More

    ಹೃದಯ ಸ್ತಂಭನದ ಕುರಿತು ಇರಲಿ ಎಚ್ಚರ…

    ಇತ್ತೀಚೆಗೆ ಹೃದಯಾಘಾತದ ಜತೆಗೆ ಹೃದಯ ಸಂಭನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ವಯಸ್ಕರೇ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೌದು ಐದಾರು ವರ್ಷಗಳ ಮೊದಲು ಪರಿಸ್ಥಿತಿ ಹೀಗಿರಲಿಲ್ಲ. ಹೃದಯಾಘಾತದ ಪ್ರಕರಣಗಳು ಕೇಳುತ್ತಿದ್ದ ಸಂಗತಿಯೇ ವಿರಳವಾಗಿತ್ತು. ಯಾರೋ ಹಿರಿಯರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಗಳನ್ನು ಕೇಳುತ್ತಿದ್ದೆವು. ಆದರೆ ಈಗಿನ ಕೆಲವು ವರ್ಷಗಳಲ್ಲಿ ಹೃದಯಾಘಾತ ಸೇರಿದಂತೆ ಹೃದಯಸ್ತಂಭನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇದಕ್ಕೆ ಭಾರತೀಯರೇ ಹೆಚ್ಚು ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಹೃದಯ ಸಂಬಂಧಿ ಕಾಯಿಲೆಗಳು ಭಾರತೀಯರನ್ನೇ ಹೆಚ್ಚು ಭಾದಿಸತೊಡಗಿವೆ ಎನ್ನುತ್ತವೆ ಸಂಶೋಧನಾ ವರದಿಗಳು.

    ಹಾಗಾದರೆ ಹೃದಯ ಸಂಭನ ಎಂದರೇನು? ಈ ಸಮಸ್ಯೆಗೆ ಕಾರಣಗಳೇನು? ಇದರ ಲಕ್ಷಣಗಳು ಹಾಗೂ ಪರಿಹಾರೋಪಾಯಗಳ ಕುರಿತು ಇಲ್ಲಿ ಚರ್ಚಿಸೋಣ…

    ಹೃದಯ ಸ್ತಂಭನ ಮತ್ತು ಹೃದಯಾಘಾತದ ನಡುವಿನ ವ್ಯತ್ಯಾಸ: ಹೃದಯಾಘಾತ ಎಂಬ ಪದವನ್ನು ಸಾಮಾನ್ಯವಾಗಿ ಹೃದಯ ಸ್ತಂಭನವನ್ನು ವಿವರಿಸಲು ತಪ್ಪಾಗಿ ಬಳಸಲಾಗುತ್ತದೆ. ಹೃದಯಾಘಾತವು ಹೃದಯ ಸ್ತಂಭನವನ್ನು ಉಂಟುಮಾಡಬಹುದು. ಆದರೆ ಇವೆರಡೂ ಒಂದೇ ಆಗಿರುವುದಿಲ್ಲ.

    ಹೃದಯಕ್ಕೆ ರಕ್ತದ ಹರಿವನ್ನು ನಿಲ್ಲಿಸುವ ಅಡಚಣೆಯಿಂದಾಗಿ ಹೃದಯಾಘಾತ ಸಂಭವಿಸುತ್ತದೆ. ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದೆ ಇದ್ದಾಗ, ಹೃದಯದ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಹೃದಯಾಘಾತ ಸಂಭವಿಸುತ್ತದೆ. ಇದು ರಕ್ತದ ಪರಿಚಲನೆಯ ಸಮಸ್ಯೆಯಿಂದ ಉಂಟಾಗುತ್ತದೆ.

    ಆದರೆ ಇದಕ್ಕೆ ವಿರುದ್ಧವಾಗಿ ಹೃದಯದಲ್ಲಿನ ವಿದ್ಯುತ್ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಹೃದಯ ಸ್ತಂಭನ ಉಂಟಾಗುತ್ತದೆ. ಹೃದಯ ಬಡಿತದ ಕಾರ್ಯವು ಇದ್ದಕ್ಕಿದ್ದಂತೆ ಸ್ತಬ್ಧವಾಗಿ ಹಠಾತ್ ಮರಣವಾಗುತ್ತದೆ.

    ಹೃದಯ ಸ್ತಂಭನಕ್ಕೆ ಕಾರಣಗಳು: ಧೂಮಪಾನ ಮತ್ತು ಕುಡಿಯುವ ಅಭ್ಯಾಸ ಜತೆಗೆ ಅನಾರೋಗ್ಯಕರ ಜೀವನ ಶೈಲಿ ಮತ್ತು ವ್ಯಾಯಾಮವನ್ನು ಇಲ್ಲದಿರುವುದು, ಕೊಲೆಸ್ಟ್ರಾಲ್ ಸಮಸ್ಯೆ, ಹೃದಯ ಲಯಬದ್ಧ ಬಡಿತದ ಸಮಸ್ಯೆ ಹೃದಯಸ್ತಂಭನಕ್ಕೆ ಪ್ರಚೋದಕ ಅಂಶಗಳು.

    ಅನಿಯಮಿತವಾಗಿ, ಅತಿಯಾಗಿ ವ್ಯಾಯಾಮ ಮಾಡುವುದು ಕೂಡ ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಇದರೊಂದಿಗೆ ಮಾನಸಿಕ ಒತ್ತಡವು ಹಾರ್ಟ್ ಅರೆಸ್ಟ್​ಗೆ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು. ಇದು ಕೊಲೆಸ್ಟ್ರಾಲ್‌ನಿಂದಾಗಿ ಅಪಧಮನಿಗಳಿಗೆ ರಕ್ತ ಪೂರೈಸುವುದನ್ನು ನಿಲ್ಲಿಸುತ್ತದೆ. ಜತೆಗೆ ಕೋವಿಡ್ ಕೂಡ ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗುವ ಅಂಶವಾಗಿದೆ.

    ನಾವು ಜಿಮ್‌ಗೆ ಹೋಗುತ್ತೇವೆ ಆದರೂ ಹೃದಯ ಸ್ತಂಭನ ಉಂಟಾಗಲು ಕಾರಣವೇನು ಎಂದು ಬಹುತೇಕರು ಕೇಳುವ ಪ್ರಶ್ನೆ. ದೇಹದಾರ್ಢ್ಯವು ಹೃದಯರಕ್ತನಾಳದ ಫಿಟ್‌ನೆಸ್‌ಗೆ ಸಂಬಂಧಿಸಿರುವುದಿಲ್ಲ. ಹಾಗಾಗಿ ಬಾಡಿಬಿಲ್ಡರ್‌ಗೆ ಹೃದಯಸ್ತಂಭನದ ಸಾಧ್ಯತೆ ಇಲ್ಲ ಎನ್ನಲಾಗದು. ಜಿಮ್‌ಗಳಲ್ಲಿ ಬೆವರು ಸುರಿಸಿ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದವರಿಗೂ ಹಾರ್ಟ್ ಅರೆಸ್ಟ್ ಆಗಿರುವುದನ್ನು ನಾವು ನೋಡಿದ್ದೇವೆ.

    ಲಕ್ಷಣಗಳು:
    1. ಹೃದಯಾಘಾತ ಅಥವಾ ಹೃದಯಸ್ತಂಭನದ ಮುಖ್ಯಲಕ್ಷಣವೆಂದರೆ ಎದೆ ನೋವು ಎನ್ನುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರದು ನಿಜವಲ್ಲ.
    2. ಹೃದಯಸ್ತಂಭನದ ಲಕ್ಷಣಗಳು ಹಠತ್ತಾಗಿ ಗೋಚರಿಸುವುದಲ್ಲದೆ, ಗಮನಿಸದ್ದಿರೆ ಕ್ಷಣದಲ್ಲೇ ಅದರ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
    3. ಉಸಿರಾಟದಲ್ಲಿ ತೊಂದರೆ, ಎದೆಯ ಬಡಿತ ಇದ್ದಕ್ಕಿದ್ದಂತೆ ಹೆಚ್ಚಾಗುವುದು, ಎದೆ ಭಾರ ಎನಿಸುವುದು, ದೌರ್ಬಲ್ಯ, ಅಸ್ವಸ್ಥತೆ, ಬೆವರುವುದು, ಮೂರ್ಛೆ, ತಲೆ ತಿರುಗುವುದು, ವಾಂತಿಯಾಗುವಂತಹ ಲಕ್ಷಣಗಳೇನಾದರೂ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಒಳಿತು. ಇಲ್ಲದಿದ್ದರೆ ಜೀವಕ್ಕೆ ಎರವಾಗಬಹುದು.

    ಪರಿಹಾರೋಪಾಯಗಳು:
    1. ಹೃದಯವು ಬಡಿತವನ್ನು ನಿಲ್ಲಿಸಿದಾಗ ಆಮ್ಲಜನಕದೊಂದಿಗೆ ಸಮೃದ್ಧ ರಕ್ತದ ಪೂರೈಕೆಗೆ ಅಡಚಣೆ ಉಂಟಾಗಿ ಸಾವು ಅಥವಾ ಶಾಶ್ವತ ಮಿದುಳಿನ ಹಾನಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಸಮಯದಲ್ಲಿ ರೋಗಿಯನ್ನು ಕೂಡಲೇ ವೈದ್ಯರ ಬಳಿಗೆ ಕರೆದೊಯ್ಯುವುದು ನಿರ್ಣಾಯಕವಾಗಿರುತ್ತದೆ.
    2. ಕೊಲೆಸ್ಟ್ರಾಲ್ ಸಮಸ್ಯೆ ಉಳ್ಳವರು, ಹೃದಯ ಸಂಬಂಧಿ ಕಾಯಿಲೆಯ ಇತಿಹಾಸ ಹೊಂದಿರುವವರು, ಲಯಬದ್ಧ ಹೃದಯ ಬಡಿತದ ಸಮಸ್ಯೆ ಹೊಂದಿರುವವರು ಆಗಾಗ್ಗೆ ವೈದ್ಯರು ಕಂಡು ಸೂಕ್ತ ತಪಾಸಣೆ ಮಾಡಿಸಿಕೊಂಡು ಮೌಲ್ಯಮಾಪನ ಮಾಡಿಸಿಕೊಳ್ಳಬೇಕು.
    3. ಹೆಚ್ಚೂ ಇಲ್ಲದೆ, ಕಡಿಮೆಯೂ ಆಗದೆ ದಿನನಿತ್ಯ ನಿಯಮಿತ ವ್ಯಾಯಮವನ್ನು ರೂಢಿಸಿಕೊಳ್ಳಬೇಕು.
    4. ಧ್ಯಾನ, ಯೋಗದ ಮೂಲಕ ಮಾನಸಿಕ ಒತ್ತಡವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು.
    5. ಹಣ್ಣು ಮತ್ತು ತರಕಾರಿ ಹೆಚ್ಚು ಸೇರಿಸಿಕೊಳ್ಳುವ ಉತ್ತಮ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
    6. ನೀವು ಪರಿಧಮನಿಯ ಕಾಯಿಲೆ ಅಥವಾ ಹೃದ್ರೋಗವನ್ನು ಹೊಂದಿದ್ದರೆ ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆಗೆ ಒಳಪಡುತ್ತಿರಬೇಕು.
    7. ಸಮಸ್ಯೆ ಇರುವವರು ಮಾತ್ರವಲ್ಲ, ಆರೋಗ್ಯವಾಗಿರುವವರು ನಿರ್ಲಕ್ಷಿಸದೆ 6 ತಿಂಗಳಿಗೊಮ್ಮೆ ಇಡೀ ದೇಹದ ಜತೆಗೆ ವಿಶೇಷವಾಗಿ ಹೃದಯದ ತಪಾಸಣೆಯನ್ನು ಮಾಡಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts