More

    ಹುಬ್ಬಳ್ಳಿ ಕಿಮ್ಸ್ ಗ್ರಂಥಾಲಯ ಶಾಖೆ ಬಂದ್

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆ ಆವರಣದಲ್ಲಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಗರ ಕೇಂದ್ರ ಗ್ರಂಥಾಲಯ ಶಾಖೆ 2023ರ ಫೆಬ್ರವರಿಯಿಂದ ಬಂದ್ ಆಗಿದೆ. ಕಟ್ಟಡ ಶಿಥಿಲಗೊಂಡಿರುವುದು ಮತ್ತು ಮುಖ್ಯ ಶಟರ್(ಬಾಗಿಲು) ಮುರಿದಿರುವುದರಿಂದ ಸ್ಥಗಿತಗೊಳಿಸಲಾಗಿದೆ.
    ಬಾಗಿಲನ್ನು ದುರಸ್ತಿ ಮಾಡಿಸಿಕೊಡುವಂತೆ ಕೆಎಂಸಿ ಗ್ರಂಥಾಲಯ ಶಾಖೆ ವತಿಯಿಂದ ಕೆಎಂಸಿ ಹಿರಿಯ ಅಧಿಕಾರಿಗಳಿಗೆ 2021ರ ಜನವರಿ ಮತ್ತು 2021ರ ಸೆಪ್ಟೆಂಬರ್ 20 ರಂದು ಹಾಗೂ ನಗರ ಕೇಂದ್ರ ಗ್ರಂಥಾಲಯ ಧಾರವಾಡ ಉಪನಿರ್ದೇಶಕರು 2023ರ ಜನವರಿ 17ರಂದು ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಕೆಎಂಸಿ ಹಿರಿಯ ಅಧಿಕಾರಿಗಳು ಈವರೆಗೆ ಉತ್ತರ ನೀಡಿಲ್ಲ ಎನ್ನುತ್ತಾರೆ ಗ್ರಂಥಾಲಯ ಇಲಾಖೆ ಅಧಿಕಾರಿಗಳು.
    ಕಿಮ್ಸ್ ಮುಖ್ಯಸ್ಥರು ಅಲ್ಲಿನ ಕೊಠಡಿ ಬಾಗಿಲು ಮತ್ತು ಸಣ್ಣಪುಟ್ಟ ದುರಸ್ತಿ ಮಾಡಿಸಿಕೊಟ್ಟರೆ ಗ್ರಂಥಾಲಯ ಶಾಖೆಯನ್ನು ಅಲ್ಲಿಯೇ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಭೈರಿದೇವರಕೊಪ್ಪದಲ್ಲಿರುವ ಗ್ರಂಥಾಲಯದಲ್ಲಿ ಸೇರ್ಪಡೆ ಮಾಡುತ್ತೇವೆ. ಇದನ್ನು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಬಾಡಿಗೆ ಕಟ್ಟಡ ಮತ್ತು ಹೀಗೆ ಬೇರೆ ಇಲಾಖೆಗಳ ಕೊಠಡಿಗಳಲ್ಲಿರುವ ಗ್ರಂಥಾಲಯ ಶಾಖೆಗಳ ದುರಸ್ತಿ ಕಾರ್ಯ ಮಾಡಲು ನಮಗೆ ಅವಕಾಶ ಇಲ್ಲ ಎನ್ನುತಾರೆ ನಗರ ಕೇಂದ್ರ ಗ್ರಂಥಾಲಯ ಧಾರವಾಡ ಉಪನಿರ್ದೇಶಕ ರಾಮಯ್ಯ.

    ಕೆಎಂಸಿ ಆಸ್ಪತ್ರೆ ಆವರಣದಲ್ಲಿ 1983-84ರಲ್ಲಿ ಗ್ರಂಥಾಲಯ ಶಾಖೆ ಆರಂಭವಾಗಿದೆ. 2023ರ ಫೆಬ್ರವರಿಯಲ್ಲಿ ಕೊಠಡಿಯ ಶಟರ್ ಮುರಿದಿದೆ. ಹೀಗಾಗಿ, ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಬಾಗಿಲನ್ನು ದುರಸ್ತಿ ಮಾಡಿಸಿ ಕೊಡುವಂತೆ ಕಿಮ್ಸ್ ಮುಖ್ಯಸ್ಥರಿಗೆ ಮನವಿ ಪತ್ರ ಬರೆದಿದ್ದೇವೆ. ಅವರಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಕೆಎಂಸಿ ಗ್ರಂಥಾಲಯ ಶಾಖೆಯಲ್ಲಿ 23 ಸಾವಿರ ಪುಸ್ತಕಗಳಿವೆ. 10 ನಿಯತಕಾಲಿಕೆಗಳು ಮತ್ತು ನಿತ್ಯ 12 ದಿನಪತ್ರಿಕೆಗಳು ಬರುತ್ತಿದ್ದವು. ಪ್ರತಿನಿತ್ಯ ನೂರಾರು ಜನರು ಬಂದು ದಿನಪತ್ರಿಕೆ, ಪುಸ್ತಕ, ನಿಯತಕಾಲಿಕೆ ಓದುತ್ತಿದ್ದರು.
    ರಾಮಯ್ಯ ನಗರ ಕೇಂದ್ರ ಗ್ರಂಥಾಲಯ ಧಾರವಾಡ ಉಪನಿರ್ದೇಶಕರು (ಪ್ರಭಾರ)

    ಕಿಮ್ಸ್ ಆವರಣದಲ್ಲಿ ನಗರ ಕೇಂದ್ರ ಗ್ರಂಥಾಲಯ ಶಾಖೆಗೆ ಈ ಹಿಂದೆ ಒಂದು ಕೊಠಡಿ ನೀಡಲಾಗಿತ್ತು. ಅಲ್ಲಿನ ಬಾಗಿಲು ಮುರಿದಿದೆ ಎಂಬ ಮಾಹಿತಿ ಇದೆ. ಅದನ್ನು ಗ್ರಂಥಾಲಯ ಇಲಾಖೆಯವರೇ ದುರಸ್ತಿ ಮಾಡಿಸಿಕೊಳ್ಳಬೇಕು. ಅದರ ದುರಸ್ತಿಗೆ ನಮ್ಮಲ್ಲಿ ಅನುದಾನವಿಲ್ಲ. ಮೊದಲೇ ನಮ್ಮಲ್ಲಿ ಸ್ಥಳಾವಕಾಶದ ಕೊರತೆ ಇದೆ. ಬೇಕಿದ್ದರೆ ಶಟರ್ ಅನ್ನು ಅವರೇ ರಿಪೇರಿ ಮಾಡಿಸಿಕೊಳ್ಳಲಿ. ಇಲ್ಲದಿದ್ದರೆ ಬೇರೆಡೆ ಸ್ಥಳಾಂತರಿಸಿಕೊಳ್ಳಬಹುದು. ಅದಕ್ಕೆ ನಮ್ಮ ಅಭ್ಯಂತರ ಇಲ್ಲ.
    ಡಾ. ರಾಮಲಿಂಗಪ್ಪ ಅಂಟರತಾನಿ
    ನಿರ್ದೇಶಕರು, ಕಿಮ್ಸ್ ಹುಬ್ಬಳ್ಳಿ

    ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಗ್ರಂಥಾಲಯ ಇಲಾಖೆ ಮತ್ತು ಕಿಮ್ಸ್ ಆಡಳಿತ ವ್ಯವಸ್ಥೆಯ ನಿಯಮಗಳಿಂದ ಸುತ್ತಲಿನ ಪ್ರದೇಶಗಳ ಜನರು ಮತ್ತು ವಿವಿಧ ಊರುಗಳಿಂದ ಚಿಕಿತ್ಸೆಗೆಂದು ಬಂದ ರೋಗಿಗಳ ಸಂಬಂಧಿಕರು ಪುಸ್ತಕ, ದಿನಪತ್ರಿಕೆ ಮತ್ತು ನಿಯತಕಾಲಿಕೆ ಓದುವುದರಿಂದ ವಂಚಿತರಾಗಿದ್ದಾರೆ.

    ಸೋಮು ಪಟ್ಟಣಶೆಟ್ಟಿ ಹುಬ್ಬಳ್ಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts