More

    ಹುಬ್ಬಳ್ಳಿ ಯುಗಾದಿ ‘ನವ ಮನ್ವಂತರಕ್ಕೆ ನಾಂದಿ’

    ಹುಬ್ಬಳ್ಳಿ ಯುಗಾದಿ ‘ನವ ಮನ್ವಂತರಕ್ಕೆ ನಾಂದಿ’

    ಹುಬ್ಬಳ್ಳಿ: ಮೊಬೈಲ್ ಫೋನ್, ಟಿವಿ ಹಾವಳಿ ಹಾಗೂ ಒತ್ತಡದ ಜೀವನದಿಂದಾಗಿ ಹಬ್ಬಗಳ ಸಾಂಪ್ರದಾಯಿಕ ಆಚರಣೆ ಮತ್ತು ಗ್ರಾಮೀಣ ಕ್ರೀಡೆಗಳನ್ನು ಮರೆತಿದ್ದೇವೆ. ಇವೆಲ್ಲವನ್ನು ನೆನಪಿಸುವ ಜತೆಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಹುಬ್ಬಳ್ಳಿ ಯುಗಾದಿ ಉತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್ ಹೇಳಿದರು.

    ಎಸ್.ಎಸ್. ಶೆಟ್ಟರ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ನ್ಯೂಸ್ ವತಿಯಿಂದ ಇಲ್ಲಿಯ ವಿದ್ಯಾನಗರದ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಹುಬ್ಬಳ್ಳಿ ಯುಗಾದಿ ಉತ್ಸವ’ಕ್ಕೆ ದೀಪ ಹಚ್ಚಿ, ಜಾಗಟೆ ಬಾರಿಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.

    ಹಿಂದು ಸಂಪ್ರದಾಯದಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಕ್ಯಾಲೆಂಡರ್ ಪ್ರಕಾರ ಜನವರಿ 1 ಹೊಸ ವರ್ಷದ ಮೊದಲ ದಿನ. ಆದರೆ, ಹಿಂದು ಸಂಪ್ರದಾಯದಲ್ಲಿ ಯುಗಾದಿಯಿಂದ ಹೊಸ ವರ್ಷ ಆರಂಭಗೊಳ್ಳುತ್ತದೆ. ಈ ದಿನದಂದು ಪ್ರಕೃತಿಯಲ್ಲಿ ಹೊಸ ಬದಲಾವಣೆಗಳು ಕಾಣಿಸುತ್ತವೆ ಎಂದು ತಿಳಿಸಿದರು.

    ಇಲ್ಲಿನ ಟೆಂಡರ್ ಶ್ಯೂರ್ ರಸ್ತೆ ಹುಬ್ಬಳ್ಳಿಯ ಕೀರ್ತಿ ಹೆಚ್ಚಿಸಿದೆ. ನಾನು ಪ್ರತಿಪಕ್ಷ ನಾಯಕನಿದ್ದಾಗ ಈ ರಸ್ತೆ ನಿರ್ವಣಗೊಂಡಿದೆ. ಬೆಂಗಳೂರಿನ ಎಂಜಿ ರೋಡ್​ನಂತೆ ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆ ಪ್ರಾಮುಖ್ಯತೆ ಗಳಿಸಿದೆ. ಈ ರಸ್ತೆ ಇಕ್ಕೆಲಗಳಲ್ಲಿ ವಾಣಿಜ್ಯ ಸಂಕೀರ್ಣಗಳು ನಿರ್ವಣಗೊಂಡಿವೆ. ಇಡೀ ಉತ್ತರ ಕರ್ನಾಟಕದಲ್ಲಿಯೇ ಇದೊಂದು ಮಾದರಿ ರಸ್ತೆಯಾಗಿದೆ ಎಂದು ಹೇಳಿದರು.

    2 ಕಿಮೀ ಉದ್ದದ ಈ ರಸ್ತೆಯನ್ನು ಅಂದಾಜು 45 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಮೂಲ ಸೌಲಭ್ಯಗಳನ್ನು ರಸ್ತೆ ಪಕ್ಕದಲ್ಲಿ ಭೂಗತಗೊಳಿಸಲಾಗಿದೆ. ಇದರಿಂದಾಗಿ ದುರಸ್ತಿ ಸಂದರ್ಭದಲ್ಲಿ ರಸ್ತೆ ಅಗೆಯುವ ಅನಿವಾರ್ಯತೆ ಬರುವುದಿಲ್ಲ ಎಂದರು.

    ಯುಗಾದಿ ಹಬ್ಬದ ಕುರಿತು ಪ್ರವಚನ ನೀಡಿದ ವಿಶ್ವಭಾರತೀ ವೇದಪೀಠದ ಅಧ್ಯಕ್ಷ ಡಾ. ಕಂಠಪಲ್ಲೀ ಸಮೀರಣಾಚಾರ್ಯ, ಮುಂಚಿತವಾಗಿಯೇ ಹಬ್ಬ ಆಚರಿಸಿದ್ದರಿಂದ ಹುಬ್ಬಳ್ಳಿ ಜನರು ಯುಗಾದಿಯನ್ನು ಎರಡು ಬಾರಿ ಆಚರಿಸಿದಂತಾಗಿದೆ. ದೇವರು ಸೃಷ್ಟಿಸಿದ ಮೊದಲ ದಿನವೇ ಯುಗಾದಿ ಎನಿಸಿದೆ ಎಂದು ಹೇಳಿದರು.

    ಸರಳತೆ, ಸನ್ನಡತೆ ಹೊಂದಿರುವ ಜಗದೀಶ ಶೆಟ್ಟರ್ ಅವರು ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯುವಂತಾಗಲಿ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು ಎಂದು ಬಣ್ಣಿಸಿದರು.

    ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಸಂಸ್ಕೃತಿ, ಪರಂಪರೆ, ಧರ್ಮ, ಯೋಗಕ್ಕೆ ಭಾರತ ವಿಶ್ವದಲ್ಲಿಯೇ ಪ್ರಾಮುಖ್ಯತೆ ಪಡೆದಿದೆ. ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸಿ, ಜೀವನ ನಡೆಸಬೇಕು ಎಂಬ ಅರ್ಥ ವರ್ಷದ ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುವುದರಲ್ಲಿ ಅಡಗಿದೆ ಎಂದು ತಿಳಿಸಿದರು.

    ಐಐಟಿ, ಸ್ಮಾರ್ಟ್​ಸಿಟಿ, ಬಿಆರ್​ಟಿಎಸ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಧಾರವಾಡ ಜಿಲ್ಲೆಗೆ ತರುವಲ್ಲಿ ಜಗದೀಶ ಶೆಟ್ಟರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಕೆಎಸ್​ಡಿಎಲ್ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ವಿಆರ್​ಎಲ್ ಮೀಡಿಯಾ ಪ್ರೖೆವೇಟ್ ಲಿಮಿಟೆಡ್​ನ ವೈಸ್ ಪ್ರೆಸಿಡೆಂಟ್ ಅರುಣ ಕರಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಶಿಲ್ಪಾ ಜಗದೀಶ ಶೆಟ್ಟರ್, ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ರೂಪಾ ಶೆಟ್ಟಿ, ಮೀನಾಕ್ಷಿ ಒಂಟಮೂರಿ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಲಿಂಗರಾಜ ಪಾಟೀಲ, ಈಶ್ವರಗೌಡ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.

    ವಿಜಯವಾಣಿ ಪತ್ರಿಕೆ ಸ್ಥಾನಿಕ ಸಂಪಾದಕ ಪ್ರಕಾಶ ಶೆಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಹೂಗಾರ ಹಾಗೂ ಪರಮ ನಿರೂಪಿಸಿದರು. ಜಿ.ಟಿ. ಹೆಗಡೆ ವಂದಿಸಿದರು.

    ಪುರವಣಿ ಬಿಡುಗಡೆ: ‘ಹುಬ್ಬಳ್ಳಿ ಯುಗಾದಿ ಉತ್ಸವ’ದ ಅಂಗವಾಗಿ ‘ವಿಜಯವಾಣಿ’ ಪ್ರಕಟಿಸಿದ್ದ ‘ಸಜ್ಜನ ಸಾಧಕ ಶೆಟ್ಟರ್’ ಪುರವಣಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಸೇರಿದಂತೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ಸಂದರ್ಭದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ವಿವರ ಹೊಂದಿರುವ ಈ ಪುರವಣಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts