More

    Bed Wetting – ಬೆಳೆದ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡುವ ಸಮಸ್ಯೆಗೆ ಇಲ್ಲಿದೆ ಪರಿಹಾರೋಪಾಯ…

    ಮಕ್ಕಳ ವಿದ್ಯಾಭ್ಯಾಸ ಸಲೀಸಾಗಿ ಆಗಲಿ ಎಂಬುದು ಎಲ್ಲ ಪಾಲಕರ ಒತ್ತಾಸೆ. ಆದರೆ ಕೆಲವೊಮ್ಮೆ ಮಕ್ಕಳಲ್ಲಿ ಕಂಡುಬರುವ ಸಮಸ್ಯೆಗಳು ಪಾಲಕರ ಚಿಂತೆಯನ್ನು ಹೆಚ್ಚಿಸುತ್ತವೆ. ಅಂತಹ ಸಮಸ್ಯೆಯಲ್ಲೊಂದು ಬೆಡ್ ವೆಟ್ಟಿಂಗ್ Bed Wetting.

    ಹೌದು, ಕೆಲ ಮಕ್ಕಳು ನಿದ್ರೆಯಲ್ಲಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಮಗುವಿಗೆ ಮತ್ತು ಪಾಲಕರಿಗೆ ಮುಜುಗರ ಹುಟ್ಟಿಸುವ ಸಮಸ್ಯೆ. ಎಲ್ಲಕ್ಕಿಂತ ಮೇಲಾಗಿ ಆ ಮಗು ಎಲ್ಲ ಮಕ್ಕಳಂತೆ ಆಡಲು, ಓಡಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಆ ಮಗುವಿನಲ್ಲಿ ಕೀಳರಿಮೆ ಆರಂಭವಾಗುತ್ತದೆ. ಪಾಲಕರು ಕೂಡ ಆ ಮಗುವನ್ನು ಯಾವ ಬಂಧುಗಳ ಮನೆಗೂ ಕರೆದುಕೊಂಡು ಹೋಗಿ ಒಂದು ನಾಲ್ಕೈದು ದಿನ ಇದ್ದು ಬರುವಂತಿಲ್ಲ. ಸಂಬಂಧಿಕರ ಮನೆ ಇರಲಿ ಶಾಲೆಯಲ್ಲಿ ಸಹಪಾಠಿಗಳ ಜತೆ ಪಿಕನಿಕ್‌ಗೆ ಕಳಿಸಲು ಸಹ ಆಗದ ಸ್ಥಿತಿ.

    ಅದು ಒಂದು ಮಧ್ಯಮವರ್ಗದ ಕುಟುಂಬ. ಮನೆಯಲ್ಲಿ ಪಾಲಕರು ಇಬ್ಬರು ಮಕ್ಕಳಿರುವ ಸುಶಿಕ್ಷಿತ ಕುಟುಂಬ. ಹಿರಿ ಮಗ 8 ವರ್ಷ ಮತ್ತು ಚಿಕ್ಕ ಮಗಳು 4 ವರ್ಷದವಳು. ಮಗನಿಗೆ ನಿದ್ರೆಯಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವ ಸಮಸ್ಯೆಯಿತ್ತು. ಇದಕ್ಕೆ ಪರಿಹಾರ ಏನು ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆದರೆ ಪಾಪ, ಆ ಹುಡುಗನಿಗೆ ನಿದ್ದೆಯಲ್ಲಿ ಮೂತ್ರ ಮಾಡಿಕೊಳ್ಳುವುದರ ಅರಿವೇ ಇರುವುದಿಲ್ಲ. ಈ ಸಮಸ್ಯೆ ಆತನಿಗೂ ಮುಜುಗರ, ಅಸಹ್ಯ ಮೂಡಿಸಿರುತ್ತದೆ.

    ಇದಕ್ಕೆ ಪರಿಹಾರವೇನು?
    ಸಾಮಾನ್ಯವಗಿ ಮಕ್ಕಳಲ್ಲಿ 3 ವರ್ಷಕ್ಕೆ ಮೂತ್ರ ವಿಸರ್ಜನೆಯನ್ನು ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು ಎಂಬುದರ ಬಗ್ಗೆ ತಿಳಿವಳಿಕೆ ಬಂದಿರುತ್ತದೆ. ಆದರೆ ಕೆಲ ಮಕ್ಕಳಲ್ಲಿ 5 ವರ್ಷಗಳ ನಂತರವೂ ಇದರ ತಿಳಿವಳಿಕೆ ಬರುವುದಿಲ್ಲ. ಆಗ ಮನೋವೈದ್ಯರು ಹಾಗೂ ಆಪ್ತಸಲಹೆಗಾರರ ಸಲಹೆ ಬೇಕಾಗುತ್ತದೆ. ಶಾಲಾ ಮಕ್ಕಳಲ್ಲಿ ಸುಮಾರು ಶೇಕಡಾ 3ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇದನ್ನು ನೋಡಿ ಅನೇಕ ಪಾಲಕರು ತಮ್ಮ ಮಕ್ಕಳು ಬೇಕು ಅಂತ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇಷ್ಟು ದೊಡ್ಡವರಾದರೂ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ ತಿಳಿಯುವದಿಲ್ಲ ಅಂತ ಟೀಕೆ ಕೂಡ ಮಾಡುವದನ್ನು ನಾವು ನೋಡಿದ್ದೇವೆ. ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು. ಅದರಲ್ಲಿ 2 ರೀತಿ ಇದೆ.

    ಮೊದಲನೆಯದು ಬಿಹೇವಿಯರಲ್ ಮ್ಯಾನೇಜ್‌ಮೆಂಟ್. ಇದರಲ್ಲಿ ಮಕ್ಕಳು ಸಾಯಂಕಾಲ 5 ಗಂಟೆಯ ನಂತರ ನೀರನ್ನು ಕಡಿಮೆ ಕುಡಿಯಬೇಕು ಮತ್ತು ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿ ಮಲಗಬೇಕು. ರಾತ್ರಿ ಯಾವ ಸಮಯಕ್ಕೆ ಮೂತ್ರ ವಿಸರ್ಜಿಸುತ್ತಾರೆಯೋ ಅದನ್ನು ಪಾಲಕರು ಗಮನಿಸಿ ಅದಕ್ಕಿಂತ ಮುಂಚೆ ಅಲಾರ್ಮ್ ಇಟ್ಟು ಮಕ್ಕಳನ್ನು ಎಬ್ಬಿಸಿ ಮೂತ್ರ ವಿಸರ್ಜನೆ ಮಾಡಿಸಬೇಕು. ಇದರ ಬಗ್ಗೆ ಪ್ರತಿದಿನದ ಚಾರ್ಟ್ ಮೆಂಟೇನ್ ಮಾಡಿ ಮಗುವಿಗೆ ಸಕಾರಾತ್ಮಕವಾಗಿ ಪ್ರೋತ್ಸಾಹಿಸಬೇಕು.

    ಎರಡನೆಯದಾಗಿ, ಯಾವ ಮಕ್ಕಳಿಗೆ ಈ ಎಲ್ಲ ಪ್ರಯತ್ನದ ನಂತರವೂ ಮೂತ್ರ ವಿಸರ್ಜನೆ ಹತೋಟಿಗೆ ಬರುವುದಿಲ್ಲವೋ ಅಥವಾ ಯಾರಲ್ಲಿ ಆತ್ಮ ವಿಶ್ವಾಸ, ಖಿನ್ನತೆಯ ಕೊರತೆ ಕಾಣುತ್ತೇವೆಯೋ ಅವರಿಗೆ ಮಾತ್ರೆಗಳ ಉಪಯೋಗ ಸಹಕಾರಿಯಾಗುತ್ತದೆ. ಇವೆರಡನ್ನೂ ಪಾಲಿಸಿದರೆ ಮಕ್ಕಳನ್ನು ಈ ಸಮಸ್ಯೆಯಿಂದ ಹೊರತಂದು ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts