More

    ಕರೊನಾಯುಗದಲ್ಲಿ ಮನೋಸ್ವಾಸ್ಥ್ಯ ಕಾಪಾಡಿಕೊಳ್ಳುವ ಬಗ್ಗೆ ಡಾ. ಅರುಣಾ ಯಡಿಯಾಳ ಅವರ ಸಲಹೆಗಳು ಇವು…

    ಕರೊನಾಯುಗದಲ್ಲಿ ಮನೋಸ್ವಾಸ್ಥ್ಯ ಕಾಪಾಡಿಕೊಳ್ಳುವ ಬಗ್ಗೆ ಡಾ. ಅರುಣಾ ಯಡಿಯಾಳ ಅವರ ಸಲಹೆಗಳು ಇವು...

    ಈ ಕಲಿಯುಗದಲ್ಲಿ ವೈರಾಣು ಲೋಕದಾದ್ಯಂತ ಹರಡುತ್ತಿರುವುದಕ್ಕಿಂತ ಜಾಸ್ತಿ ಭಯಾನಕವಾಗಿ ಹಾಗೂ ಜಾಸ್ತಿ ವೇಗದಲ್ಲಿ ಹರಡುತ್ತಿರುವುದು ಕರೊನಾ ವೈರಾಣುವಿನ ಕುರಿತ ವದಂತಿಗಳು, ಮಾಹಿತಿಗಳು ಹಾಗೂ ಅವುಗಳು ಹುಟ್ಟು ಹಾಕುತ್ತಿರುವ ಆತಂಕ! ನಾಳೆ ಏನು ಆದೀತು? ಹೀಗೆ ಮುಂದುವರಿದರೆ ಮುಂದೇನು ಗತಿ? ಎಂಬ ಅನಿಶ್ಚಿತತೆ ಎಂಥವರನ್ನೂ ತಲ್ಲಣಗೊಳಿಸಬಲ್ಲದು! ಅಂಥದ್ದರಲ್ಲಿ ಇದು ಜನಸ್ತೋಮದ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ ಎಂಬುದನ್ನು ಸುಲಭವಾಗೇ ಅರುಹಿಕೊಳ್ಳಬಹುದು! ‘ಹೆದರಿದವರ ಮೇಲೆ ಹಲ್ಲಿ ಹಾಕಿದಂತೆ’ ಎಂಬ ಗಾದೆ ಸಾರುವಂತೆ, ಈ ‘ಪ್ಯಾಂಡಮಿಕ್’ ಎಂಬ ಪೆಡಂಭೂತ, ಮಾನಸಿಕ ಕಾಯಿಲೆಯಿಂದ ಆಗಲೇ ಬಳಲುತ್ತಿರುವವರನ್ನು ಇನ್ನಷ್ಟು ತತ್ತರಿಸುವಂತೆ ಮಾಡಿದೆ. ಉದಾಹರಣೆಗೆ, ಆತಂಕ ಮನೋಬೇನೆಯಿಂದ ನರಳುವವರು, ಗೀಳು ಕಾಯಿಲೆ ಇರುವವವರು, ಮತ್ತಷ್ಟು ಸಂಕಟಕ್ಕೆ ಒಳಗಾಗಿದ್ದಾರೆ! ಹಾಗಾಗಿ, ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯೇ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಕೆಲ ಸಲಹೆ-ಸೂಚನೆಗಳನ್ನು ಹೊರಹಾಕಿರುವುದು ಸ್ವಾಗತಾರ್ಹ ಬೆಳವಣಿಗೆ. ಮಾನಸಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವ ಬಗೆ ಹೇಗೆ ಎಂದು ಯೋಚಿಸುತ್ತಿದ್ದಿರಾ? ಅದಕ್ಕೆ ಇಲ್ಲಿದೆ ಉತ್ತರ.

    ಮಾಹಿತಿ ಸ್ವೀಕರಣೆಗೆ ಇರಲಿ ಇತಿ-ಮಿತಿ: ಮಾಹಿತಿಯನ್ನು ಓದುತ್ತಲೇ, ನೊಡುತ್ತಲೇ ಇರಬೇಕು ಎಂಬ ನಿಯಮವಿಲ್ಲವಷ್ಟೇ! ಕಣ್ಣು ನಮ್ಮದೇ, ಕಿವಿ ನಮ್ಮದೇ, ಟೀವಿಯ ರಿಮೋಟ್ ಕಂಟ್ರೋಲ್, ಫೋನಿನ ಗುಂಡಿ ಎಲ್ಲ ನಮ್ಮದೇ! ಆದ್ದರಿಂದ ಎಷ್ಟು ಬೇಕೋ ಅಷ್ಟೇ ಮಾಹಿತಿ ಒಳ ತೆಗೆದುಕೊಳ್ಳೊಣ. ಸದಾಕಾಲ ಮಾಹಿತಿಯನ್ನೇ ಗುಡ್ಡೆ ಹಾಕುವುದರಿಂದ ಗಾಬರಿ-ಆತಂಕ ಜಾಸ್ತಿಯಾಗುತ್ತಿದೆ ಅನಿಸಿದರೆ, ಅದಕ್ಕೊಂದು ಗೆರೆ ಹಾಕಿಕೊಳ್ಳೊಣ. ನಿಯಮಿತ ಕಾಲವನ್ನು ಇಟ್ಟುಕೊಂಡು ಮಾಹಿತಿ ಸಂಗ್ರಹಿಸಿ, ಸ್ವೀಕರಿಸಿದರೆ ಸಾಕು! ಮಾಹಿತಿಯ ನೆಪದಲ್ಲಿ ತಪ್ಪುಮಾಹಿತಿ, ವದಂತಿ ತುಂಬ ಹರಡುತ್ತಿವೆ. ಆದುದರಿಂದ ಮಾಹಿತಿ ಪಡೆಯುವಾಗ ನಂಬಿಕಾರ್ಹ ಸಂಪನ್ಮೂಲಗಳಿಂದಲೇ ಪಡೆದುಕೊಳ್ಳಿ.

    ಸಾಮಾಜಿಕ ಜಾಲತಾಣಗಳ ಜಾಲದಿಂದ ಹೊರಬನ್ನಿ: ವಾಟ್ಸ್ ಆಪ್, ಫೇಸುಬುಕ್, ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ ಮಾಹಿತಿ ಜೊತೆ ವದಂತಿ, ಜನರ ಅಭಿಪ್ರಾಯ, ಕಾಮೆಂಟು, ನಗುಬಾರದ ಹಾಸ್ಯ ಎಲ್ಲವೂ ಇರುತ್ತದೆ… ಅದನ್ನು ನೋಡಿ ನೋಡಿಯೇ ಇನ್ನಷ್ಟು ಆತಂಕ ಆಗುತ್ತಿದೆ ಎನಿಸಿದರೆ ಕರೊನಾ ವೈರಾಣು ಸಂಬಂಧಿತ ಪದಗಳನ್ನು ಮ್ಯೂಟ್(ಸ್ತಬ್ಧ) ಆಗಿಸಿ, ಆ ಬಗೆಗಿನ ಸುದ್ದಿ ನಿಮ್ಮನ್ನು ಮುಟ್ಟದಂತೆ, ತಟ್ಟದಂತೆ ನೋಡಿಕೊಳ್ಳಿ. ಉದಾಹರಣೆಗೆ, ಟ್ವಿಟರ್​ನಲ್ಲಿ ಸೂಚ್ಯಪದಗಳನ್ನು(Keywords) ಸ್ತಬ್ಧಗೊಳಿಸಬಹುದು, ಕೆಲವು ಖಾತೆಗಳನ್ನು ಹಿಂಬಾಲಿಸುವುದನ್ನು ನಿಲ್ಲಿಸಬಹುದು! ವಾಟ್ಸ್​ಆಪ್​ನಲ್ಲಿಯೂ ಕೆಲವು ಗುಂಪುಗಳನ್ನು ಸ್ತಬ್ಧವಾಗಿಸಿ, ಕೆಲವಿನಿಂದ ಹೊರಬರಬಹುದು. ಫೇಸ್​ಬುಕ್ಕಿನಲ್ಲಿ ಕೆಲವು ಪೋಸ್ಟ್​ಗಳನ್ನು ಹೈಡ್ ಮಾಡಬಹುದು. ಹೀಗೆ ನಾನಾ ರೀತಿಯಲ್ಲಿ ನಮಗೆ ಬೇಡದ, ಅಧಿಕವಾದ ಮಾಹಿತಿಯಿಂದ ದೂರವಿರುವ ಪ್ರಜ್ಞಾಪೂರ್ವಕ ದೃಢನಿರ್ಧಾರ ಮಾಡಿ, ಮನೋಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು!

    ಕೈತೊಳೆಯಿರಿ… ಆದರೆ ಅತಿಯಾಗದಿರಲಿ: ಗೀಳು ಕಾಯಿಲೆ ಇರುವವರಿಗೆ, ಈ ಕಲ್ಮಶ ತಮ್ಮ ಕೈಗಂಟಿದೆ… ತಾವು ಕೈತೊಳೆಯಲೇ ಬೇಕು ಎಂಬ ಅತಿಶಯವಾದ, ಅನಗತ್ಯವಾದ, ಪುನರಾವರ್ತನೆಗೊಳ್ಳುವ ಯೋಚನೆಗಳು, ಸ್ವಭಾವಗಳು ಇರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಕೈತೊಳೆಯುವ ಗೀಳು ಜಾಸ್ತಿಯಾಗಿ ಮೇರೆ ಮೀರಬಹುದು! ಹಾಗಾಗಿ ಗೀಳುಕಾಯಿಲೆ ಇರುವವರು ಇದರ ಬಗ್ಗೆ ವಿಶೇಷ ಗಮನ ವಹಿಸಿ ಮೊದಲಿನಷ್ಟೇ ಕೈತೊಳೆದರೆ ಸಾಕು.

    ಜನರ ಜೊತೆ ಸಂಬಂಧವಿರಲಿ: ಜನರ ನಿಕಟ ಸಂಪರ್ಕ ಈ ಸಮಯದಲ್ಲಿ ಒಳ್ಳೆಯದಲ್ಲ ಎಂದ ಮಾತ್ರಕ್ಕೆ, ಜನರೊಡನೆ ಸಂಬಂಧವೇ ಕಡಿದುಕೊಳ್ಳಬೇಕೆಂದೇನೂ ಇಲ್ಲ. ಮುಂದುವರಿದ ತಂತ್ರಜ್ಞಾನದ ಲಾಭ ಪಡೆದುಕೊಂಡು, ಸ್ನೇಹಿತರೊಡನೆ, ಸಂಬಂಧಿಕರೊಡನೆ, ನೆರೆಕರೆಯವರೊಡನೆ ಮಾತಾಡಿ… ಸುಖ ದುಃಖ ಹಂಚಿಕೊಳ್ಳಿ! ಮನೆ ಒಳಗೆ ಇದ್ದರೂ, ತೀರಾ ನೀರಸವೆನಿಸದಂತೆ ಬೇರೆ ಬೇರೆ ಕೆಲಸಗಳನ್ನು ಮಾಡಿ. ಅದಕ್ಕಾಗಿ, ಮಾಡಬೇಕಿರುವ ಕೆಲಸದ ಪಟ್ಟಿ ತಯಾರು ಮಾಡಿ, ಅನುಷ್ಠಾನಕ್ಕೆ ತನ್ನಿ. ಸುಮ್ಮನೆ ಓದಬೇಕೆನಿಸಿದ ಪುಸ್ತಕ ಓದಿ, ಸಿನಿಮಾ ನೋಡಿ, ಮಕ್ಕಳೊಡನೆ ಕೂತು ಆಟ ಆಡಿ, ಚರ್ಚೆ ಮಾಡಿ, ನಕ್ಕು-ನಗಿಸಿ, ಮನೆಯಲ್ಲೇ ಅಡಿಗೆ ಮಾಡಿ, ಬೇರೆಯವರಿಗೂ ಸವಿಯಲು ನೀಡಿ… ಏನು ಮಾಡಿದರೂ ಸಮತೋಲನವಿರಲಿ!

    ಒತ್ತಡವನ್ನು ನಿರ್ವಹಿಸಿ: ನಮ್ಮ ಮನಸ್ಸನ್ನು, ಈಗಿನ ಒತ್ತಡವನ್ನು ನಿಭಾಯಿಸುವಷ್ಟು ಶಕ್ತವಾಗಿಸಲು ಹೀಗೆ ಮಾಡಬಹುದು. ಹಿತಮಿತವಾದ ಆಹಾರ, ಗಾಳಿ-ಬೆಳಕು ಸಿಗುವಂತೆ ಒಂದಿಷ್ಟು ಓಡಾಟ (ನಮ್ಮದೇ ಅಂಗಳದಲ್ಲಿ), ನಿಯಮಿತ ವ್ಯಾಯಾಮ, ಬೇಕಾದಷ್ಟು ನೀರು, ನಿದ್ರೆ… ಹೀಗೆ ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವನ್ನು ಪುಷ್ಟೀಕರಿಸುವ ಕೆಲ ವಿಧಾನಗಳ ಅನುಸರಣೆ. ಈ ಸಂದರ್ಭದಲ್ಲಿ ಮನಸ್ಸನ್ನು ಶಾಂತಗೊಳಿಸಲು, ಪಾಶ್ಚಾತ್ಯದೇಶಗಳಲ್ಲಿ ’APPLE’ ನೀತಿಯನ್ನು ಅನುಸರಿಸಲು ಸೂಚಿಸಲಾಗಿದೆ. ಏನಿದು ’APPLE’ ನೀತಿ?

    Acknowledge (ಒಪ್ಪಿಕೊಳ್ಳಿ, ಪರಿಗಣಿಸಿ): ಬರುವ ಮಾಹಿತಿಯನ್ನು, ಅದರ ಗಂಭೀರತೆಯನ್ನು, ಗಮನಿಸಿ, ಪರಿಗಣಿಸಿ, ಒಪ್ಪಿಕೊಳ್ಳಿ. ದಿನದಿನವೂ ಒಂದಿಷ್ಟು ಮಾಹಿತಿಯನ್ನು ಮಾಹಿತಿಯಂತೆಯೇ ಪರಿಷ್ಕರಿಸಿ.

    Pause (ತಡೆಯಿರಿ, ವಿರಮಿಸಿ): ಬಂದ ಎಲ್ಲ ಮಾಹಿತಿಗಳತ್ತ ಪ್ರತಿಕ್ರಿಯಿಸದಿರಿ. ಕ್ಷಣ ಕ್ಷಣವೂ ನಿಮ್ಮ ಪ್ರತಿಕ್ರಿಯೆಗಳನ್ನು ಸ್ತಬ್ಧವಾಗಿಸಿ, ದೀರ್ಘಶ್ವಾಸ ತೆಗೆದುಕೊಂಡು… ನಿರಾಳರಾಗಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿ.

    Pull Back (ಹಿಂದೆಳೆದುಕೊಳ್ಳಿ): ಮಾಹಿತಿಯನ್ನು ನಂತರದ ನಿಮ್ಮ ಯೋಚನಾ ಧಾಟಿಯನ್ನು ಹಿಡಿದಿಟ್ಟುಕೊಳ್ಳಿ. ಸುಮ್ಮನೆ ಮನಸ್ಸಿನಲ್ಲಿ ಮುಂದಾಗುವ ಅನಾಹುತಗಳ ಬಗ್ಗೆ ಊಹಾಪೋಹಗಳನ್ನು ಮಾಡುತ್ತ ಗೊಂದಲಕ್ಕೀಡಾಗದಿರಿ.

    Let go (ಬಿಟ್ಟುಬಿಡಿ): ಮನಸ್ಸಿಗೆ ಬರುವ ಎಲ್ಲ ದೂರಾಲೋಚನೆ, ಅಲ್ಲಲ್ಲೇ ಬಿಟ್ಟುಬಿಡಿ. ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಂಡು, ಮನಸ್ಸಲ್ಲೇ ಇಟ್ಟುಕೊಂಡು ತತ್ತರಿಸಬೇಡಿ. ಜಾಸ್ತಿ ಪ್ರತಿಕ್ರಿಯಿಸದೆ ಬಂದ ಯೋಚನೆಯನ್ನು ಹಾಗೆ ತೇಲಿ ಹೋಗಲು ಬಿಟ್ಟು ಬಿಡಿ!

    Explore (ಅನ್ವೇಷಿಸಿ): ಈಗಿನ ಗಳಿಗೆಯಲ್ಲಿ, ವಾಸ್ತವದಲ್ಲಿ ಮನಸ್ಸು ನೆಟ್ಟು ಅನ್ವೇಷಿಸಿ. ನಿಮ್ಮನ್ನು, ನಿಮ್ಮ ಅನುಭೂತಿಗಳನ್ನು, ಸುತ್ತಲಿನ ವಾತಾರಣವನ್ನು ಗಮನಿಸಿ. ಇಂದು, ಈಗ, ಮಾಡಬಹುದಾದನ್ನು ಮಾಡಿ. ನಾಳೆಯ ಚಿಂತೆ ನಾಳೆಗೆ ಬಿಡಿ. ಇವೆಲ್ಲವೂ ಕರೊನಾ ವೈರಾಣು ತಾಂಡವ ಆಡುತ್ತಿರುವ ಯು.ಕೆ. ದೇಶದಿಂದ ಬಂದಿರುವ ಮಾಹಿತಿ. (ಸಂಪನ್ಮೂಲ ಮೂಲ www.bbc.co.uk). ನಿಮ್ಮಂತೆ ನಾನೂ ಕರೊನಾ ಕೃಪೆಯಿಂದ ಮನೆಯಲ್ಲಿ ಅಷ್ಟೋ ಇಷ್ಟೋ ಹೊತ್ತು ಕೂರುವಂತಾದಾಗ ಬರೆದದ್ದು, ಓದಿ, ಹೇಗೂ ಈಗ ಸಮಯವಿದೆಯಲ್ಲಾ?!

    (ಲೇಖಕರು ಮನೋವಿಜ್ಞಾನ ಪ್ರಾಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts