ಹುಬ್ಬಳ್ಳಿ: ಹುಬ್ಬಳ್ಳಿಯ ಖ್ಯಾತ ಉದ್ಯಮಿಯೊಬ್ಬರ ಪುತ್ರನ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಉದ್ಯಮಿಯ ತೋಟದ ಮನೆಯಲ್ಲೇ ಮಗನ ಶವ ಪತ್ತೆಯಾಗಿದೆ. ‘ಮಗ ನಾಪತ್ತೆಯಾಗಿದ್ದಾನೆ. ದಯವಿಟ್ಟು ಆತನನ್ನು ಹುಡುಕಿಕೊಡಿ’ ಎಂದು ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಮಾಡಿದ್ದ ತಂದೆಯೇ ಇಡೀ ಪ್ರಕರಣ ರೂವಾರಿ ಎಂಬ ಆಘಾತಕಾರಿ ರಹಸ್ಯ ಬಯಲಾಗಿದೆ.
ಉದ್ಯಮಿ ಭರತ್ ಜೈನ್ರ ಪುತ್ರ ಅಖಿಲ್ ಜೈನ್(30) ಮೃತ ದುರ್ದೈವಿ. ಅಖಿಲ್ ಕಾಣೆಯಾಗಿದ್ದಾನೆ ಎಂದು ಡಿ.3ರಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಸಹೋದರ ದೂರು ನೀಡಿದ್ದರು. ಮಗ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ತಂದೆ ಭರತ ಜೈನ್ ಹೈಡ್ರಾಮ ಮಾಡಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ತಂದೆ ಮೇಲೆಯೇ ಅನುಮಾನ ಮೂಡಿತ್ತು.
ಭರತ್ ಜೈನ್ರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಮಗನ ಹತ್ಯೆಗೆ ಸ್ಥಳೀಯ ಹಂತಕರಿಗೆ ಸುಪಾರಿ ನೀಡಿದ್ದಾಗಿ ತಂದೆ ಬಾಯ್ಬಿಟ್ಟಿದ್ದಾರೆ. ಇವರ ಹೇಳಿಕೆ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಬ್ಬಳ್ಳಿ ತಾಲೂಕಿನ ದೇವರಗಿಡಿಹಾಳ ಗ್ರಾಮದಲ್ಲಿ ಭರತ್ ಜೈನ್ಗೆ ಸೇರಿದ ತೋಟದ ಮನೆಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಗನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಏಕೆ ಎಂಬ ಕಾರಣ ಇನ್ನೂ ಗೊತ್ತಾಗಿಲ್ಲ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಕೇಶ್ವಾಪುರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ರಸ್ತೆ ತಿರುವಿನಲ್ಲಿ ಲಗೇಜ್ ಆಟೋ ಪಲ್ಟಿ: ಮಂಡ್ಯ ಮೂಲದ ಮೂವರು ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ
ಕಲಬುರಗಿ ಕಮಿಷನರ್ ಮತ್ತು ಪತ್ನಿ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ದೂರು, ಎಫ್ಐಆರ್ ದಾಖಲು