More

    ನೈರ್ಮಲ್ಯ ಮರೆತ ಎಪಿಎಂಸಿ

    ಬೆಳಗಾವಿ: ಸರ್ಕಾರ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ಯೋಜನೆ ಜಾರಿಗೆ ತಂದು ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ, ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಶುಚಿತ್ವದಿಂದ ದೂರ ಉಳಿದಿದೆ.

    ಎಪಿಎಂಸಿ ಆವರಣದಲ್ಲಿಯೇ ಎಲ್ಲೆಂದರಲ್ಲಿ ಕೊಳೆತ ತರಕಾರಿಗಳನ್ನು ಎಸೆಯಲಾಗುತ್ತಿದ್ದು, ಇದರಿಂದ ಸುತ್ತಲಿನ ವಾತಾವರಣದಲ್ಲಿ ಗಲೀಜು ವಾತಾವರಣ ಸೃಷ್ಟಿಯಾಗಿ ಹಾಗೂ ಗಬ್ಬು ವಾಸನೆ ಬರುತ್ತಿದೆ. ಇಲ್ಲಿನ ಮಳಿಗೆಗಳ ಮಾಲೀಕರು ಹಾಗೂ ವ್ಯಾಪಾರಸ್ಥರು ಕೊಳೆತ ತರಕಾರಿ, ಇನ್ನಿತರ ತ್ಯಾಜ್ಯವನ್ನು ಚೀಲದಲ್ಲಿ ತುಂಬಿ ಅಲ್ಲಿಯೇ ಬಿಸಾಕುತ್ತಾರೆ. ಪರಿಣಾಮ ಇಡೀ ಮಾರುಕಟ್ಟೆಯ ವಾತಾವರಣ ಕಲುಷಿತಗೊಂಡಿದೆ. ಇದರಿಂದ ಇಲ್ಲಿಗೆ ಬರುವ ವ್ಯಾಪಾರಸ್ಥರು ಹಾಗೂ ಮಾರುಕಟ್ಟೆಗೆ ಹೊಂದಿಕೊಂಡಿರುವ ಮಾರ್ಕಂಡೇಯ ನಗರ, ಸಂಗಮೇಶ್ವರ ನಗರ, ಜ್ಯೋತಿ ನಗರ ನಿವಾಸಿಗಳು ಮತ್ತು ಕಂಗ್ರಾಳಿ ಕೆ.ಎಚ್.ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.

    ಮದ್ಯ ವ್ಯಸನಿಗಳ ಹಾವಳಿ: ಎಪಿಎಂಸಿ ಆವರಣದಲ್ಲಿ ಇತ್ತೀಚೆಗಷ್ಟೇ ನೂತನ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ರಸ್ತೆ ಬಳಿ ಸಾರಾಯಿ ಪ್ಯಾಕೆಟ್ ಹಾಗೂ ಬಿಯರ್ ಬಾಟಲ್‌ಗಳು ಗೋಚರಿಸುತ್ತಿವೆ. ಕೆಲ ಕಿಡಿಗೇಡಿಗಳು ಮದ್ಯ ಸೇವಿಸಿ ಬಾಟಲ್‌ಗಳನ್ನು ರಸ್ತೆ ಮೇಲೆ ಒಡೆದುಹಾಕುತ್ತಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕು ಹಾಗೂ ಹೋಬಳಿಮಟ್ಟದ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಮಾದರಿಯಾಗಬೇಕಿದ್ದ ಬೆಳಗಾವಿ ಎಪಿಎಂಸಿಯಲ್ಲಿಯೇ ಶುಚಿತ್ವ ಇಲ್ಲದಿರುವುದು ದುರದೃಷ್ಟಕರವಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

    ಮಳಿಗೆಗಳ ಬಳಿ ಮೂತ್ರ ವಿಸರ್ಜನೆ: ಹಳೇ ಪಿಬಿ ರಸ್ತೆಗೆ ಹೊಂದಿಕೊಂಡಿದ್ದ ತರಕಾರಿ ಮಾರುಕಟ್ಟೆಯೂ ಎಪಿಎಂಸಿಗೆ ಸ್ಥಳಾಂತರಗೊಂಡ ಬಳಿಕ ರೈತರು ಹಾಗೂ ವ್ಯಾಪಾರಸ್ಥರು, ಕಾರ್ಮಿಕರ ಸಂಖ್ಯೆ ಜತೆಗೆ ಗೂಡಂಗಡಿಗಳೂ ಹೆಚ್ಚಾದವು. ಕೆಲವರು ಒಳಚರಂಡಿಗಳ ಮೇಲೆಯೇ ಗೂಡಂಗಡಿ ಇಟ್ಟಿದ್ದಾರೆ. ಇದರಿಂದ ಚರಂಡಿ ಬ್ಲಾಕ್ ಆಗಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೆಲ ಒಳರಸ್ತೆಗಳ ಡಾಂಬರ್ ಕಿತ್ತ್ತುಹೋಗಿ ಕೆಸರುಗದ್ದೆಯಂತಾಗಿವೆ. ಇನ್ನು, ಮಾರುಕಟ್ಟೆಯ ಬಳಿ ಸಾರ್ವಜನಿಕರ ಶೌಚಗೃಹ ಇಲ್ಲದಿರುವುದರಿಂದ ರೈತರು ಹಾಗೂ ವ್ಯಾಪಾರಸ್ಥರು ಮಳಿಗೆಗಳ ಬಳಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

    ಎಪಿಎಂಸಿ ಆವರಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ತ್ಯಾಜ್ಯ ವಿಲೇವಾರಿಯಲ್ಲಿ ಸ್ವಲ್ಪ ತೊಂದರೆ ಉಂಟಾಗಿದೆ. ಇನ್ನು ಮುಂದೆ ಪ್ರತಿದಿನ ತ್ಯಾಜ್ಯ ವಿಲೇವಾರಿ ಮಾಡಲಾಗುವುದು. ಚರಂಡಿಗಳ ಸ್ವಚ್ಛತೆ ಕೈಗೊಂಡು, ಎಪಿಎಂಸಿ ಆವರಣದಲ್ಲಿ ಮದ್ಯ ಸೇವಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು.
    | ಡಾ. ಕೆ.ಕೋಡಿಗೌಡ ಎಪಿಎಂಸಿ ಕಾರ್ಯದರ್ಶಿ ಬೆಳಗಾವಿ

    ಬೆಳಗಾವಿ ಎಪಿಎಂಸಿಯಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ವ್ಯಾಪಾರಸ್ಥರು ಕೊಳೆತ ತರಕಾರಿಗಳನ್ನು ರಸ್ತೆಯ ಮೇಲೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕ ವಿಲೇವಾರಿ ಮಾಡಬೇಕು.
    | ಸಿದಗೌಡ ಮೋದಗಿ ರೈತ ಮುಖಂಡ, ಹುದಲಿ

    |ಅಕ್ಕಪ್ಪ ಮಗದುಮ್ಮ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts