More

    ಕರೊನೋತ್ತರ ಜಂಬೂಸವಾರಿ: ಈ ಸಲ ಬರೋಬ್ಬರಿ ಜನಸಾಗರ..

    ಮೈಸೂರು: ಕಳೆದೆರೆಡು ವರ್ಷ ಕರೊನಾ ಸೋಂಕಿನ ಕಾರಣ ಜಂಬೂಸವಾರಿ ಅರಮನೆಗೆ ಸೀಮಿತವಾಗಿತ್ತು. ಈ ಬಾರಿ ಸೋಂಕು ಇಳಿಕೆ ಆಗಿರುವ ಕಾರಣ ಅದ್ಧೂರಿ ಆಚರಣೆ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ರಾಜಮಾರ್ಗದ ಇಕ್ಕೆಲದ ಫುಟ್‌ಪಾತ್, ಕಟ್ಟಡ, ಮರಗಳ ಮೇಲೇರಿ ಮೆರವಣಿಗೆ ವೀಕ್ಷಿಸಿದರು. ಇದಕ್ಕಾಗಿ ಬೆಳಗ್ಗೆಯಿಂದಲೇ ಗ್ರಾಮಾಂತರ ಪ್ರದೇಶ, ನಗರದ ವಿವಿಧ ಬಡಾವಣೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಆಯುರ್ವೇದ ಕಾಲೇಜು ಸರ್ಕಲ್, ಬಂಬೂಬಜಾರ್ ಸೇರಿದಂತೆ ಜಂಬೂಸವಾರಿ ಸಾಗುವ ಮಾರ್ಗಗಳಲ್ಲಿ ಜಮಾಯಿಸಿದರು.

    ಬೆಳಗ್ಗೆ 10 ಗಂಟೆಗೂ ಮೊದಲೇ ಪೊಲೀಸರು ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಗಳಿಗೆ ಬ್ಯಾರಿಕೇಡ್ ಕಟ್ಟಿ ವಾಹನ ಸಂಚಾರ ನಿಯಂತ್ರಿಸಿದರು. ಕಳೆದೆರೆಡು ವರ್ಷ ದಸರಾ ವಿಜಯದಶಮಿ ಮೆರವಣಿಗೆ ನಡೆಯದ ಕಾರಣ ನಿರಾಸೆಗೊಂಡಿದ್ದ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳ ಪ್ರವಾಸಿಗರು ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸಿದ್ದರು. ಹೀಗಾಗಿ ನಗರದ ಎಲ್ಲ ಲಾಡ್ಜ್ ಮೊದಲಾದ ವಸತಿ ಸೌಲಭ್ಯದ ಛತ್ರ ಇನ್ನಿತರ ವಸತಿ ಗೃಹಗಳು ತಿಂಗಳುಗಳ ಹಿಂದೆಯೇ ಕಾಯ್ದಿರಿಸಿಕೊಂಡಿದ್ದವು.

    ಗಮನ ಸೆಳೆದ ಕುಸುರೆ ಕೇಂದ್ರಗಳು: ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕೆ.ಆರ್.ವೃತ್ತ, ಕೆ.ಆರ್.ಆಸ್ಪತ್ರೆ ವೃತ್ತ ಮೊದಲಾದ ಕಡೆಗಳಲ್ಲಿ ಆನೆಗಳಿಗೆ ದಣಿವಾರಿಸಿಕೊಂಡು, ಶಕ್ತಿ ವರ್ಧಿಸಿಕೊಳ್ಳಲು ತೆರೆದಿದ್ದ ಕುಸುರೆ ಕೇಂದ್ರಗಳು ಎಲ್ಲರ ಗಮನ ಸೆಳೆದವು. ಇಲ್ಲೆಲ್ಲ ಗ್ಲೂಕೋಸ್, ಸಕ್ಕರೆ ಪುಡಿ, ಬೇಯಿಸಿದ ಧಾನ್ಯ, ಬೆಣ್ಣೆಗಳನ್ನು ಹದವಾಗಿ ಬೆರೆಸಿ ಉಂಡೆ ಮಾಡಿ ಭತ್ತದ ಹುಲ್ಲಿನಲ್ಲಿ ಸುತ್ತಿ, ಆನೆಗಳಿಗೆ ತಿನ್ನಿಸಲಾಯಿತು. ಸತತವಾಗಿ ಬಹಳಷ್ಟು ದೂರ ಮೆರವಣಿಗೆಯಲ್ಲಿ ಆನೆಗಳು ಸಾಗಬೇಕಾದ ಹಿನ್ನೆಲೆಯಲ್ಲಿ ಈ ವೇಳೆ ಸ್ವಲ್ಪ ಹೊತ್ತು ದಣಿವಾರಿಸಿಕೊಳ್ಳುವುದರ ಜತೆಗೆ ಶಕ್ತಿ ವರ್ಧಿಸಿಕೊಳ್ಳಲು ನೆರವಾಗುವುದು ಈ ಕುಸುರೆ ಕೇಂದ್ರಗಳ ಸ್ಥಾಪನೆ ಉದ್ದೇಶವಾಗಿದೆ.

    ಅರಮನೆ ಪ್ರವೇಶಕ್ಕೆ ಮುಗಿಬಿದ್ದರು: ಜಂಬೂಸವಾರಿ ವೀಕ್ಷಣೆಗೆ ಅರಮನೆಗೆ ತೆರಳಲು ಜಯ ಮಾರ್ತಾಂಡ, ಬ್ರಹ್ಮಪುರಿ ದ್ವಾರದ ಬಳಿ ಸರದಿ ಸಾಲಿನಲ್ಲಿ ನಿಂತಿದ್ದವರು ಒಮ್ಮೆಲೇ ಅರಮನೆ ಪ್ರವೇಶಿಸಲು ಮುಗಿಬಿದ್ದ ಕಾರಣ ಕೊಂಚ ಸಮಯ ಅಲ್ಲಿ ಗೊಂದಲ ಉಂಟಾಯಿತು. ಈ ವೇಳೆ ಇವರನ್ನು ನಿಭಾಯಿಸಲು ಪೊಲೀಸರು ಸಾಕಷ್ಟು ಶ್ರಮ ಪಡಬೇಕಾಯಿತು. ಇದರಿಂದಾಗಿ ಅರಮನೆ ಪ್ರವೇಶಿಸಲು ಕಾದಿದ್ದ ಜಾನಪದ ಕಲಾವಿದರು ಅರಮನೆ ಪ್ರವೇಶಿಸಲು ಪರದಾಡಬೇಕಾಯಿತು.

    ಇನ್ನು, ಜಯ ಮಾರ್ತಾಂಡ ದ್ವಾರದ ಬಳಿ ಬೆಳಗ್ಗೆಯಿಂದಲೇ ಒಳ ಪ್ರವೇಶಿಸಲು ಸಾವಿರಾರು ಮಂದಿ ಕಾದು ನಿಂತಿದ್ದರು. ಈ ವೇಳೆ ಪೊಲೀಸರು ಹಾಗೂ ಜನರ ನಡುವೆ ಸಾಕಷ್ಟು ವಾಗ್ವಾದಗಳೂ ನಡೆದವು. ಕಲಾವಿದರು ಜಯ ಮಾರ್ತಾಂಡಾ ದ್ವಾರದಿಂದ ಒಳ ಪ್ರವೇಶಿಸುವುದನ್ನು ತಿಳಿದು ಅವರೊಡನೆಯೇ ಒಳ ನುಸುಳಲು ನೂರಾರು ಮಂದಿ ಯತ್ನಿಸಿದ್ದರಿಂದಾಗಿ ಈ ಗೊಂದಲ ಸೃಷ್ಟಿ ಆಯಿತು. ಬ್ರಹ್ಮಪುರಿ ದ್ವಾರದ ಬಳಿಯೂ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು. ಎಲ್ಲರ ಪಾಸ್‌ಗಳನ್ನು ಪರಿಶೀಲಿಸಿ ಒಳಬಿಡುತ್ತಿದ್ದರಿಂದ ಸಾಕಷ್ಟು ತಡವಾಯಿತು.

    ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts