More

    ಯಂಗ್ ಇಂಡಿಯನ್ಸ್‌ನಿಂದ ಸೇವಾ ಕಾರ್ಯ

    ಹುಬ್ಬಳ್ಳಿ: ಯುವ ನಾಯಕತ್ವ ಬೆಳೆಸಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಪರಿಣಾಮಕಾರಿ ಯೋಜನೆ, ಚಟುವಟಿಕೆಗಳ ಮೂಲಕ ಯಂಗ್ ಇಂಡಿಯನ್ಸ್ (ವೈಐ) ದೇಶದ ಪ್ರಮುಖ ಸಂಘಟನೆಯಾಗಿ ಬೆಳೆಯುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 2002ರಲ್ಲಿ ಆರಂಭವಾದ ವೈಐ ಸದ್ಯ 66 ಶಾಖೆಗಳಲ್ಲಿ 6,632 ನೇರ ಸದಸ್ಯರು, 1 ಲಕ್ಷ ಯುವ ಸದಸ್ಯರು (16ರಿಂದ 21 ವಯಸ್ಸು) 13 ಲಕ್ಷ ಥಾಲಿರ್ ಸದಸ್ಯರು (ಶಾಲೆ ಮಕ್ಕಳು) ಇದ್ದಾರೆ. ವೈಐ ಹುಬ್ಬಳ್ಳಿಯಲ್ಲಿ 2019ರಲ್ಲಿ ಕಾರ್ಯಚಟುವಟಿಕೆ ಆರಂಭಿಸಿದೆ ಎಂದರು.
    2019ರಲ್ಲಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಸುರಕ್ಷಿತ ಸ್ಪರ್ಶ, ಅಸುರಕ್ಷಿತ ಸ್ಪರ್ಶ ಕುರಿತು ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಶಿಬಿರದಲ್ಲಿ 3,600 ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಸದ್ಯ ಡಾ. ದೀಪ್ತಿ ಜೋಶಿ, ಡಾ. ಸಹನಾ ನಾಯಕ, ಜಯಶ್ರೀ ಅಗರವಾಲ್ ಮತ್ತಿತರರ ತಂಡ ಹು-ಧಾ ನಗರದ ವಿವಿಧ ಶಾಲೆಗಳಲ್ಲಿ ಜಾಗೃತಿ ಶಿಬಿರ ಆಯೋಜಿಸಿ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುತ್ತಿದೆ ಎಂದರು.
    ಉಣಕಲ್ಲ ಕೆರೆ ಬಳಿ ಹು-ಧಾ ಪಾಲಿಕೆಯ 2 ಎಕರೆ ಜಾಗದಲ್ಲಿ ಹು-ಧಾ ಸ್ಮಾರ್ಟ್ ಸಿಟಿ ಮತ್ತು ಸ್ವರ್ಣ ಗ್ರೂಪ್ ಸಹಭಾಗಿತ್ವದಲ್ಲಿ ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ಜಪಾನೀಸ್ ತಂತ್ರಜ್ಞಾನ ಆಧಾರಿತ ‘ಮಿಯಾವಾಕಿ’ ಅರಣ್ಯ ಪ್ರದೇಶ ನಿರ್ಮಿಸಲು ಅ. 2ರಂದು ಕಾರ್ಯ ಆರಂಭಿಸಲಾಗಿದೆ. ಇದರಿಂದ ವಾಯು, ಶಬ್ದ ಮಾಲಿನ್ಯ ತಡೆಗಟ್ಟಿ ಆಮ್ಲಜನಕ ಪ್ರಮಾಣ ಹೆಚ್ಚಿಸುವ ಉದ್ದೇಶವಿದೆ ಎಂದರು.
    ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಸ್ವರ್ಣ ಗ್ರೂಪ್ ಸಹಭಾಗಿತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಅಂಧ ಪ್ರಯಾಣಿಕರ ಅನುಕೂಲಕ್ಕಾಗಿ ಬ್ರೈಲ್ ಲಿಪಿ ಅಳವಡಿಸಲಾಗಿದೆ. ಇದನ್ನು ಶೀಘ್ರ ಲೋಕಾರ್ಪಣೆ ಮಾಡಲಾಗುವುದು. ವೈಐನ 5ನೇ ವಾರ್ಷಿಕೋತ್ಸವದಲ್ಲಿ ಸ್ಥಳೀಯ ಘಟಕದ ನಿರ್ಗಮಿತ ಅಧ್ಯಕ್ಷ ಕರಣ ಅಗರವಾಲ್ ಅವರು ನೂತನ ಅಧ್ಯಕ್ಷ ಡಾ. ನಾಗರಾಜ ನಾಯಕ ಅವರಿಗೆ ಅಧಿಕಾರ ಹಸ್ತಾಂತರಿಸಿದರು ಎಂದು ಡಾ. ಶ್ರೀನಿವಾಸ ಜೋಶಿ ಹೇಳಿದರು.
    ಗೋಷ್ಠಿಯಲ್ಲಿ ವಿಶಾಲ ಅಗರವಾಲ್, ನಾಗರಾಜ ನಾಯಕ, ಕರಣ ಅಗರವಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts