಾಕಿದ್ದ ಪ್ರಿಯಾಂಕಾ, ಈ ಘಟನೆಯನ್ನು ಬಿಹಾರದ ಮುಜಾಫರ್​ನಗರದ ಬಾಲಮಂದಿರದ ಘಟನೆಗೆ ಹೋಲಿಕೆ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶ ಮಕ್ಕಳಹಕ್ಕುಗಳ ಆಯೋಗ ನೋಟಿಸ್​ ಜಾರಿ ಮಾಡಿ, ಬಾಲಮಂದಿರದ ಮಕ್ಕಳ ಕುರಿತು ತಪ್ಪು ಮಾಹಿತಿ ನೀಡಿದ್ದರ ಬಗ್ಗೆ ಮೂರು ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು.

    ಇದನ್ನೂ ಓದಿ: ಎಲ್​ಎಸಿ ಬಳಿ ಉದ್ವಿಗ್ನತೆ, ದೇಶದ ಚಿಲ್ಲರೆ ಮಾರಾಟಗಾರರ ಸಂಕಟ

    ಅಲ್ಲದೆ, ಜೂ.22ರಂದು ಟ್ವೀಟ್​ ಮಾಡಿದ್ದ ಪ್ರಿಯಾಂಕಾ ಗಾಂಧಿ, ಆಗ್ರಾದ ಆಸ್ಪತ್ರೆಯಲ್ಲಿ 28 ಕರೊನಾ ಸೋಂಕಿತರು ದಾಖಲಾದ 48 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಈ ಆಗ್ರಾದ ಮಾದರಿಯನ್ನು ಗಮನಿಸಿದಾಗ ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ದರು.

    ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಗ್ರಾದ ಜಿಲ್ಲಾಧಿಕಾರಿ ಪ್ರಭು ನಾರಾಯಣ್​ ಸಿಂಗ್​, ಈ ಟ್ವೀಟ್​ ಅನ್ನು ತಕ್ಷಣವೇ ವಾಪಸು ತೆಗೆದುಕೊಳ್ಳುವಂತೆ ಸೂಚಿಸಿ ಪ್ರಿಯಾಂಕಾ ಗಾಂಧಿ ಅವರಿಗೆ ನೋಟಿಸ್​ ಜಾರಿ ಮಾಡಿದ್ದರು.

    ಆದರೆ ಇದಾವುದಕ್ಕೂ ಪ್ರತಿಕ್ರಿಯಿಸದ ಪ್ರಿಯಾಂಕ ಗಾಂಧಿ, ಆಗ್ರಾದಲ್ಲಿ ಕೋವಿಡ್​ ಸಂಬಂಧಿ ಮರಣಗಳ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಇನ್ನು 48 ಗಂಟೆಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ ಸ್ಪಷ್ಟನೆ ಕೊಡಬೇಕು ಎಂದು ಹೇಳಿ ಟ್ವೀಟ್​ ಮಾಡಿದ್ದಾರೆ.

    ಅಮೆರಿಕದ ನ್ಯಾಯಾಧೀಶರನ್ನಾಗಿ ಭಾರತೀಯನ ನೇಮಕ ಮಾಡಿದ ಟ್ರಂಪ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts