More

    ಪರೀಕ್ಷಾ ಭಯದಿಂದ ಹೊರಬರೋದು ಹೇಗೆ?

    ಪರೀಕ್ಷಾ ಭಯದಿಂದ ಹೊರಬರೋದು ಹೇಗೆ?ಕಲಿಸುವುದು ಮತ್ತು ಕಲಿಯುವುದು ವಿದ್ಯಾಭ್ಯಾಸದ ಪ್ರಕ್ರಿಯೆಯಾದರೆ, ಕಲಿಸಿದ್ದು-ಕಲಿತದ್ದು ವಿದ್ಯಾರ್ಥಿಗಳಲ್ಲಿ ಯಾವ ಮಟ್ಟಕ್ಕೆ ತಲುಪಿದೆ? ಅವರು ತೇರ್ಗಡೆಗೆ ಅರ್ಹರೇ, ಅನರ್ಹರೇ ಎಂಬುದನ್ನು ತಿಳಿದುಕೊಳ್ಳುವ ವಿಧಾನವೇ ಪರೀಕ್ಷೆ ಅಥವಾ ಮೌಲ್ಯಮಾಪನ. ಅಂದ ಮೇಲೆ, ಪರೀಕ್ಷೆಗಳು ಯಾವುದೇ ಶಿಕ್ಷಣ-ತರಬೇತಿಯ ಅವಿಭಾಜ್ಯ ಭಾಗ ಹಾಗೂ ಅನಿವಾರ್ಯ ಕಾರ್ಯಕ್ರಮವೆಂಬುದನ್ನು ವಿದ್ಯಾರ್ಥಿಗಳ ಮೊದಲು ಅರ್ಥಮಾಡಿಕೊಳ್ಳಬೇಕು. ಈ ಸತ್ಯಾಂಶದ ಅರಿವಾದರೆ, ಪರೀಕ್ಷೆಗಳು ಒಂದು ಸಮಸ್ಯೆಯಾಗಿ ಗೋಚರಿಸದೆ, ಸವಾಲಾಗಿ ಸ್ವೀಕರಿಸುವ, ಸಂತೋಷದಿಂದ ಸ್ವಾಗತಿಸಿ ಎದುರಿಸುವ ಮನೋಪ್ರವೃತ್ತಿ ಅವರಲ್ಲಿ ಸೃಷ್ಟಿಯಾಗುತ್ತದೆ. ಹೀಗಾದಾಗ, ಪರೀಕ್ಷಾ ಭಯವೇ ಇಲ್ಲವಾಗುತ್ತದೆ. ಆದರೂ ಪರೀಕ್ಷೆಗಳು ಬಂತೆಂದರೆ, ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಒಂದಿಷ್ಟು ಭಯ, ದಿಗಿಲು ಉಂಟಾಗುವುದು ಸರ್ವೆ ಸಾಮಾನ್ಯ ಹಾಗೂ ಸಹಜ, ಸ್ವಾಭಾವಿಕ. ಅಲ್ಪಮಟ್ಟದ ಪರೀಕ್ಷಾ ಭಯ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾದರೂ, ತೀವ್ರತರದ ಪರೀಕ್ಷಾ ಭಯ ಹಲವಾರು ದೈಹಿಕ, ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಬಹುದು. ಪರೀಕ್ಷಾ ಭಯ ಸೃಷ್ಟಿಯಾಗಲು ಕಾರಣ ಗಳೆಂದರೆ ಓದಬೇಕಾದ ವಿಷಯಗಳು ಅತಿಯಾಗಿ, ಕಾಲಾವಕಾಶ ಕಡಿಮೆ ಆದಾಗ, ಪರೀಕ್ಷೆಗಳನ್ನು ಎದುರಿಸುವ ತಯಾರಿ ಅಪೂರ್ಣವಾದಾಗ, ಇಲ್ಲವೇ ತೃಪ್ತಿಕರವಾಗಿಲ್ಲವಾದಾಗ. ಮಾತ್ರವಲ್ಲ, ಆತ್ಮವಿಶ್ವಾಸದ ಕೊರತೆಯುಂಟಾದಾಗ, ನಕಾರಾತ್ಮಕ ಯೋಚನೆಗಳು ತಲೆಯೊಳಗೆ ನುಸುಳಿ ದಾಗ, ಆರೋಗ್ಯ ಕೆಟ್ಟುಹೋದಾಗ, ಕಲಿತದ್ದು ಬೇಗನೆ ಮರೆತು ಹೋದಾಗಲೂ ಆ ಭಯ ಕಾಡಬಹುದು. ಪೋಷಕರ, ಶಿಕ್ಷಕರ, ಬಂಧು-ಮಿತ್ರರ ನಿರೀಕ್ಷೆ ಅತಿಯಾಗಿ, ಹೆಚ್ಚಿನ ಅಂಕಗಳನ್ನು ಪಡೆಯಲೇಬೇಕಾದ ಒತ್ತಡಕ್ಕೆ ಸಿಲುಕಿದಾಗ, ಅವಮಾನದ ಭಯ ಏರ್ಪಟ್ಟಾಗ, ಪರೀಕ್ಷೆಗಳನ್ನು ಎದುರಿಸುವ ವಿಧಾನ, ಪೋ›ತ್ಸಾಹ, ಮಾರ್ಗದರ್ಶನಗಳು ಇಲ್ಲವಾದಾಗಲೂ ಪರೀಕ್ಷಾ ಭಯ ಕಾಡುತ್ತದೆ. ಹಾಗಾದರೆ ಹೀಗಾಗದಂತೆ ಏನು ಮಾಡಬಹುದು? ಒಂದಷ್ಟು ಮುಂಜಾಗ್ರತಾ ಕ್ರಮಗಳು ಅಗತ್ಯ. ಅವುಗಳೆಂದರೆ :

    = ಪರೀಕ್ಷೆಗಳೆಂದರೆ ಶಿಕ್ಷೆಗಳಲ್ಲ; ನಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು, ಭವಿಷ್ಯವನ್ನು ರೂಪಿಸಲು, ಹಾಗೂ ನಮ್ಮ ಪ್ರಯತ್ನ ಪರಿಶ್ರಮಗಳಿಗೆ ತಕ್ಕ ಪ್ರಶಂಸೆ ಪ್ರತಿಫಲವನ್ನು ಪಡೆಯಲು ಒದಗಿರುವ ಒಂದು ಸದವಕಾಶವೆಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ನಿರ್ವಣವಾಗಬೇಕು.

    = ಹಿಂದಿನಿಂದಲೇ ನಡೆಯದ ಸಾಕಷ್ಟು ತಯಾರಿ, ಪರೀಕ್ಷೆಯ ದಿನ ಪ್ರಕಟವಾಗಿಲ್ಲ, ಆಮೇಲೆ ಓದಿ ಕೊಂಡರಾಯಿತು ಎಂಬ ಉದಾಸೀನದಿಂದ ಕಾಲಾವಕಾಶವನ್ನು ನೀಡದೆ, ನಿಮ್ಮನ್ನು ಒತ್ತಡಕ್ಕೆ ತಳ್ಳಬಹುದು.

    = ವಿಷಯಗಳನ್ನು ಕಷ್ಟಪಟ್ಟು ಓದಬಾರದು; ಇಷ್ಟಪಟ್ಟು ಪ್ರೀತಿಯಿಂದ ಓದಬೇಕು. ಆಗ ಓದಿದ್ದೆ ಲ್ಲವೂ ಬಲುಬೇಗ ಅರ್ಥವಾಗುತ್ತದೆ ಹಾಗೂ ಬಹುಕಾಲ ಮರೆಯದೆ ಜ್ಞಾಪಕದಲ್ಲಿರುತ್ತದೆ. ವಿಷಯ ಅರ್ಥವಾಗುತ್ತಿಲ್ಲವೆಂದರೆ, ತಡಮಾಡದೆ ಶಿಕ್ಷಕರ, ಹಿರಿಯ ವಿದ್ಯಾರ್ಥಿಗಳ ನೆರವನ್ನು ಪಡೆದುಕೊಳ್ಳಬೇಕು.

    = ಆಗಾಗ ಮಾಡಿಕೊಳ್ಳುವ ಸ್ವಯಂ ಮೌಲ್ಯಮಾಪನ ಕ್ರಮ ವಿಷಯಗಳ ಮೇಲೆ ಪ್ರಭುತ್ವವನ್ನು ತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರಶಾಂತ ಮನಸ್ಸು, ಮತ್ತು ಪರಿಸರ ಹಾಗೂ ಆಕರ್ಷಣೆ ಭಾವೋದ್ವೇಗಗಳಿಗೆ ಒಳಗಾಗದ ಮನೋಸ್ಥಿತಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ.

    = ಅಧ್ಯಯನ ಮಾಡಲು ನಿರ್ದಿಷ್ಟ ವೇಳೆ, ವಿಧಾನ, ಸ್ಥಳಗಳನ್ನು ನಿಗದಿ ಮಾಡಿಕೊಳ್ಳಿ. ಓದಿದ ವಿಷಯವನ್ನು ಮಿದುಳಿನಲ್ಲಿ ಮುದ್ರಣ ಮಾಡಿಕೊಳ್ಳಲು ಪುನರಾವರ್ತನೆ, ಸ್ಮರಣೆ, ಮನನ, ಚಿಂತನ, ಮಂಥನಗಳು ಸಹಕಾರಿ. ಪೌಷ್ಠಿಕಾಂಶಗಳನ್ನೊಳಗೊಂಡ ಆಹಾರ, ನಿಯಮಿತ ವ್ಯಾಯಾಮ ಹಾಗೂ ಭಂಗವಿಲ್ಲದ ಸುಖ ನಿದ್ರೆಯಲ್ಲಿ ಕಡಿತ ಬೇಡ.

    = ನಿಮ್ಮ ಸಾಮರ್ಥ್ಯದ ಬಗ್ಗೆ ಮೇಲರಿಮೆ, ಕೀಳರಿಮೆ, ಅನುಮಾನಗಳು ಬೇಡ. ಆತ್ಮ ವಿಶ್ವಾಸಗಳಿರಲಿ. ನಕಾರಾತ್ಮಕ ಯೋಚನೆಗಳಿಗೆ ಎಡೆಕೊಡದೆ ಸಕಾರಾತ್ಮಕ ಯೋಚನೆಗಳನ್ನೇ ಬೆಳೆಸಿಕೊಳ್ಳಬೇಕು.

    = ಹೆತ್ತವರ ಬಹುಮಾನದ ಆಮಿಷ ಇಲ್ಲವೇ ಶಿಕ್ಷೆ, ಅವಮಾನಗಳ ಭಯ ಬೇಡ; ಪ್ರಾಮಾಣಿಕ ಪ್ರಯತ್ನ ಮಾತ್ರ ನಿಮ್ಮ ಕೆಲಸವಾಗಲಿ. ಫಲಿತಾಂಶದ ಬಗೆಗಿನ ಯೋಚನೆಯನ್ನು ಬಿಟ್ಟುಬಿಡಿ. ಪ್ರಯತ್ನತ್ಕೆ ತಕ್ಕುದಾದ ಪ್ರತಿಫಲ ಸಿಕ್ಕೇ ಸಿಗುತ್ತದೆ.

    = ಮೂಢನಂಬಿಕೆಗಳಿಂದ ದೂರವಿರಿ; ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಗಾಢ ನಂಬಿಕೆಗಳಿರಲಿ.

    ಹೀಗಾದರೆ ಎಲ್ಲಿಯ ಪರೀಕ್ಷಾ ಭಯ? ಜಯ ನಿಮ್ಮದೇ.

    ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

    ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು, ನಾಲ್ವರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts