More

    ಕೆರೆ ಒತ್ತುವರಿ ತೆರವು ತಾತ್ಕಾಲಿಕ ಸ್ಥಗಿತ, ಕೊಯ್ಲಿನ ವರೆಗೂ ಅವಕಾಶ ಕೇಳಿತ ರೈತರು: ಕಾರ್ಯಾಚರಣೆ ನಿಲ್ಲಿಸಿದ ಕಂದಾಯ ಇಲಾಖೆ ಹಾಗೂ ಗೌತಮಪುರ ಗ್ರಾಮ ಪಂಚಾಯಿತಿ

    ಸಾಗರ: ತಾಲೂಕಿನ ಮೆಣಸಿನಸರ ಗ್ರಾಮದ ಹುರಳಿಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಹಾಗೂ ಗೌತಮಪುರ ಗ್ರಾಮ ಪಂಚಾಯಿತಿ ಬುಧವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಒತ್ತುವರಿ ಜಮೀನಲ್ಲಿನ ಸಲು ಕೊಯ್ಲು ಮಾಡುವವರೆಗೂ ಕಾಲಾವಕಾಶ ನೀಡುವಂತೆ ರೈತರು ಮನವಿ ಮಾಡಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿಸಲಾಗಿದೆ.

    ಮೆಣಸಿನಸರದ ಸರ್ವೇ ನಂಬರ್ 37ರಲ್ಲಿರುವ ಹುರಳಿಕೆರೆ 7.36 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಕೆರೆಯ 5.36 ಎಕರೆ ಜಾಗವನ್ನು 18 ರೈತರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಲು ತಹಸೀಲ್ದಾರ್ ಸೂಚನೆ ನೀಡಿದ್ದರಿಂದ ಗ್ರಾಪಂ ಅಧ್ಯಕ್ಷ ಮಂಜುನಾಥ ದಾಸನ್, ರಾಜಸ್ವ ನಿರೀಕ್ಷಕ ಕವಿರಾಜ್, ಗ್ರಾಮ ಲೆಕ್ಕಾಧಿಕಾರಿ ಎಚ್.ಕೆ.ಕಟ್ಟಿಮನಿ, ಪಿಡಿಒ ವಾಣಿಶ್ರೀ ನೇತೃತ್ವದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.

    ಕೆರೆ ಜಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಮಧ್ಯಪ್ರವೇಶಿಸಿ ಏಳೆಂಟು ದಶಕಗಳಿಂದ ಇದೇ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಉಳುಮೆ ಮಾಡಲು ಬೇರೆ ಜಾಗ ಇಲ್ಲ. ಒತ್ತುವರಿ ತೆರವುಗೊಳಿಸಲು ಸಿದ್ಧರಿದ್ದೇವೆ. ಆದರೆ ಈ ಬಾರಿಯ ಫಸಲು ಕೊಯ್ಲು ಆಗುವ ವರೆಗೂ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

    ಗ್ರಾಪಂ ಅಧ್ಯಕ್ಷ ಮಂಜುನಾಥ ದಾಸನ್ ಮಾತನಾಡಿ, ಹುರಳಿಕೆರೆಯನ್ನು ಸುಪ್ರೀಂಕೋರ್ಟ್ ಹಾಗೂ ಸರ್ಕಾರದ ಆದೇಶದಂತೆ ತಹಸೀಲ್ದಾರ್ ಸೂಚನೆ ಮೇರೆಗೆ ತೆರವುಗೊಳಿಸಲಾಗುತ್ತಿದೆ. 6.6 ಎಕರೆ ಒತ್ತುವರಿಯಾಗಿರುವುದು ಕಂಡುಬಂದಿದ್ದು ಈ ಜಾಗದಲ್ಲಿ ರೈತರು ನಾಟಿ ಮಾಡಿದ್ದಾರೆ. ರೈತರು ಕೊಯ್ಲಿನ ನಂತರ ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದ್ದರಿಂದ ತೆರವು ಕಾರ್ಯ ತಡೆದಿದ್ದೇವೆ ಎಂದು ತಿಳಿಸಿದರು.

    ಇದು ನಕಾಶೆ ಕಂಡ ಕೆರೆ. ಆಡಳಿತ ತಕ್ಷಣ ಒತ್ತುವರಿಯನ್ನು ತೆರವುಗೊಳಿಸಬೇಕು. ಒಂದೊಮ್ಮೆ ತೆರವು ಮಾಡದೆ ಹೋದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಖಾತೆ ಮಾಡಿಕೊಡಿ. ಅನಗತ್ಯವಾಗಿ ಅಧಿಕಾರಿಗಳು, ಗ್ರಾಮಸ್ಥರ ನಡುವೆ ಗೊಂದಲ ಸೃಷ್ಟಿ ಮಾಡಬಾರದು.
    ಸತ್ಯನಾರಾಯಣ
    ಒತ್ತುವರಿ ವಿರುದ್ಧ ಹೋರಾಡುತ್ತಿರುವ ರೈತ

    ಏಳೆಂಟು ದಶಕಗಳಿಂದ ಇದೇ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿ 18 ರೈತರ ಜಮೀನು ಇದೆ. ನಮಗೂ ಉಳುಮೆ ಮಾಡಲು ಬೇರೆ ಜಾಗ ಇಲ್ಲ ಹಾಗಿದ್ದರೂ ಒತ್ತುವರಿ ತೆರವುಗೊಳಿಸಲು ಸಿದ್ಧರಿದ್ದೇವೆ. ಕೊಯ್ಲು ಆಗುವವರೆಗೂ ಸಮಯ ನೀಡಿ. ಕೆರೆ ಜಾಗವನ್ನು ಮತ್ತೊಮ್ಮೆ ಸರ್ವೇ ಮಾಡಿ.
    ಯೋಗೇಂದ್ರಪ್ಪ
    ಕೆರೆ ಜಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts