More

    ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಎರಡನೇ ಹಂತದ ಟೆಂಡರ್

    ಅಜೀಜ್ ಬಳಬಟ್ಟಿ
    ಹೂವಿನಹಿಪ್ಪರಗಿ:
    ತಾಳಿಕೋಟೆ ತಾಲೂಕಿನ ಬಹು ನಿರೀಕ್ಷಿತ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 636.89 ಕೋಟಿ ರೂ. ಕಾಮಗಾರಿ ಕೈಗೊಳ್ಳಲು ಎರಡನೇ ಹಂತದ ಟೆಂಡರ್ ಕರೆಯಲಾಗಿದ್ದು, ಈ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ.

    ಎರಡು ದಶಕಗಳ ರೈತರ ಹೋರಾಟದ ಲವಾಗಿ ಬಹು ನಿರೀಕ್ಷಿತ ಯೋಜನೆಗೆ ಸರ್ಕಾರ ಅಸ್ತು ನೀಡಿದೆ. ಈಗಾಗಲೇ 550 ಕೋಟಿ ರೂ. ವೆಚ್ಚದ ಕಾಮಗಾರಿ ಮುಕ್ತಾಯವಾಗಿದ್ದು, ಸದ್ಯ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು 636.89 ಕೋಟಿ ರೂ.ಅನುದಾನ ನಿಗದಿಪಡಿಸಿ ಟೆಂಡರ್ ಕರೆಯಲಾಗಿದೆ. ರೈತರಲ್ಲಿ ಈಗ ಆಶಾಭಾವನೆ ಮೂಡಿದೆ.

    ನಾರಾಯಣಪುರ ಎಡದಂಡೆ ಕಾಲುವೆ ಪಕ್ಕದಲ್ಲೇ ಹರಿದರೂ ಸಹಿತ ತಮಗೆ ನೀರು ಬರುವುದಿಲ್ಲ ಎಂದು 1994 ರಲ್ಲಿ ಬೂದಿಹಾಳ-ಪೀರಾಪುರ ಏತ ನೀರಾವರಿಗೆ ಆಗ್ರಹಿಸಿ ರೈತರು ಹೋರಾಟ ಆರಂಭವಾಗಿತ್ತು. ನಂತರ 2017 ರಲ್ಲಿ ಸರ್ಕಾರ ಯೋಜನೆಗೆ ಅಸ್ತು ಎಂದಿತ್ತು. 3.74 ಟಿಎಂಸಿ ನೀರು ಹಂಚಿಕೆ ಮಾಡಿ 50 ಸಾವಿರ ಎಕರೆ ನೀರು ಉಣಿಸುವ ಯೋಜನೆಗೆ 550 ಕೋಟಿ ರೂ. ಅನುದಾನ ನೀಡಿತ್ತು. ನಾರಾಯಣಪುರ ಡ್ಯಾಂ ಹಿನ್ನೀರಿನಿಂದ ನೀರನ್ನು ಲಿಫ್ಟ್ ಮಾಡಿ ತಾಲೂಕಿನ ಶೆಳ್ಳಗಿಯವರೆಗಿನ ಕಾಮಗಾರಿ ಮುಕ್ತಾಯವಾಗಿದ್ದು, ಸದ್ಯ 46 ಹಳ್ಳಿಗಳ ಹೊಲಗಳಿಗೆ ನೀರುಣಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿಗೆ ವೇಗ ಸಿಗಲಿದೆ.

    ಆತಂಕ ದೂರ
    ಎರಡು ದಶಕಗಳ ಬೇಡಿಕೆಯಾದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಆರಂಭವಾಗುತ್ತಲೇ ಯಾದಗಿರಿ ಜಿಲ್ಲೆಯ ನೀರಾವರಿ ವಂಚಿತ ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಲು ಹೋರಾಟ ಆರಂಭವಾಗಿತ್ತು. ರೈತರ ಹಾಗೂ ಆ ಭಾಗದ ಶಾಸಕರ ಒತ್ತಡಕ್ಕೆ ಮಣಿದು ಯಾದಗಿರಿ ಜಿಲ್ಲೆಯ 45 ಹಳ್ಳಿಗಳನ್ನು ಸೇರಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದ ಈ ಯೋಜನೆ ಮತ್ತೆ ಹಳಿ ತಪ್ಪುವ ಆತಂಕ ಎದುರಾಗಿತ್ತು. ಅದನ್ನು ಮನಗಂಡ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಯಾದಗಿರಿ ಜಿಲ್ಲೆಯ ಹಳ್ಳಿಗಳನ್ನು ಮೂಲ ಯೋಜನೆ ವ್ಯಾಪ್ತಿಗೆ ಸೇರಿಸದಂತೆ ಪಟ್ಟು ಹಿಡಿದರು. ಆಗ ಯಾದಗಿರಿ ಜಿಲ್ಲೆಯ ಹಳ್ಳಿಗಳಿಗಾಗಿ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಫೆಸ್ 2 ಎಂದು ನಾಮಕರಣ ಮಾಡಿ ಬೇರೆ ಯೋಜನೆ ರೂಪಿಸಿದ್ದು, ರೈತರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

    ಆಧುನಿಕ ತಂತ್ರಜ್ಞಾನ
    ತಾಳಿಕೋಟೆ ತಾಲೂಕಿನ ದೇವರಹಿಪ್ಪರಗಿ ಮತಕ್ಷೇತ್ರದ 46 ಹಳ್ಳಿಗಳ 50 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಯಾಗಿದೆ. ಈ ಯೋಜನೆಯನ್ನು ಸದ್ಯ ಆಧುನಿಕ ತಂತ್ರಜ್ಞಾನ ಬಳಸಿ ನೀರುಣಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲೂ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗಿದೆ. 50 ಎಕರೆ ಪ್ರದೇಶಕ್ಕೆ ಒಂದು ಪೈಪ್‌ನ್ನು ಓಪನ್ ಬಿಟ್ಟು ಅಲ್ಲಿಂದ 50 ಎಕರೆಗೆ ಮಾತ್ರ ನೀರು ಹರಿಸಲಾಗುತ್ತಿದೆ. ಇದೇ ರೀತಿ 50 ಸಾವಿರ ಎಕರೆಗೆ ಸಹ ನೀರು ಹರಿಸಲಾಗುವುದು. ಟೇಲ್ ಎಂಡ್‌ದವರೆಗೂ ಸುಗಮವಾಗಿ ನೀರು ಬರುತ್ತದೆ. ಆಧುನಿಕ ತಂತ್ರಜ್ಞಾನ ಬಳಕೆಯಿಂದ 0.5 ಟಿಎಂಸಿವರೆಗೂನೀರು ಉಳಿಯಬಹುದು ಎನ್ನುತ್ತಾರೆ ನೀರಾವರಿ ತಜ್ಞರು.

    ಯೋಜನೆ ವ್ಯಾಪ್ತಿಯಿಂದ ತಾಲೂಕಿನ ಪೀರಾಪುರ ಗ್ರಾಮದಲ್ಲಿ ಬಿಟ್ಟು ಹೋಗಿದ್ದ 500 ಎಕರೆ ಜಮೀನನ್ನು ಸೇರಿಸಿಕೊಂಡು ಆ ಭೂಮಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ರ ಪ್ರಯತ್ನ ಲವಾಗಿ ಸದ್ಯ ಯೋಜನೆ ಹೆಚ್ಚುವರಿ ಅನುದಾನ ಬಂದಿದ್ದು, ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ರೈತರ ಹೊಲಗಳಿಗೆ ನೀರುಣಿಸಲು ಕ್ರಮ ಕೈಗೊಂಡಿದ್ದು, ರೈತರ ಹರ್ಷಕ್ಕೆ ಕಾರಣವಾಗಿದೆ.

    ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಮುಂದಿನ ಕಾಮಗಾರಿ ಕೈಗೊಳ್ಳಲು ಸರ್ಕಾರ 636.89 ಕೋಟಿ ರೂ. ಅನುದಾನ ನೀಡಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ರೈತರ ಹೊಲಗಳಿಗೆ ನೀರುಣಿಸುವವರೆಗೆ ನಾನು ವಿರಮಿಸುವುದಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇದರಿಂದ ಟೇಲ್ ಎಂಡ್ ರೈತರಿಗೂ ಸಹ ಸಮನಾಗಿ ನೀರು ಹಂಚಿಕೆಯಾಗುತ್ತದೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ರೈತರ ಬಾಳು ಹಸನಾಗಿಸಿ ಸಾರ್ಥಕ ಕ್ಷಣಗಳನ್ನು ಕಾಣುತ್ತೇನೆ.
    ಸೋಮನಗೌಡ ಪಾಟೀಲ (ಸಾಸನೂರ),ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts