More

    ಅಕ್ರಮ ಮದ್ಯ ಮಾರಾಟ ಪ್ರತಿಧ್ವನಿ

    ಹುನಗುಂದ: ತಾಲೂಕಿನಾದ್ಯಂತ ಹಾಡಹಗಲೇ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ. ನಾಮ್ ಕೇ ವಾಸ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ತಾಪಂ ಸದಸ್ಯರು ಅಬಕಾರಿ ಸಹಾಯಕ ನಿರೀಕ್ಷಕಿ ಗೌರಿ ಪಾಟೀಲ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಅಧ್ಯಕ್ಷ ಅನ್ನದಾನೇಶ್ವರ ನಾಡಗೌಡರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ ವಿಷಯ ಪ್ರತಿಧ್ವನಿಸಿತು.

    ಪಟ್ಟಣದ ಮದ್ಯ ಮಾರಾಟ ಮಳಿಗೆಗಳಲ್ಲಿ ನಿಯಮ ಉಲ್ಲಂಸಿ ರಾತ್ರಿ 11 ಗಂಟೆಯವರೆಗೆ ವಹಿವಾಟು ನಡೆಯುತ್ತದೆ. ಪಟ್ಟಣದ ಪ್ರಮುಖ ಧಾಬಾ ಮತ್ತು ಹೋಟೆಲ್‌ಗಳಲ್ಲಿ ಮದ್ಯ ಸರಬರಾಜು ಆಗುತ್ತಿದ್ದರೂ ಕೇಳುತ್ತಿಲ್ಲ. ಇದ್ದಕ್ಕೇನು ಕ್ರಮ ತೆಗೆದುಕೊಂಡಿದ್ದೀರಿ ಎಂದಾಗ ಅಬಕಾರಿ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ನಾವು ಹೋದಾಗ ಇರುವುದಿಲ್ಲವೆಂದರು. ಇದಕ್ಕೆ ಸದಸ್ಯ ಚಂದಪ್ಪ ಮಾದರ ಉತ್ತರಿಸಿ, ಸಂಗಮ ಕ್ರಾಸ್‌ನಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ ಎಂದಾಗ ಶೀಘ್ರದಲ್ಲಿಯೇ ಕ್ರಮ ತಗೆದುಕೊಳ್ಳುತ್ತೇನೆ ಎಂದು ಅಬಕಾರಿ ಅಧಿಕಾರಿ ತಿಳಿಸಿದರು.

    ಪ್ರತಿಯೊಂದು ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಕೊಳಚೆ ಪ್ರದೇಶ ಮತ್ತು ಗ್ರಾಮದ ಪ್ರಮುಖ ಚರಂಡಿಗಳನ್ನು ಶುಚಿಗೊಳಿಸಿ ಮಿಲಾತಿ ಪೌಡರ್ ಸಿಂಪಡಿಸಿ ಎಂದು ಕಳೆದ ಸಾಮಾನ್ಯ ಸಭೆಯಲ್ಲಿ ಹೇಳಿದ್ದರೂ ಇಲ್ಲಿಯವರೆಗೆ ಯಾವುದೇ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ಡಾ.ಪ್ರಶಾಂತ ತುಂಬಗಿ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

    ಶಿಕ್ಷಣ ಇಲಾಖೆ ಅಧಿಕಾರಿ ಐ.ಎಚ್. ಅಂಗಡಿ ಸಭೆಗೆ ಮಾಹಿತಿ ನೀಡಿದಾಗ ಅಮೀನಪ್ಪ ಸಂದಿಗವಾಡ ಮಾತನಾಡಿ, ಮರಳಿ ಶಾಲೆ ಆರಂಭಗೊಳ್ಳುವ ಮುನ್ನವೇ ಶಾಲೆ ಕಟ್ಟಡಗಳನ್ನು ದುರಸ್ತಿಗೊಳಿಸಬೇಕು. ಸಂಪೂರ್ಣ ಶಿಥಿಲಗೊಂಡ ಶಾಲೆ ಕಟ್ಟಡಗಳ ಮರು ನಿರ್ಮಾಣಕ್ಕೆ ಆದ್ಯತೆ ನೀಡಿ ಎಂದರು.

    ಕೃಷಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ವರದಿ ನೀಡಿದರು. ಇಒ ಎಂ.ಎಂ. ತುಂಬರಮಟ್ಟಿ, ಉಪಾಧ್ಯಕ್ಷೆ ಉಮಾದೇವಿ ಗೌಡರ, ಸದಸ್ಯರಾದ ಶೋಭಾ ಭದ್ರಣ್ಣವರ, ಸಹನಾ ಗದ್ದಿ, ಲತಾ ಕಾಶಪ್ಪನವರ, ರಾಚಮ್ಮ ಬಡ್ಡಿ, ಯಲ್ಲಕ್ಕ ಯರಝೇರಿ ಇತರರು ಇದ್ದರು.

    ಸಭೆಗೆ ಗೈರಾದವರ ವಿರುದ್ಧ ಕ್ರಮ
    ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಗೆ ಗೈರಾದ ಕೆಇಬಿ, ಲೋಕೋಪಯೋಗಿ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts