More

    ಹಿರೇಕೆರೂರ ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನ ಪಾತ್ರವೂ ಇದೆ: ಯು. ಬಿ. ಬಣಕಾರ

    ಹಿರೇಕೆರೂರ: ನಾನು ಒಪ್ಪಿಗೆ ಕೊಡದಿದ್ದಲ್ಲಿ ಬಿ.ಸಿ. ಪಾಟೀಲರು 2019ರಲ್ಲಿ ಶಾಸಕರೂ ಆಗುತ್ತಿರಲಿಲ್ಲ. ಮಂತ್ರಿಯೂ ಆಗುತ್ತಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರ ಭರವಸೆಯನ್ನು ನಾನು ಒಪ್ಪಿದ್ದರಿಂದ ಅವರು ಸಚಿವರಾದರು. ನಂತರವಷ್ಟೇ ಕ್ಷೇತ್ರಕ್ಕೆ ಹಣ ಬಂತು. ಹಾಗಾಗಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನದೂ ಪಾತ್ರವಿದೆ ಎಂದು ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಪ್ರತಿಪಾದಿಸಿದ್ದಾರೆ.

    ಪಟ್ಟಣದಲ್ಲಿ ಮತಯಾಚನೆ ಸಂದರ್ಭದಲ್ಲಿ ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪನವರ ಕಾರಣದಿಂದ ಬಿಜೆಪಿಯಲ್ಲಿದ್ದಾಗ ಬಿ.ಸಿ. ಪಾಟೀಲರನ್ನು ಬಿಜೆಪಿಗೆ ಸ್ವಾಗತಿಸಿ, ಅವರನ್ನು ಶಾಸಕ, ಮಂತ್ರಿಯನ್ನಾಗಿ ಮಾಡಲಾಯಿತು. ನಂತರ ಉಂಟಾದ ಬೆಳವಣಿಗೆಯಲ್ಲಿ ನಾನು ಅನಿವಾರ್ಯವಾಗಿ ಬಿಜೆಪಿ ಬಿಟ್ಟು ಹೊರ ಬಂದೆ. ಸುದೈವದಿಂದ ನನ್ನ ತಾಲೂಕಿನ ಜನತೆ ನನ್ನನ್ನು ಕೈಹಿಡಿದು ಕಾಂಗ್ರೆಸ್​ಗೆ ಕರೆದುಕೊಂಡು ಬಂದರು. ಕಾಂಗ್ರೆಸ್ ಬೆಂಬಲ ಸಂಪೂರ್ಣವಾಗಿ ಸಿಕ್ಕಿದ್ದರಿಂದ ಉತ್ತಮ ವಾತಾವರಣ ಸೃಷ್ಟಿಯಾಗಿದೆ ಎಂದರು.

    2018ರ ನಂತರ ಬಿ.ಸಿ. ಪಾಟೀಲರು ಅಭಿವೃದ್ಧಿಗೆ ಒತ್ತು ಕೊಡುತ್ತಾರೆ. ಅಭಿವೃದ್ಧಿಗಾಗಿ ಪಕ್ಷ ಬದಲಾಯಿಸಬೇಕು ಎನ್ನುತ್ತಾರೆ. ಅವರು ರಾಜೀನಾಮೆ ಕೊಟ್ಟ ಬಳಿಕ ಯಡಿಯೂರಪ್ಪನವರು ಹಿರೇಕೆರೂರಿಗೆ ಎರಡು ಬಾರಿ ಬಂದಿದ್ದರು. ‘ನೀವಿಬ್ಬರೂ ನನ್ನ ಎರಡು ಕಣ್ಣುಗಳು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ’ ಎಂದು ಭರವಸೆ ಕೊಟ್ಟಿದ್ದರು. ಆ ಪ್ರಕಾರ ಮಾಡಿದ್ದಾರೆ. ‘ಯು.ಬಿ. ಬಣಕಾರ ತ್ಯಾಗ ಮಾಡಿದ್ದಾರೆ’ ಎಂದು ಸ್ವತಃ ನಮ್ಮ ಎದುರಾಳಿಯೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ನಾನು ಎಂದಿಗೂ ಆ ಶಬ್ದ ಬಳಸಿಲ್ಲ ಎಂದರು.

    ರಟ್ಟಿಹಳ್ಳಿ ನೂತನ ತಾಲೂಕಿಗೆ ಹೊಸ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ಆಗಬೇಕಿದೆ. ಅಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಯೋಜನೆ ಜಾರಿಗೊಳಿಸುವ ಕೆಲಸ ಮಾಡುತ್ತೇನೆ. ನಮ್ಮ ಬಳಿ ಯಾರೇ ಬಂದರೂ ಯಾರು ಎಂದು ನೋಡದೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ. ಜನರಿಗೆ ಜನೋಪಯೋಗಿ ಶಾಸಕ ಬೇಕು. ಜನರ ಸಮಸ್ಯೆಗಳನ್ನು ಅರಿತು, ಕೇಳಿ ಸಮಸ್ಯೆ ಬಗೆಹರಿಸುವ ಶಾಸಕ ಬೇಕು. ಅದು ಶಾಸಕನ ಜವಾಬ್ದಾರಿ. ಹೇಳುವುದಕ್ಕಿಂತ ಮಾಡುವುದು ಅತ್ಯಗತ್ಯ ಎಂದರು.

    ಕಾಂಗ್ರೆಸ್ ಪಕ್ಷದ ಬಲ ಇದೆ

    ಸಂಘಟನೆಯಲ್ಲಿ ನಮ್ಮದೇ ಆದ ಒಂದು ಶಕ್ತಿ ಇದೆ. ಬಿಜೆಪಿಯಲ್ಲಿದ್ದಾಗ ಬಿಎಸ್​ವೈ ಅವರ ಶಕ್ತಿ ಇತ್ತು. ಈಗ ಕಾಂಗ್ರೆಸ್ ಪಕ್ಷವೇ ಒಂದು ಶಕ್ತಿಯಾಗಿದೆ. ಈಗ ನಮ್ಮ ಶಕ್ತಿಯೇ ಬೇರೆ. ನವೆಂಬರ್ 9ರಂದು ಬಿಜೆಪಿಗೆ ರಾಜೀನಾಮೆ ಕೊಟ್ಟ ಬಳಿಕ ಜನ ಪ್ರವಾಹ ಉಂಟಾಗಿದೆ. ನಾಮಪತ್ರ ಸಲ್ಲಿಸುವ ದಿನ, ಪ್ರಿಯಾಂಕಾ ಗಾಂಧಿ ಬಂದ ದಿನ ಜನಸಾಗರ ಹರಿದು ಬಂದಿತ್ತು ಎನ್ನುತ್ತಾರೆ ಯು.ಬಿ.ಬಣಕಾರ.

    2018ರಲ್ಲಿ ಬಿ.ಸಿ. ಪಾಟೀಲರು ಮತ್ತು ಬಿ.ಎಚ್. ಬನ್ನಿಕೋಡರು ಜೋಡೆತ್ತಾಗಿದ್ದರು. 2019ರಲ್ಲಿ ನಾನು ಬಿ.ಸಿ. ಪಾಟೀಲರು ಜೋಡೆತ್ತಾಗಿದ್ದೆವು. ಈಗ 2023ರಲ್ಲಿ ನಾನು ಬಿ.ಎಚ್. ಬನ್ನಿಕೋಡರು ಜೋಡೆತ್ತುಗಳಾಗಿದ್ದೇವೆ. ಬನ್ನಿಕೋಡರು ಕೂಡ ಒಂದು ದೊಡ್ಡ ಶಕ್ತಿ. ಅವರ ಶಕ್ತಿಯಿಂದ ಗೆಲ್ಲುವ ವಾತಾವರಣ ನಿರ್ವಣವಾಗಿದೆ.

    | ಯು.ಬಿ. ಬಣಕಾರ, ಹಿರೇಕೆರೂರ ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts