More

    ಕೃಷಿಹೊಂಡಗಳ ತನಿಖೆ ಸಹಾಯಧನಕ್ಕೆ ಕೊಕ್ಕೆ?

    ರಾಯಚೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅವಧಿಯಲ್ಲಿ ಮಂಜೂರಾಗಿದ್ದ ಕೃಷಿ ಹೊಂಡಗಳು ನಿರ್ವಣಗೊಂಡು ತಿಂಗಳುಗಳೇ ಕಳೆದರೂ ಸರ್ಕಾರದ ಸಬ್ಸಿಡಿ ಹಣ ಬಿಡುಗಡೆಯಾಗದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

    ಕೃಷಿ ಹೊಂಡಗಳ ನಿರ್ವಣದ ತನಿಖೆ ನೆಪದಲ್ಲಿ ಅನುದಾನಕ್ಕೆ ರಾಜ್ಯ ಸರ್ಕಾರ ಕೊಕ್ಕೆ ಹಾಕಲು ಮುಂದಾಗಿದೆ ಎಂಬ ಅನುಮಾನ ಮಳೆಯಾಶ್ರಿತ ರೈತರನ್ನು ಕಾಡಲಾರಂಭಿಸಿದೆ.

    ಹೊಂದಾಣಿಕೆಯಾಗದ ಮಾಹಿತಿ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಅಧಿಕ ಕೃಷಿ ಹೊಂಡ ಮಂಜೂರಾಗಿದ್ದವು. ಆದರೆ ಮಂಜೂರಾದ ಕೃಷಿ ಹೊಂಡಗಳು ರೈತರ ಜಮೀನಿನಲ್ಲಿಲ್ಲ. ಸರ್ಕಾರದ ಹಣ ದುರ್ಬಳಕೆಯಾಗಿದೆ ಎನ್ನುವ ಗುಮಾನಿಯಿಂದ ಬಿಜೆಪಿ ಸರ್ಕಾರ ಕೃಷಿ ಹೊಂಡಗಳ ಖುದ್ದು ಪರಿಶೀಲನೆಗೆ ತಂಡ ರಚಿಸಿತ್ತು. 2019ರ ಅಕ್ಟೋಬರ್ ಕೊನೇ ಹಾಗೂ ನವೆಂಬರ್ ಮೊದಲ ವಾರದಲ್ಲಿ ಉನ್ನತಾಧಿಕಾರಿಗಳ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತಂಡ ಆಗಮಿಸಿ ನಾಲ್ಕೈದು ದಿನ ಕಾಲ ಒಂದೊಂದು ಜಿಲ್ಲೆಯಲ್ಲಿ ಕೃಷಿ ಹೊಂಡ ಪರಿಶೀಲನೆಗೆ ತೆರಳಿತ್ತು. ರೈತರ ಹೆಸರು, ಪಹಣಿ, ಸರ್ವೆ ನಂಬರ್, ಕೃಷಿ ಇಲಾಖೆ ನೀಡಿದ ಮಾಹಿತಿಯನ್ನೂ ಹೋಲಿಕೆ ಮಾಡಿ ಪರಿಶೀಲಿಸಿತ್ತು. ಆದರೆ, ಬಹುತೇಕ ಕಡೆ ಹೋಲಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೃಷಿ ಹೊಂಡ ನಿರ್ವಣದಲ್ಲಿ ಎಡವಟ್ಟುಗಳಾಗಿವೆ ಎಂಬ ಅನುಮಾನ ತನಿಖಾ ತಂಡಕ್ಕೆ ಬಂದಿದೆ. ಸರ್ಕಾರಕ್ಕೆ ಡಿಸೆಂಬರ್​ನಲ್ಲಿ ಸಲ್ಲಿಸಿದ ವರದಿಯಲ್ಲೂ ತನಿಖಾ ತಂಡ ಇದನ್ನೇ ಹೇಳಿದೆ. ಇದರಿಂದಾಗಿ ಕೃಷಿ ಹೊಂಡ ನಿರ್ವಿುಸಿಕೊಂಡಿರುವ ರೈತರಿಗೆ ತೊಂದರೆಯಾಗಿದೆ. ಕೃಷಿ ಹೊಂಡದ ಅಳತೆಗೆ ಅನುಗುಣವಾಗಿ 23 ಸಾವಿರ ರೂ.ನಿಂದ 1.42 ಲಕ್ಷ ರೂ.ವರೆಗೆ ಅನುದಾನ ನಿಗದಿಯಾಗಿದೆ.

    ಸ್ವಂತ ಹಣದಲ್ಲಿ ಕೃಷಿಹೊಂಡ ಮಾಡಿಸಿಕೊಂಡಿದ್ದೇನೆ. ಇನ್ನೂ ಪ್ರೋತ್ಸಾಹಧನ ಸಿಕ್ಕಿಲ್ಲ. ಹಿಂದೊಮ್ಮೆ ಅಧಿಕಾರಿಗಳು ಬಂದು ಕೃಷಿಹೊಂಡ ನೋಡಿ ಹೋಗಿದ್ದರು. ಕೃಷಿ ಅಧಿಕಾರಿಗಳನ್ನು ಕೇಳಿದರೆ ಬಜೆಟ್ ಇಲ್ಲ; ಬಂದ ಮೇಲೆ ಖಾತೆಗೆ ಜಮಾ ಮಾಡುತ್ತೇವೆ ಎನ್ನುತ್ತಿದ್ದಾರೆ.

    | ಆಂಜನೇಯ ಇಬ್ರಾಹಿಂದೊಡ್ಡಿ ಗ್ರಾಮದ ರೈತ

    ಕಳೆದ ವರ್ಷದ ಸ್ವಲ್ಪ ಹಾಗೂ 2018-19ರಲ್ಲಿನ ಕೃಷಿಹೊಂಡ ಫಲಾನುಭವಿ ರೈತರಿಗೆ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ತನಿಖೆ ಏನಾಗಿದೆ? ಎಂಬ ಬಗ್ಗೆ ಮಾಹಿತಿ ಇಲ್ಲ. ಹಣ ಬಂದ ತಕ್ಷಣ ರೈತರ ಖಾತೆಗೆ ಜಮೆ ಮಾಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಮೇಲಧಿಕಾರಿಗಳನ್ನು ಕೇಳಬೇಕು.

    | ಹೆಸರೇಳಲು ಇಚ್ಛಿಸದಕೃಷಿ ಇಲಾಖೆ ಅಧಿಕಾರಿ

    | ವೆಂಕಟೇಶ ಹೂಗಾರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts