More

    ಕಿರಿಕಿರಿ ತಂದ ಲಾರಿಗಳ ಓಡಾಟ- ಹಳ್ಳಿಗರಿಗೆ ತೀವ್ರ ತೊಂದರೆ

    ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಿಗೆ ಮರಂ, ಜಲ್ಲಿ, ಕಂಕರ್ ಸಾಮಗ್ರಿಗಳ ಅಧಿಕ ಭಾರ ಹೊತ್ತು ಸಾಗುವ ಲಾರಿಗಳಿಂದ ಹಳ್ಳಿಗರಿಗೆ ತೀವ್ರ ತೊಂದರೆಯಾಗಿದೆ. ನಾಲ್ಕು, ಆರು ಹಾಗೂ 10 ಚಕ್ರದ ಲಾರಿ, ಟಿಪ್ಪರ್‌ಗಳ ಮೂಲಕ ಸಾಮರ್ಥ್ಯಕ್ಕಿಂತ ಅಧಿಕ ಭಾರದ ಜಲ್ಲಿ ಸಾಗಣೆ ನಿರಂತರ ನಡೆದಿದೆ. ಸಾಗಣೆ ಸಂದರ್ಭ ತಾಡಪಾಲು ಅಥವಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಂಚರಿಸಬೇಕೆಂಬ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ.

    ಈ ಲಾರಿಗಳ ಬೇಕಾಬಿಟ್ಟಿ ಓಡಾಟದಿಂದ ದ್ವಿಚಕ್ರ ವಾಹನಗಳ ಸವಾರರು ಸಂಚರಿಸಲು ಭಯಪಡುವ ವಾತಾವರಣ ಉಂಟಾಗಿದೆ. ವಾಹನಗಳ ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದರೆ ಪ್ರಭಾವಿಗಳ ಹೆಸರು ಹೇಳಿ ಚಾಲಕರು ಹೆದರಿಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಾರೆ. ಹಟ್ಟಿ ಕ್ಯಾಂಪ್ ಹಾಗೂ ಹಟ್ಟಿ ಪಟ್ಟಣವನ್ನು ಸಂಧಿಸುವ, ಏಳು ದಶಕಗಳಷ್ಟು ಹಳೆಯದಾದ ಸೇತುವೆ ಈಗಲೋ-ಆಗಲೋ ಬೀಳುವಂತಿದೆ. ಸೇತುವೆ ಬಿರುಕು ಬಿಟ್ಟ ಪರೀಣಾಮ ಕೆಲ ತಿಂಗಳು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ರಾತ್ರೋರಾತ್ರಿ ಓವರ್ ಲೋಡ್ ತುಂಬಿಕೊಂಡ ಹೊರಟ ಲಾರಿಗಳು ಬ್ಯಾರಿಕೇಡನ್ನು ಕಿತ್ತೆಸೆದು ಸಂಚರಿಸುತ್ತಿವೆ. ರಾಜಧನ ಪಾವತಿಸದೆ ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವವರನ್ನು ಮಟ್ಟಹಾಕುವಲ್ಲಿ ಕಂದಾಯ ಇಲಾಖೆ ಮುತುವರ್ಜಿ ವಹಿಸುತ್ತಿಲ್ಲ.

    ವಾಹನ ಸವಾರರ ಮೇಲೆ, ರಸ್ತೆ ಮೇಲೆ ಜಲ್ಲಿಹುಡಿ ಚೆಲ್ಲಿಕೊಂಡು ಸಂಚಾರ ನಡೆಸುತ್ತಿರುವ ವಾಹನಗಳಿಂದ ಬೈಕ್‌ಗಳು ಬಿದ್ದಿರುವ ಘಟನೆಗಳು ನಡೆದಿವೆ. ಅಧಿಕ ಭಾರದ ಹೊಡೆತದಿಂದ ರಸ್ತೆಗಳು ಹಾಳಾಗಿವೆ. ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಹಟ್ಟಿಚಿನ್ನದಗಣಿಗೆ ಸಂಪರ್ಕಿಸುವ ಯರಡೋಣಾ ಕ್ರಾಸಿನ ಬಳಿ ಚೆಕ್‌ಪೋಸ್ಟ್ ದಾರಿಹೋಕರಿಗೆ ಹೊಲದಲ್ಲಿ ನೇತಾಕಿದ ಬೆದರುಬೊಂಬೆಯಂತಾಗಿದೆ.

    ವಾಹನಗಳ ಬೇಕಾಬಿಟ್ಟಿ ಓಡಾಟದಿಂದ ಹಾಳಾದ ರಸ್ತೆಗಳನ್ನು ಅವಾಂತರಕ್ಕೆ ಕಾರಣವಾದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಂದ ರಸ್ತೆಯ ಮರು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಯರಡೋಣಾ ಚಕ್‌ಪೋಸ್ಟ್ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ, ಅಗತ್ಯವಿದ್ದೆಡೆ ಹೆಚ್ಚಿನ ಚಕ್‌ಪೋಸ್ಟ್ ತೆರೆಯಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.

    ಹಾಡುಹಗಲೇ ಪ್ರಭಾವಿಗಳ ಹೆಸರುಹೇಳಿ ತಿರುಗುವವರು ಅಧಿಕಾರಿಗಳ ಕಣ್ಣಿಗೆ ಕಾಣಿಸುದಿಲ್ಲವೆ ? ಕೂಡಲೆ ಅಕ್ರಮ ಜಲ್ಲಿಸಾಗಣೆ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾಲೂಕಾಡಳಿತ ಮುಂದಾಗಬೇಕಿದೆ.
    | ನಿಂಗಪ್ಪ, ಜೆಡಿಎಸ್ ಯುವ ಮುಖಂಡ

    ಅಗತ್ಯವಿದ್ದೆಡೆ ಚಕ್‌ಪೋಸ್ಟ್ ನಿರ್ಮಾಣ ಮಾಡುತ್ತೇವೆ. ನಿಯಮ ಉಲ್ಲಂಘಿಸಿದ ಹಾಗೂ ಅಕ್ರಮವಾಗಿ ಜಲ್ಲಿ ಸಾಗಣೆ ಮಾಡುವವರನ್ನು ಗುರುತಿಸಿ ಕ್ರಮಕೈಗೊಳ್ಳುತ್ತೇವೆ.
    | ಬಲರಾಮ್ ಕಟ್ಟಿಮನಿ, ಲಿಂಗಸುಗೂರು ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts