More

    ಹುಬ್ಬಳ್ಳಿ ಬಾಂಬ್ ಸ್ಪೋಟಕ್ಕೆ ನಕ್ಸಲ್ ನಂಟು ಶಂಕೆ

    ಹುಬ್ಬಳ್ಳಿ: ಇಲ್ಲಿನ ರೈಲು ನಿಲ್ದಾಣದಲ್ಲಿ 2019 ಅಕ್ಟೋಬರ್ 21ರಂದು ಸಂಭವಿಸಿದ್ದ ಸ್ಫೋಟ ಪ್ರಕರಣದ ಹಿಂದೆ ನಕ್ಸಲ್ ನಂಟಿರುವ ಶಂಕೆ ವ್ಯಕ್ತವಾಗಿದ್ದು, ಆ ಜಾಡು ಹಿಡಿದು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಚಿಕ್ಕಮಗಳೂರು ಪೊಲೀಸರ ಜತೆಗೆ ರ್ಚಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸ್ಪೋಟಕವಿದ್ದ ಬಕೆಟ್ ಮೇಲೆ ಕೆಂಪು ಬಣ್ಣದ ಅಕ್ಷರದಲ್ಲಿ ಇಂಗ್ಲಿಷ್, ತಮಿಳು ಭಾಷೆಯಲ್ಲಿ ಮಹಾರಾಷ್ಟ್ರದ ರಾಧಾನಗರಿ ಶಾಸಕ ಪ್ರಕಾಶ ಅಭಿತಕರ ಹೆಸರು ನಮೂದಿಸಲಾಗಿತ್ತು. ‘ನೋ ಆರ್​ಎಸ್​ಎಸ್, ನೋ ಬಿಜೆಪಿ. ಓನ್ಲಿ ಶಿವಸೇನಾ’ ಎಂದು ಬರೆಯಲಾಗಿತ್ತು. ಮಹಾರಾಷ್ಟ್ರದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೊಂದಲ ಮೂಡಿಸಲು ನಕ್ಸಲರು ಈ ಹೊಂಚು ಹೆಣೆದಿದ್ದರು. ಅದು ಹಳಿ ತಪ್ಪಿ ಬಂದು ಹುಬ್ಬಳ್ಳಿಯಲ್ಲಿ ಸ್ಪೋಟಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಹುಬ್ಬಳ್ಳಿಯ ಸ್ಪೋಟದ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಗಾರಗೋಟಿ, ಕೊಲ್ಲಾಪುರ, ಸಾತಾರಾದಲ್ಲಿ 3 ಕಡೆ ಸ್ಪೋಟಗಳು ನಡೆದಿದ್ದವು. ಗಾರಗೋಟಿಯಲ್ಲಿ ನಡೆದ ಸ್ಪೋಟದಲ್ಲಿ ಅನಾಹುತ ಸಂಭವಿಸಿರಲಿಲ್ಲ. ಕೊಲ್ಲಾಪುರ ಸ್ಫೋಟ ಘಟನೆಯಲ್ಲಿ ಒಬ್ಬ ಲಾರಿ ಚಾಲಕ ಸಾವನ್ನಪ್ಪಿದ್ದ. ಕೊಲ್ಲಾಪುರದ ಹೆದ್ದಾರಿಯಲ್ಲಿ ಅ.18ರಂದು ಊಟದ ಡಬ್ಬಿಯಲ್ಲಿ ಸ್ಪೋಟಕ ಇಡಲಾಗಿತ್ತು. ಲಾರಿ ಚಾಲಕನೊಬ್ಬ ಅದನ್ನು ಒದ್ದು ಪರೀಕ್ಷಿಸುತ್ತಿದ್ದಾಗ ಸ್ಪೋಟಗೊಂಡು ಸಾವನ್ನಪ್ಪಿದ್ದ. ಇದಾದ ವಾರದ ಬಳಿಕ ಸಾತಾರಾದಲ್ಲಿ ಸ್ಪೋಟಗೊಂಡಿತ್ತು. ಅ. 21ರಂದು ವಿಜಯವಾಡದಿಂದ ಹುಬ್ಬಳ್ಳಿಗೆ ಬಂದಿದ್ದ ರೈಲಿನಲ್ಲಿ ಸ್ಪೋಟಕ ಪತ್ತೆಯಾಗಿತ್ತು. ಸ್ಪೋಟದ ವೇಳೆ ಹುಸೇನಸಾಬ ಎಂಬ ಟೀ ಮಾರುವ ಯುವಕನ ಕೈ ಛಿದ್ರಗೊಂಡಿತ್ತು. ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯಂದ ಸ್ಫೋಟ ಸಂಭವಿಸಿತ್ತು. ಆ ಹಿನ್ನೆಲೆಯಲ್ಲಿ ಮೂವರನ್ನು ಅಮಾನತು ಮಾಡಲಾಗಿತ್ತು. ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, 5 ತಿಂಗಳಾದರೂ ಆರೋಪಿಗಳ ಪತ್ತೆಯಾಗಿಲ್ಲ. ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದ್ದರು.

    ಗಾರಗೋಟಿ ಸ್ಫೋಟ ಆರೋಪಿ ಬಂಧನ: ಮಹಾರಾಷ್ಟ್ರದ ಗಾರಗೋಟಿಯಲ್ಲಿ ಅ.19ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಹಕ್ಕಿಪಿಕ್ಕಿ ಜನಾಂಗದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹಂದಿ ಹಿಡಿಯಲೆಂದು ಆತ ಮನೆಯಲ್ಲೇ ಸ್ಪೋಟಕ ತಯಾರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಓಬಿರಾಯನ ಕಾಲದ ಸಿಸಿಟಿವಿ ಕ್ಯಾಮೆರಾ: ಹುಬ್ಬಳ್ಳಿಯಿಂದ ವಿಜಯವಾಡ ದವರೆಗೆ 26 ರೈಲು ನಿಲ್ದಾಣಗಳು ಇದ್ದು, ಎಲ್ಲೆಡೆಯೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಮುಖ್ಯವಾಗಿ ನೈಋತ್ಯ ರೈಲ್ವೆ ಕೇಂದ್ರಸ್ಥಾನ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಓಬಿರಾಯನ ಕಾಲದ ಸಿಸಿಟಿವಿ ಕ್ಯಾಮೆರಾಗಳಿವೆ. ಪ್ರಯಾಣಿಕರ ಮುಖ ಅಸ್ಪಷ್ಟವಾಗಿ ಕಾಣುತ್ತವೆ. ಇದರಿಂದಾಗಿ ಸ್ಫೋಟ ಪ್ರಕಣದ ಆರೋಪಿ ಪತ್ತೆ ಕಷ್ಟಕರವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

    ರೈಲು ನಿಲ್ದಾಣ ಸ್ಫೋಟ ಪ್ರಕರಣದಲ್ಲಿ ನಕ್ಸಲ್ ನಂಟು ಇರುವ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ಬಗೆಯಲ್ಲೂ ತನಿಖೆ ನಡೆಸಲಾಗುತ್ತಿದೆ.                               | ಶಾಲಂ ಹುಸೇನ್ ಪಿಎಸ್​ಐ, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ

    ಕೇಶವಮೂರ್ತಿ ವಿ.ಬಿ.

     

    ಕರೊನಾ ಭೀತಿ: ಮರಳಿ ಊರಿನತ್ತ ಹೊರಟ ವಲಸಿಗರು…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts