More

    ಸಂತೆಯಲ್ಲಿ ಹಸಿ ಶೇಂಗಾ ಸೊಗಡು!

    ಬೆಳಗಾವಿ: ಕರೊನಾ ತಂದಿಟ್ಟ ಸಮಸ್ಯೆಗಳಿಂದ ರೈತಾಪಿ ಜನರು ಈಗಾಗಲೇ ಹೈರಾಣಾಗಿದ್ದಾರೆ. ಲಾಕ್‌ಡೌನ್ ಬಳಿಕವಂತೂ ಉತ್ಪನ್ನಗಳಿಗೆ ಸಿಗದ ಸಮರ್ಪಕ ಬೆಲೆ, ಹಾನಿಗೀಡಾದ ಬೆಳೆ, ಸಾಲ ತೀರಿಸಲಾಗದ ವೇದನೆ ಮಧ್ಯೆಯೇ ರೈತರು ಭೂಮಿ ನಂಬಿ ದಿನದೂಡುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೇ ಹಸಿ ಶೇಂಗಾ, ಬಟಾಣಿ, ಮೆಕ್ಕೆಜೋಳ ಬೆಳೆ ತುಸು ಆಸರೆಯಾಗಿದೆ.

    ಕರೊನಾತಂಕದ ಭೀತಿಯ ನಡುವೆಯೇ ಈ ಬೆಳೆಗಳು ರೈತರು ಹಾಗೂ ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತಿವೆ. ಇದೀಗ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳ ಹಾಗೂ ಬೆಳಗಾವಿಯ ಮಾರುಕಟ್ಟೆಯಲ್ಲಿ ಹಸಿ ಶೇಂಗಾ, ಬಟಾಣಿ ಹಾಗೂ ಮೆಕ್ಕೆಜೋಳದ ತೆನೆ ಮಾರಾಟ ಜೋರಾಗಿ ಸಾಗಿದೆ.

    ಜಿಲ್ಲೆಯ ಎಲ್ಲೆಡೆ ಈ ಬಾರಿ ಉತ್ತಮ ಮಳೆಯಾಗಿದೆ. ಮಳೆಗೆ ತಕ್ಕಂತೆ ಬೆಳೆಗಳೂ ನಳನಳಿಸುತ್ತಿವೆ. ಕಬ್ಬು, ಹೆಸರು, ಶೇಂಗಾ, ಸೋಯಾ ಅವರೆ, ಮೆಕ್ಕೆಜೋಳ ಹಾಗೂ ಇನ್ನಿತರ ಬೆಳೆ ಬೆಳೆದಿರುವ ರೈತರು, ಉತ್ಪನ್ನ ಕೈ ಸೇರಲು ಇನ್ನೂ ಕೆಲ ತಿಂಗಳು ಕಾಯಬೇಕಿದೆ. ಆದರೆ, ಜಿಲ್ಲೆಯಲ್ಲಿ ಹಂಗಾಮಿಗಿಂತ ಮುಂಚಿತವಾಗಿ ನೀರಾವರಿ ಆಧಾರಿತ ಜಮೀನಿನಲ್ಲಿ ಬೆಳೆದ ಹಸಿ ಶೇಂಗಾವನ್ನೇ ನಗರದ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.

    ನೀರಾವರಿ ಬೆಳೆ: ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನೀರಾವರಿ ಪದ್ಧತಿಯಡಿ ಶೇಂಗಾ ಬೆಳೆಯಲಾಗುತ್ತದೆ. ಬೆಳಗಾವಿ ತಾಲೂಕು, ಹುಕ್ಕೇರಿ, ಚಿಕ್ಕೋಡಿ, ಬೈಲಹೊಂಗಲ ಭಾಗದ ರೈತರು ಈ ಬೆಳೆ ಮಳೆಗಾಲಕ್ಕೆ ಕಟಾವಿಗೆ ಬರುವಂತೆ ಬೆಳೆಯುತ್ತಾರೆ. ಅಲ್ಲದೆ, ಮೆಕ್ಕೆಜೋಳ ಕೂಡ ಹಸಿಯಾಗಿ ಮಾರಾಟ ಮಾಡುವ ಹಂತಕ್ಕೆ ಕಟಾವಿಗೆ ಬಂದಿದ್ದು, ರೈತರು ಮಾರಾಟದಲ್ಲಿ ತೊಡಗಿದ್ದಾರೆ.

    ಮಾನ್ಸೂನ್‌ನಲ್ಲಿ ಬೇಡಿಕೆ ಹೆಚ್ಚು: ನೀರಾವರಿ ಹಾಗೂ ಒಣ ಬೇಸಾಯ ಪದ್ಧತಿಯಲ್ಲೂ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಯಾವುದೇ ಹಂಗಾಮಿನಲ್ಲೂ ಶೇಂಗಾ ಬೆಳೆಯಬಹುದಾದ್ದರಿಂದ ರೈತರು ಮಳೆಗಾಲದಲ್ಲಿ ಹಸಿ ಶೇಂಗಾ ಕಟಾವು ಮಾಡಿ ಮಾರಾಟ ಮಾಡುತ್ತಾರೆ. ಮಳೆಗಾಲದಲ್ಲಿ ಹಸಿ ಶೇಂಗಾ ಹುರಿದು, ಸುಟ್ಟು ತಿನ್ನುವುದು ವಾಡಿಕೆಯಂತೆ ಈ ಭಾಗದಲ್ಲಿ ನಡೆದುಬಂದಿದೆ. ಹೀಗಾಗಿ ನಗರ ಪ್ರದೇಶದಲ್ಲಿ ಹಸಿ ಶೇಂಗಾ ಖರಿದೀಸುವವರು ಹೆಚ್ಚಿದ್ದು, ಈ ಬೆಳೆಗೆ ಬೇಡಿಕೆಯೂ ಹೆಚ್ಚಿದೆ. ಶೇಂಗಾ ಪ್ರತಿ ಕೆಜಿಗೆ 50 ರಿಂದ 70 ರೂ., ಮೆಕ್ಕೆಜೋಳದ ಒಂದು ತೆನೆಗೆ 5 ರೂ., ಬಟಾಣಿ ಕೆಜಿಗೆ 40ರಿಂದ 70 ರೂ.ವರೆಗೆ ಮಾರಾಟವಾಗುತ್ತಿದೆ.

    ನೇರ ಹಾಗೂ ದಲ್ಲಾಳಿಗಳ ಮೂಲಕ ಮಾರಾಟ: ಶೇಂಗಾ ಬೆಳೆದ ಕೆಲ ರೈತರು ನೇರವಾಗಿ ತಾವೇ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ, ಇನ್ನೂ ಕೆಲವರು ದಲ್ಲಾಳಿಗಳಿಗೆ ಸಗಟು ರೂಪದಲ್ಲಿ ಶೇಂಗಾ ಮಾರಾಟ ಮಾಡುತ್ತಾರೆ. ಸಗಟು ವ್ಯಾಪಾರಿಗಳಿಂದ ಶೇಂಗಾ ಖರೀದಿಸುವ ಸಣ್ಣ ವ್ಯಾಪಾರಿಗಳು ಬೀದಿಬದಿ ಕುಳಿತು ಕೆಜಿ ಲೆಕ್ಕದಲ್ಲಿ ಶೇಂಗಾ ಮಾರಾಟ ಮಾಡುತ್ತಾರೆ.

    ಹೊಲದಿಂದ ಶೇಂಗಾ ಕಿತ್ತು, ತೊಳೆದ ಬಳಿಕ ಅದನ್ನು ಮಾರುಕಟ್ಟೆಗೆ ಸಾಗಿಸುವುದು ಸೇರಿ ಅಪಾರ ಶ್ರಮ ಬೇಡುವ ಕೆಲಸ ರೈತರಿಗೆ ಕೊಂಚ ಹೊರೆಯಾಗುತ್ತದೆ. ಆದರೂ ಶೇಂಗಾ ಕಟಾವಿಗೆ ಬಂದ ನಂತರ ಒಣಗಿಸಿ, ರಾಶಿ ಮಾಡಿ ಮಾರಾಟ ಮಾಡುವುದಕ್ಕಿಂತ ತುರ್ತು ಆರ್ಥಿಕ ಅಗತ್ಯತೆ ಪೂರೈಸಿಕೊಳ್ಳಲು ಹಸಿ ಶೇಂಗಾ ಮಾರಾಟ ಮಾಡುವುದು ಲಾಭದಾಯಕ ಎನ್ನುವುದು ಕೆಲ ರೈತರ ಅಭಿಪ್ರಾಯ.

    ಲಾಕ್‌ಡೌನ್‌ನಿಂದ ದಿಕ್ಕು ತೋಚದಂತಾದ ಸಮಯದಲ್ಲಿ ಶೇಂಗಾ ಮಾರಾಟ ಕೈ ಹಿಡಿದಿದೆ. ಪ್ರತಿದಿನ ರಸ್ತೆ ಬದಿ ಕುಳಿತು ಶೇಂಗಾ ಮಾರಾಟ ಮಾಡುತ್ತೇನೆ. ಕರೊನಾ ಹಾವಳಿ ಹಾಗೂ ಮಳೆಗಾಲದಿಂದಾಗಿ ಜನರು ಮನೆಯಲ್ಲೇ ಇರುವುದರಿಂದ ಹಸಿ ಶೇಂಗಾ ಖರೀದಿ ಹೆಚ್ಚಿದೆ. ಶೇಂಗಾ ಮಾರಾಟದಿಂದ ಜೀವನೋಪಾಯಕ್ಕೆ ಅನುಕೂಲವಾಗಿದೆ.
    | ದೇಮವ್ವಾ ಪೂಜಾರ. ಬೀದಿಬದಿ ವ್ಯಾಪಾರಸ್ಥೆ,

    ನಗರ ಪ್ರದೇಶದಲ್ಲಿ ಹಸಿ ಶೇಂಗಾ, ಬಟಾಣಿ ಹಾಗೂ ಮೆಕ್ಕೆಜೋಳ ಮಾರಾಟದಿಂದ ಲಾಭ ತಂದುಕೊಡುವುದರಿಂದ ರೈತರು ಸಹಜವಾಗಿ ಅತ್ತ ಆಕರ್ಷಿತರಾಗುತ್ತಾರೆ. ಆ ನಿಟ್ಟಿನಲ್ಲಿ ರೈತರಿಗೆ ಯಾವುದೇ ನೆರವು ಬೇಕಾದಲ್ಲಿ ಇಲಾಖೆಯಿಂದ ಕಲ್ಪಿಸಿಕೊಡಲಾಗುವುದು.
    | ಜಿಲಾನಿ ಮೊಖಾಶಿ. ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ

    | ಮಲ್ಲಿಕಾರ್ಜುನ ತಳವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts