More

    ಸಾಮಾನ್ಯ ಕಾರಣಗಳಿಂದ ಉಂಟಾಗುವ ತುರಿಕೆಯ ನಿವಾರಣೆ ಹೇಗೆ?

    ತುರಿಕೆಯ ಸಮಸ್ಯೆಗೆ ಕಾರಣ ಹವಾಮಾನದಲ್ಲಿ ತೇವಾಂಶದ ಕೊರತೆಯಾಗಿ ಚರ್ಮದಲ್ಲಿರುವ ಜಿಡ್ಡಿನ ಅಂಶ ಕಡಿಮೆಯಾಗಿರುವುದು. ಕೆಲ ದಿನಗಳ ನಂತರ ತಾನಾಗಿಯೇ ನಿಂತು ಹೋಗುತ್ತದೆ. ಆದರೆ ಬೇರೆ ಬೇರೆ ಕಾರಣಗಳಿಂದ ಉಂಟಾದ ತುರಿಕೆಯ ಸಮಸ್ಯೆ ಏನು ಮಾಡಿದರೂ ಬಿಡದಂತೆ ಕಾಡುತ್ತದೆ.

    ಸಾಮಾನ್ಯ ಕಾರಣಗಳಿಂದ ಉಂಟಾಗುವ ತುರಿಕೆಯ ನಿವಾರಣೆ ಹೇಗೆ?

    ಹಲವು ರೀತಿಯ ಗಂಭೀರ ಸಮಸ್ಯೆಗಳಿಂದಲೂ ತುರಿಕೆ ಕಾಡುತ್ತದೆ. ಆದರೆ ಇಂದು ನಾವು ಸಾಮಾನ್ಯ ಕಾರಣಗಳಿಂದಾಗಿ ಉಂಟಾಗುವ ತುರಿಕೆಯ ಬಗ್ಗೆ ಮಾತ್ರ ತಿಳಿದುಕೊಳ್ಳೋಣ. ತುರಿಕೆ ಇರುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ಕಾರಣವಾಗುವುದು ಅಲರ್ಜಿ. ಅಂಥವರು ಹಲವಾರು ವರ್ಷಗಳಿಂದ ಅಲರ್ಜಿಯನ್ನು ನಿಯಮಿತ ಕಾಲದವರೆಗೆ ಮಾತ್ರ ತಡೆಗಟ್ಟುವ ಔಷಧ ತೆಗೆದುಕೊಳ್ಳುತ್ತಾ ಇರುತ್ತಾರೆ. ಆದರೆ ಅದು ಸಮಸ್ಯೆಯನ್ನು ಬೇರು ಸಹಿತ ಗುಣಪಡಿಸದೇ ಇರುವ ಕಾರಣದಿಂದಾಗಿ ಮಾತ್ರೆಯನ್ನು ಬಿಡಲಾಗದೆ ಕಷ್ಟಪಡುತ್ತಿರುತ್ತಾರೆ. ಅಂಥವರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಅರಿಶಿಣವನ್ನು ಬಳಸಬೇಕು. ಕೆಮಿಕಲ್ ಯುಕ್ತ ಆಹಾರ ಪದಾರ್ಥಗಳು, ಉದ್ದು, ಬದನೆಕಾಯಿ, ನುಗ್ಗೆಕಾಯಿ, ಶೇಂಗಾ ಮುಂತಾದ ಆಹಾರ ಪದಾರ್ಥಗಳನ್ನು ಅಲರ್ಜಿ ಕಡಿಮೆಯಾಗುವವರೆಗೆ ತ್ಯಜಿಸಬೇಕು. ಹುತ್ತದ ಮಣ್ಣಿಗೆ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ಅದನ್ನು ಮೈಮೇಲೆ ಲೇಪಿಸಿಕೊಂಡು ಅದು ಒಣಗುವವರೆಗೆ ಬಿಸಿಲಿನ ಸ್ನಾನ ಮಾಡಬೇಕು. ಅತಿಯಾಗಿ ಸಮಸ್ಯೆ ಕಾಡುತ್ತಿದ್ದರೆ ವಮನ ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು. ತುರಿಕೆಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಫಂಗಲ್ ಇನ್ಪೆಕ್ಷನ್. ಇಲ್ಲಿ ಕೂಡ ಮೇಲಿನ ರೀತಿಯ ಆಹಾರ ಕ್ರಮ ಅನುಸರಿಸಬೇಕು. ಫಂಗಸ್ ಬೆಳೆಯದಂತೆ ತಡೆಯುವ ಶಕ್ತಿಯನ್ನು ವರ್ಧಿಸುವ ಆಹಾರ ಮತ್ತು ಔಷಧಗಳನ್ನು ಸೇವಿಸಬೇಕು. ಉದಾಹರಣೆಗೆ ಕಹಿಬೇವು, ಅರಿಶಿನ, ಅಣಲೆಕಾಯಿ, ಮಂಜಿಷ್ಟ ಮುಂತಾದ ದ್ರವ್ಯಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ಇಟ್ಟುಕೊಂಡು ಅರ್ಧದಿಂದ ಒಂದು ಚಮಚದಷ್ಟು ಚೂರ್ಣವನ್ನು ದಿನಕ್ಕೊಮ್ಮೆ ಆಹಾರದ ಮೊದಲು ಬಿಸಿ ನೀರಿನಲ್ಲಿ ಸೇವಿಸಬೇಕು.

    ವಯಸ್ಸಾದಂತೆ ಚರ್ಮದಲ್ಲಿನ ಜಿಡ್ಡಿನ ಅಂಶ ಕಡಿಮೆಯಾಗುವ ಕಾರಣ ಉಂಟಾಗುವ ತುರಿಕೆ ಕಡಿಮೆ ಮಾಡಲು ನಿತ್ಯವೂ ಎಣ್ಣೆಯ ಮಸಾಜ್ ಮಾಡಿಕೊಳ್ಳಬೇಕು. ಕೆಮಿಕಲ್ ಯುಕ್ತ ಸಾಬೂನುಗಳ ಬದಲು ಅಂಟವಾಳ ಕಾಯಿ, ಅರಿಶಿಣ, ಕಡಲೆ ಹಿಟ್ಟುಗಳ ಮಿಶ್ರಣವನ್ನು ಬಳಸಬೇಕು. ಇದರಿಂದ ನಿಜವಾದ ಅರ್ಥದಲ್ಲಿ ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

    ಇಂತಹ ಕಾರಣಗಳಷ್ಟೇ ಅಲ್ಲದೆ ಹಲವು ಕಾಯಿಲೆಗಳಲ್ಲಿ ತುರಿಕೆ ಒಂದು ಲಕ್ಷಣವಾಗಿರುತ್ತದೆ. ಉದಾಹರಣೆಗೆ ತಲೆ ಹೊಟ್ಟು, ಹಲವು ರೀತಿಯ ಸೋರಿಯಾಸಿಸ್, ಎಕ್ಸಿಮಾ, ಮಧುಮೇಹ, ರಕ್ತಹೀನತೆ, ಕಾಮಾಲೆ, ಥೈರಾಯ್ಡ್ಗೆ ಸಂಬಂಧಪಟ್ಟ ಸಮಸ್ಯೆಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ತುರಿಕೆ ತುಂಬಾ ದಿನ ಇದ್ದರೆ ವೈದ್ಯರನ್ನು ಭೇಟಿಯಾಗಿ ಕಾರಣವನ್ನು ಪತ್ತೆ ಹಚ್ಚಿಕೊಳ್ಳುವುದು ಸೂಕ್ತ.

    ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ

    ಇಷ್ಟೇ ಅಲ್ಲದೇ ಹಲವಾರು ಬಾರಿ ಒತ್ತಡ, ಉದ್ವೇಗ, ಗೀಳು ರೋಗಗಳಿಂದಾಗಿಯೂ ತುರಿಕೆ ಉಂಟಾಗುತ್ತದೆ. ಇಂತಹ ಕಾರಣಗಳಿದ್ದರೆ ಆಸನ, ಪ್ರಾಣಾಯಾಮ, ಧ್ಯಾನ ಮುಂತಾದ ಕ್ರಿಯೆಗಳನ್ನು ಮಾಡಬೇಕು. ಉಪವಾಸ, ಪಂಚಕರ್ಮ ಚಿಕಿತ್ಸೆಗಳು, ಹೆಸರುಬೇಳೆ, ತುಪ್ಪ, ಬೆಣ್ಣೆ, ನೆಲ್ಲಿಕಾಯಿ, ದಾಳಿಂಬೆ, ಹಾಗಲಕಾಯಿಯಂತಹ ಕಹಿ ಪದಾರ್ಥಗಳು, ಒಣದ್ರಾಕ್ಷಿ, ಪಡುವಲಕಾಯಿ, ಬೂದುಗುಂಬಳಕಾಯಿ, ಅರಿಶಿಣ, ಕೊತ್ತಂಬರಿ, ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಶ್ರೀಗಂಧ, ಸೊಗದೆ ಬೇರು ಮುಂತಾದ ಪದಾರ್ಥಗಳು ಬಹುತೇಕ ಎಲ್ಲ ರೀತಿಯ ತುರಿಕೆಗಳಲ್ಲಿಯೂ ಅನುಕೂಲಕಾರಿ.

    ಅತಿಯಾಗಿ ಉಪ್ಪು, ಹುಳಿ ಮತ್ತು ಖಾರಗಳ ಸೇವನೆ, ಮೊಸರು, ಅತಿಯಾಗಿ ಹಾಲನ್ನು ಸೇವಿಸುವುದು, ಉದ್ದು, ಅತಿಯಾಗಿ ಬಿಸಿಲಿಗೆ ಮೈಯೊಡ್ಡುವುದು, ವಿರುದ್ಧ ಆಹಾರ, ಜೀರ್ಣಕ್ಕೆ ಕಷ್ಟವಾಗುವ ಆಹಾರವನ್ನು ಪದೇಪದೇ ಸೇವಿಸುವುದು, ನೈಸರ್ಗಿಕ ಕರೆಗಳನ್ನು ತಡೆಯುವುದು, ನಂಜು ಹೆಚ್ಚಿರುವ ಕೆಲವು ಮಾಂಸ ಆಹಾರಗಳನ್ನು ಅತಿಯಾಗಿ ಸೇವಿಸುವುದು, ಹಗಲು ನಿದ್ದೆ, ಚಿಂತೆ, ರಾತ್ರಿ ನಿದ್ದೆಗೆಡುವುದು, ಅತಿಯಾದ ಸೌಂದರ್ಯ ವರ್ಧಕಗಳ ಬಳಕೆ ಇಂಥವು ಬಹುತೇಕ ಎಲ್ಲಾ ರೀತಿಯ ತುರಿಕೆಗಳಲ್ಲಿಯೂ ತ್ಯಜಿಸಬೇಕಾದವು.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    ಎಷ್ಟು ಪ್ರಯತ್ನಿಸಿದರೂ ಕಡಿಮೆಯಾಗದ ತುರಿಕೆ ಇರುವಾಗ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆ, ಮುದ್ರೆಗಳು, ಹಲವು ರೀತಿಯ ಹೀಲಿಂಗ್ ಚಿಕಿತ್ಸಾ ಕ್ರಮಗಳ ಮೂಲಕ ಈ ರೋಗವನ್ನು ವಾಸಿ ಮಾಡಬೇಕಾಗುತ್ತದೆ. ನಮ್ಮ ಚಿಕಿತ್ಸಾ ಕೇಂದ್ರದಲ್ಲಿ ಐಡಿಇ ಕಷಾಯ ಮತ್ತು ಸ್ಕಿನ್ ಲಾಂಗ್ ಕಷಾಯ ಎಂದು ಎರಡು ರೀತಿಯ ಕಷಾಯ ಪುಡಿಗಳನ್ನು ಕೊಡುತ್ತೇವೆ. ಎರಡನ್ನೂ ಒಂದೊಂದು ಚಮಚ, ಎರಡು ಲೋಟ ನೀರಿಗೆ ಹಾಕಿ ಒಂದು ಲೋಟಕ್ಕೆ ಬತ್ತಿಸಿ ಬೆಳಗ್ಗೆ ಅರ್ಧ ಲೋಟ, ರಾತ್ರಿ ಅರ್ಧ ಲೋಟ ಆಹಾರದ ಮೊದಲು ಸೇವಿಸಿದರೆ ತುಂಬಾ ಒಳ್ಳೆಯ ಫಲಿತಾಂಶ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಒಟ್ಟಿನಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ತುರಿಕೆಯನ್ನು ಹೋಗಲಾಡಿಸಿಕೊಳ್ಳುವುದು ದೊಡ್ಡ ಕಷ್ಟವಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts