More

    ತೊಗರಿ ಫಸಲು ದಲ್ಲಾಳಿ ಪಾಲು, ನೋಂದಣಿಗೆ ಸೀಮಿತವಾದ ಬೆಂಬಲ ಬೆಲೆ ಯೋಜನೆ

    ಹಟ್ಟಿಚಿನ್ನದಗಣಿ: ತೊಗರಿ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆಯಲ್ಲಿ ರೈತರ ಫಸಲು ದಲ್ಲಾಳಿಗಳ ಪಾಲು ಆಗುತ್ತಿವೆ.

    ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ 6,300 ರೂ. ನಿಗದಿಪಡಿಸಿದೆ. ಪ್ರಸಕ್ತ ವರ್ಷ ನಿಗದಿತ ಅವಧಿಯಲ್ಲಿ ಕೇಂದ್ರ ಆರಂಭವಾಗದಿರುವದರಿಂದ ರೈತರು 3500ರಿಂದ 4 ಸಾವಿರವರೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರ ನೋಂದಣಿ ಪ್ರಕ್ರಿಯೆ ನಡೆದಿದ್ದು, 180 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ.

    ಗುರುಗುಂಟಾ ಹೋಬಳಿಯಲ್ಲಿ 5615 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. 40 ಸಾವಿರ ಟನ್ ತೊಗರಿ ಉತ್ಪಾದನೆಯಾಗಿದೆ. ಹಟ್ಟಿ, ಆನ್ವರಿ, ರೋಡಲಬಂಡಾ, ಗೆಜ್ಜಲಗಟ್ಟಾ, ನಿಲೋಗಲ್, ಗುರುಗುಂಟಾ ಭಾಗದಲ್ಲಿ ಮಧ್ಯವರ್ತಿಗಳು ಹಾಗೂ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಸಾಲವಾಗಿ ನೀಡಿದ ಅಂಗಡಿ ಮಾಲೀಕರೇ ರೈತರಿಗೆ ಫಸಲು ಖರೀದಿಸಲು ಆಧಾರವಾಗಿದ್ದಾರೆ.

    ಅನುಮತಿ ಇಲ್ಲದೆ ಕಮಿಷನ್ ದಂಧೆ ನಡೆಸುತ್ತಿರುವ ಖಾಸಗಿ ದಲ್ಲಾಳಿಗಳು ರೈತರನ್ನು ಓಲೈಸಿ, ಪಹಣಿ, ಬ್ಯಾಂಕ್ ಖಾತೆ ದಾಖಲೆ, ಆಧಾರ್ ಕಾರ್ಡ್ ವಿವರ ಪಡೆದು ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 4 ಸಾವಿರ ರೂ. ನೀಡಿ ತೊಗರಿ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದಾರೆ. ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ದಲ್ಲಾಳಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಬೆಂಬಲ ಬೆಲೆ ರೈತರ ಬದಲಿಗೆ ಮಧ್ಯವರ್ತಿಗಳ ಪಾಲಾಗುತ್ತಿದೆ.

    ಮಿತಿ ಮೀರಿರುವ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಬೇಕು. ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ದಲ್ಲಾಳಿಗಳು ನೋಂದಣಿ ಮಾಡಿಸದಂತೆ ತಡೆಯುವ ಕೆಲಸವಾಗಬೇಕಿದೆ.

    ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ತಾಲೂಕು ಹಾಗೂ ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು.ತೊಗರಿ ರಾಶಿಯಾಗಿ 15ರಿಂದ 20 ದಿನಗಳ ನಂತರ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಖರೀದಿ ಪ್ರಕ್ರಿಯೆ ಪೂರ್ಣಗೊಂಡು ಸರ್ಕಾರದಿಂದ ಹಣ ರೈತರ ಕೈ ಸೇರಲು 3ರಿಂದ 4 ತಿಂಗಳು ಬೇಕಾಗುತ್ತದೆ. ಸಕಾಲಕ್ಕೆ ನೋಂದಣಿ ಮತ್ತು ಖರೀದಿ ಆರಂಭವಾಗಿದ್ದರೆ ತಾಪತ್ರಯ ತಪ್ಪುತ್ತಿತ್ತು
    | ನಿಂಗಪ್ಪ ಗೌಡನಭಾವಿ, ರೈತ ಸಂಘದ ಹಟ್ಟಿ ಘಟಕದ ಅಧ್ಯಕ್ಷ

    ತೊಗರಿ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದ್ದೇನೆ. ಸರ್ಕಾರದ ಆದೇಶ ತಡವಾಗಿ ಬಂದಿರುವುದರಿಂದ ರೈತರು ಖಾಸಗಿಯಾಗಿ ಮಾರಿಕೊಂಡಿರಬಹುದು. ಅಕ್ರಮವಾಗಿ ದಲ್ಲಾಳಿ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೈತರು ಖರೀದಿ ಕೇಂದ್ರಗಳಲ್ಲಿ ನೇರವಾಗಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು.
    | ಬಲರಾಮ ಕಟ್ಟಿಮನಿ ಲಿಂಗಸುಗೂರು ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts