More

    ಜಿಲ್ಲೆಯ ಪರ ಧ್ವನಿ ಆಗಲಿದ್ದಾರೆ

    ಹುನಗುಂದ, ಸಚಿವ ಶಿವಾನಂದ ಪಾಟೀಲ ಭರವಸೆ, ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆ, ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ,

    ಹುನಗುಂದ: ಬಾಗಲಕೋಟೆ ಹಾಗೂ ವಿಜಯಪುರ ಕ್ಷೇತ್ರದಿಂದ ಲೋಕಸಭೆಯಲ್ಲಿ ಸತತ ನಾಲ್ಕೈದು ಬಾರಿ ಬಿಜೆಪಿಯವರು ಸಂಸದರಾಗಿ ಆಯ್ಕೆಯಾದರೂ ಒಂದು ಸಲವೂ ಕ್ಷೇತ್ರದಲ್ಲಿ ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ನಿರ್ಮಾಣ, ಯುಕೆಪಿಯಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಲಿಲ್ಲ ಎಂದು ಪಿ.ಸಿ. ಗದ್ದಿಗೌಡರ ಮತ್ತು ರಮೇಶ ಜಿಗಜಿಣಗಿ ವಿರುದ್ಧ ಸಚಿವ ಶಿವಾನಂದ ಪಾಟೀಲ ಹರಿಹಾಯ್ದರು.

    ಪಟ್ಟಣದ ಬಸವ ಮಂಟಪದಲ್ಲಿ ಮಂಗಳವಾರ ಹುನಗುಂದ-ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.

    ಸಂಸದ ಪಿ.ಸಿ. ಗದ್ದಿಗೌಡರ ಕಳೆದ ಸಲ ಬಾಗಲಕೋಟೆ-ಕುಡಚಿ ರೈಲು ಕಾಮಗಾರಿ ಪೂರ್ಣಗೊಳಿಸುತ್ತೇನೆ ಎಂದು ಸುಳ್ಳು ಹೇಳಿ ಜನರಿಂದ ಮತ ಪಡೆದಿದ್ದರು. ಆದರೆ, ಅದು 36 ಕಿಮೀ ಮಾತ್ರ ನಿರ್ಮಾಣವಾಗಿದೆ. ಇನ್ನೂ 103 ಕಿ.ಮೀ. ಉಳಿದಿದೆ. ರೈಲ್ವೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಗುರಿ, ಜಿಲ್ಲೆಯ ಪರ ಧ್ವನಿ ಎತ್ತುವ ಕೆಲಸವನ್ನು ಸಂಯುಕ್ತಗೆ ಮಾಡಲು ವಿನಂತಿಸುತ್ತೇನೆ ಎಂದರು.

    ಬಡ ಕುಟುಂಬಗಳಿಗೆ ನೆರವಾಗಲು ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ರಾಜ್ಯ ದಿವಾಳಿ ಆಗಲಿದೆ ಎಂದು ಬಿಜೆಪಿ ಮುಖಂಡರು ಟೀಕಿಸುತ್ತಿದ್ದಾರೆ. ಬಡವರ ಕಷ್ಟ ಏನು ಎಂಬ ಅರಿವು ಬಿಜೆಪಿ ನಾಯಕರಿಗಿಲ್ಲ ಎಂದು ಹೇಳಿದರು.

    ಸುಳ್ಳನ್ನೇ ಹೇಳಿ ಮೋದಿ 10 ವರ್ಷ ಅಧಿಕಾರ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಕರ್ನಾಟಕ ಕಟ್ಟುತ್ತಿದೆ. ರೈತರಿಗೆ ಬರ ಪರಿಸ್ಥಿತಿಯಲ್ಲಿ ಪರಿಹಾರ ನೀಡಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರಲ್ಲದೆ, ಸಂಯುಕ್ತ ಪಾಟೀಲರ ಗೆಲುವಿಗೆ ಒಂದು ಅವಕಾಶ ನೀಡಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು. ವಿಜಯಪುರ-ಬಾಗಲಕೋಟೆಯಲ್ಲಿ ಹೊಸ ಅಲೆ ಬೀಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ 18-20 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ಪ್ರಧಾನಿ ಮೋದಿ ಜನರ ಹಿತ ಮತ್ತು ದೇಶ ರಕ್ಷಣೆ ಕಾಪಾಡಲು ವಿಲರಾಗಿದ್ದಾರೆ. ಅಧಿಕಾರಕ್ಕಾಗಿ ಸೈನಿಕರು, ರಾಮನನ್ನು ಬಳಸಿಕೊಂಡಿದ್ದಾರೆ. ಅಧಿಕಾರದ ಲಾಲಸೆಗಾಗಿ ಊರಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಧರ್ಮವನ್ನು ರಾಜಕೀಯಕ್ಕೆ ಉಪಯೋಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನ ನೀಡಿದೆ. ಸಂಯುಕ್ತ ಪಾಟೀಲ ಅವರು ಸಂಸತ್ತಿಗೆ ಹೋಗಲು ಅರ್ಹ ಅಭ್ಯರ್ಥಿಯಾಗಿದ್ದು, ಅವರನ್ನು ಆಯ್ಕೆ ಮಾಡಬೇಕು ಎಂದರು.

    ಲೋಕಸಭೆ ಅಭ್ಯರ್ಥಿ ಸಂಯುಕ್ತ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕರಾದ ಜೆ.ಟಿ. ಪಾಟೀಲ, ಭೀಮಸೇನ್ ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಮುಖಂಡ ಸಿದ್ದು ಕೊಣ್ಣೂರ, ಎಂ.ಬಿ. ಸೌದಾಗರ, ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿದರು. ಹುನಗುಂದ ಬ್ಲಾಕ್ ಅಧ್ಯಕ್ಷ ಗಂಗಾಧರ ದೊಡಮನಿ, ಇಳಕಲ್ಲ ಬ್ಲಾಕ್ ಅಧ್ಯಕ್ಷ ರಜಾಕ ತಟಗಾರ, ನಿಸಾರ ಅಹ್ಮದಖಾಜಿ, ಜಿಪಂ ಮಾಜಿ ಅಧ್ಯಕ್ಷ ಬಾಯಕ್ಕ ಮೇಟಿ, ರವೀಂದ್ರ ಕಲಬುರ್ಗಿ, ಶಿವಕುಮಾರ ತಳಂಪಳ್ಳಿ, ಅಮರೇಶ ನಾಗೂರ ಮತ್ತಿತರರಿದ್ದರು.

    ನಿಮ್ಮಪ್ಪನ ಮನೆ ಗಂಟು ಹೋಗ್ತಿತ್ತಾ ?

    ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, 20 ವರ್ಷ ಸಂಸದರಾದ ಪಿ.ಸಿ. ಗದ್ದಿಗೌಡರ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಇನ್ನು ಹುನಗುಂದ ಮತಕ್ಷೇತ್ರಕ್ಕೆ ಕೊಡುಗೆ ಏನಿದೆ?. ಪಕ್ಕದ ಕುಷ್ಟಗಿ-ಮುದಗಲ್ಲವರೆಗೆ ರೈಲು ಹಳಿ ಬಂದಿದೆ. ಕುಡಚಿ-ರಾಯಚೂರು, ಆಲಮಟ್ಟಿ-ಹೊಸಪೇಟೆ, ರೈಲು ಹಳಿ ಮಾಡಿಸಿದ್ರೆ ನಿಮ್ಮಪ್ಪನ ಮನೆ ಗಂಟು ಹೋಗ್ತಿತ್ತಾ ಎಂದು ಸಂಸದ ಗದ್ದಿಗೌಡರನ್ನು ಪ್ರಶ್ನಿಸಿದರು.

    ದಂಪತಿ ನಿರ್ಧಾರ ಒಂದೇ

    ಶಾಸಕ ಕಾಶಪ್ಪನವರ ನಿರ್ಧಾರವೇ ವೀಣಾ ಕಾಶಪ್ಪನವರ ನಿರ್ಧಾರ. ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಬೇಡ ಎಂದು ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಹೇಳಿದರು.

    ವೀಣಾ ಕಾಶಪ್ಪನವರ ಸೇರಿದಂತೆ ಹಲವರು ಟಿಕೆಟ್‌ಗೆ ಪ್ರಯತ್ನ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಟಿಕೆಟ್ ಕೇಳುವ ಯೋಗ್ಯತೆ ಇದೆ. ಅದರೆ ಪಕ್ಷ ಒಂದು ಬಾರಿ ನಿರ್ಣಯ ಕೈಗೊಂಡ ಮೇಲೆ ಎಲ್ಲರೂ ಬದ್ಧರಾಗಬೇಕು. ಈ ವಿಚಾರಲ್ಲಿ ವಿಜಯಾನಂದ ಕಾಶಪ್ಪನವರ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೆ ಮತ್ತೆ ಗೊಂದಲ ಸೃಷ್ಟಿಮಾಡುವ ಪ್ರಯತ್ನ ಬೇಡ ಎಂದರು. ವಿಜಯಾನಂದ ಕಾಶಪ್ಪನವರ ಮತ್ತು ವೀಣಾ ಕಾಶಪ್ಪನವರ ಇಬ್ಬರೂ ಒಟ್ಟಿಗೆ ಪ್ರಚಾರದಲ್ಲಿ ಭಾಗಿಯಾಗಿ ಸಂಯುಕ್ತ ಪಾಟೀಲ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ. ಅನಾರೋಗ್ಯದ ಕಾರಣ ವೀಣಾ ಕಾಶಪ್ಪನವರ ಇಂದಿನ ಸಭೆಗೆ ಬಂದಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಪ್ರಯತ್ನ ಮಾಡಬೇಡಿ. ಪತಿ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದರು.

    ಸಂಯುಕ್ತ ಪಾಟೀಲ ಹುನಗುಂದದ ಮಗಳು. ಈ ಚುನಾವಣೆಯಲ್ಲಿ ಅವರಿಗೆ ಹುನಗುಂದ ಕ್ಷೇತ್ರದಲ್ಲಿ 40 ಸಾವಿರ ಮತಗಳ ಮುನ್ನಡೆ ಕೊಡಿಸುತ್ತೇವೆ. ಬಸವಣ್ಣನ ನಾಡಿನಲ್ಲಿ ಹುಟ್ಟಿದವರು ನಾವು. ನುಡಿದಂತೆ ನಡೆಯುತ್ತೇವೆ.
    ವಿಜಯಾನಂದ ಕಾಶಪ್ಪನವರ, ಶಾಸಕ, ಅಧ್ಯಕ್ಷರು , ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
    ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕೆಲವರು ಲಘುವಾಗಿ ಮಾತನಾಡುತ್ತಿದ್ದಾರೆ. ಬಡವರ ಆಸರೆಗೆ ರೂಪಿಸಿರುವ ಯೋಜನೆಗಳ ಬಗ್ಗೆ ಕೀಳು ಮಟ್ಟದ ಟೀಕೆ ಮಾಡುತ್ತಿರುವವರಿಗೆ ಮಹಿಳೆಯರು ಮತದಾನದ ಮೂಲಕ ಉತ್ತರ ಕೊಡಬೇಕು.
    ಸಂಯುಕ್ತ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts