More

    ದುಃಖದಿಂದ ಬಿಡುಗಡೆ ಪಡೆಯುವುದು ಹೇಗೆ?

    ದುಃಖದಿಂದ ಬಿಡುಗಡೆ ಪಡೆಯುವುದು ಹೇಗೆ?ಹೇಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೋ ಹಾಗೆಯೆ ಕಷ್ಟಗಳನ್ನು ಯುಕ್ತವಾದ ಇನ್ನೊಂದು ಪರಿಶ್ರಮದಿಂದಲೇ ಪರಿಹರಿಸಬೇಕಾಗುತ್ತದೆ. ಪೂರ್ಣ ಅರಿವಿನಿಂದ, ನಿರ್ದಿಷ್ಟ ಉಪಾಯದಿಂದ ಹಾಗೂ ಸಾಧನೆಯಿಂದ ಮುಂದೆ ಬರಬಹುದಾದ ಕಷ್ಟಗಳನ್ನು ತಡೆಯಬಹುದು.

    ಸುಖ-ದುಃಖವೆಂಬುದು ನಾವೆಲ್ಲರೂ ಬದುಕಿನಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ಅನುಭವಿಸುವ ವಿಷಯ. ಇದು ನಾವು ಅತಿ ನಿಕಟವಾಗಿ ಜೀವನದ ಉದ್ದಕ್ಕೂ ಅನಿವಾರ್ಯವಾಗಿ ಎದುರಿಸಬೇಕಾದ ಸಂಗತಿ. ಆದ್ದರಿಂದ ಇದರ ನಿಜವಾದ ಅರ್ಥವನ್ನು ತಿಳಿಯುವುದು ಆವಶ್ಯಕ. ಸುಖದುಃಖವೆಂಬುದು ಒಂದೇ ನಾಣ್ಯದ ಎರಡು ಮುಖಗಳಂತೆ. ಸುಖವನ್ನು ಬಯಸಿದವನಿಗೆ ದುಃಖ ತಪ್ಪಿದ್ದಲ್ಲ. ದುಃಖ ಅನುಭವಿಸಿದ ಮೇಲೆ ಸ್ವಲ್ಪವಾದರೂ ಸುಖ ಇದ್ದೇ ಇರುವುದು. ಸುಖ-ದುಃಖವೆಂಬ ದ್ವಂದ್ವವು ಅನುಭವಗಮ್ಯವಾದರೂ ಸಾಮಾನ್ಯ ಮನುಷ್ಯ ಇದರ ಒಳಮರ್ಮವನ್ನು ಚೆನ್ನಾಗಿ ಅರಿಯದಿರುವುದರಿಂದ ಅದು ಅವನಿಗೆ ಪರಿಹರಿಸಲಾಗದ ಜಟಿಲ ಸಮಸ್ಯೆಯಾಗಿದೆ. ಈ ದ್ವಂದ್ವದ ಒಗಟು ಮನುಷ್ಯನ ಬುದ್ಧಿಗೆ ಪ್ರಕೃತಿ ಒಡ್ಡಿದ ಸವಾಲು. ಆದಿಮಾನವನಿಂದ ಇವತ್ತಿನ ನಾಗರಿಕ ಸುಸಂಸ್ಕೃತ ಮಾನವನವರೆಗೆ ಮನುಷ್ಯ ಕಷ್ಟಗಳನ್ನು ಹೋಗಲಾಡಿಸಲು ಮತ್ತು ಸುಖವನ್ನು ಪಡೆಯಲು ಅಸಂಖ್ಯ ಉಪಾಯಗಳನ್ನೂ, ಸಾಧನಗಳನ್ನೂ ಕಂಡುಹಿಡಿಯುತ್ತ ಮತ್ತು ಬಳಸುತ್ತಾ ಬಂದಿದ್ದಾನೆ. ಈ ಪ್ರಕ್ರಿಯೆಯಲ್ಲಿ ನಾಗರಿಕತೆ ಮತ್ತು ಸಂಸ್ಕೃತಿಗಳನ್ನು ಬೆಳೆಸುತ್ತಾ ಬಂದಿದ್ದಾನೆ. ಆದರೆ ಇಂದಿನ ಪರಿಸ್ಥಿತಿ ಗಮನಿಸಿದಾಗ ಸುಖದ ಸಾಧನಗಳು ಹೆಚ್ಚಾದಂತೆ ದುಃಖ ಹೆಚ್ಚುತ್ತಾ ಹೋಗುತ್ತಿರುವುದು ಕಂಡುಬರುತ್ತದೆ. ಉದಾಹರಣೆಗೆ ರೋಗದ ಉಪಶಮನಕ್ಕೆ ಔಷಧಗಳು ಮತ್ತು ಚಿಕಿತ್ತಾ ವಿಧಾನಗಳು ಹೆಚ್ಚಿದಷ್ಟೂ ರೋಗಗಳ ಪ್ರಕಾರ ಹೆಚ್ಚುತ್ತಿದೆ. ಸೌಲಭ್ಯಗಳು ಹೆಚ್ಚಿದಷ್ಟೂ ಸಮಸ್ಯೆಗಳು ರಕ್ತಬೀಜಾಸುರನಂತೆ ನೂರಾರು ಸಹಸ್ರಾರು ರೂಪ ತಾಳಿ ನಮ್ಮನ್ನು ಅಸಂಖ್ಯ ರೀತಿಯಲ್ಲಿ ಪೀಡಿಸುತ್ತಲೇ ಇವೆ.

    ಮಹತ್ವದ ಪ್ರಶ್ನೆ: ಹಿಂದಿನ ಕಾಲದಿಂದ ಎಲ್ಲ ಬುದ್ಧಿಜೀವಿಗಳನ್ನು ಮತ್ತೆಮತ್ತೆ ತೀವ್ರವಾಗಿ ಕಾಡಿದ ಪ್ರಶ್ನೆಗಳಲ್ಲಿ ಅತಿ ಪ್ರಮುಖವಾದದ್ದು ಆತ್ಯಂತಿಕ ತಾಪತ್ರಯ ನಿವೃತ್ತಿ ಮತ್ತು ಸುಖಪ್ರಾಪ್ತಿ ಹೇಗೆ ಸಾಧ್ಯ ಎಂಬುದು. ಇದು ಎಲ್ಲಾ ಶಾಸ್ತ್ರಗಳ, ಧರ್ಮದ ಮತ್ತು ವಿಜ್ಞಾನದ ಗುರಿಯಾಗಿದೆ. ಎಲ್ಲ ಧರ್ಮಗಳೂ ತತ್ತ್ವಶಾಸ್ತ್ರಗಳೂ ವಿಜ್ಞಾನಗಳೂ ಈ ಸವಾಲನ್ನು ಬೇರೆ ಬೇರೆ ರೀತಿಯಲ್ಲಿ ಎದುರಿಸಿವೆ. ಕೆಲವು ಮೂಲಭೂತ ಪ್ರಶ್ನೆಗಳ ಮೂಲಕ ದುಃಖ ನಿವೃತ್ತಿಯ ಹಾಗೂ ಸುಖಪ್ರಾಪ್ತಿಯ ವಿಶ್ಲೇಷಣೆ ಪ್ರಸ್ತುತ. ‘ದುಃಖ- ತ್ರಯಾಭಿಘಾತಾತ್ ಜಿಜ್ಞಾಸಾ’- ಅಂದರೆ ‘ದುಃಖತ್ರಯಗಳನ್ನು ನಿವಾರಿಸುವುದಕ್ಕೋಸ್ಕರ ವಿಚಾರ ಮಾಡೋಣ’ ಎಂದು ಸಾಂಖ್ಯಶಾಸ್ತ್ರದಲ್ಲಿ ಪ್ರಾರಂಭದಲ್ಲೇ ಹೇಳಲಾಗಿದೆ.

    ದುಃಖಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಈ ರೀತಿಯಾಗಿ ನಿರೂಪಿಸಬಹುದು: ದುಃಖಕ್ಕೆ ಕಾರಣ ಯಾವುದು? ಈ ಜೀವನದಲ್ಲಿ ದುಃಖದ ವೈಶಿಷ್ಟ್ಯ ಮತ್ತು ಅದರ ಪಾತ್ರವೇನು? ದುಃಖದಿಂದ ನಿವೃತ್ತಿ ಪಡೆಯುವ ಮಾರ್ಗ ಯಾವುದು? ಭಗವಂತ ಈ ಪ್ರಪಂಚದಲ್ಲಿ ಯಾತಕ್ಕಾಗಿ ದುಃಖ ಇಟ್ಟಿದ್ದಾನೆ? ಸುಖ ಬಯಸಿದವನಿಗೆ ದುಃಖ ಅನಿವಾರ್ಯವೇ? ನಿಜವಾದ ಶಾಶ್ವತ ಸುಖ ಎಲ್ಲಿದೆ? ಅದನ್ನು ಹೇಗೆ ಪಡೆಯಬಹುದು? ಸುಖದುಃಖಗಳ ದ್ವಂದ್ವದಿಂದ ಪಾರಾಗುವುದು ಹೇಗೆ?

    ಸುಖದುಃಖಗಳಾಚೆ: ಸುಖದುಃಖಗಳಿಗೆ ಅತೀತವಾದ ಒಂದು ತತ್ತ್ವ ನಮ್ಮಲ್ಲಿ ಇದೆಯೆ ಎಂಬುದನ್ನು ನಾವು ತಿಳಿಯಬೇಕು. ಹೌದು, ಇದೆ ಎಂದು ಶಾಸ್ತ್ರ ಮತ್ತು ಜ್ಞಾನಿಗಳ ಅನುಭವ ಹೇಳುತ್ತದೆ. ಎಲ್ಲಿಯವರೆಗೆ ನಮ್ಮ ಅರಿವು ಇಂದ್ರಿಯಗೋಚರ ಪ್ರಪಂಚಕ್ಕೆ ಸೀಮಿತವಾಗಿದ್ದು ದೇಹವೇ ನಾವೆಂದು ತಿಳಿದು ಜೀವಿಸುತ್ತೇವೆಯೊ ಅಲ್ಲಿಯವರೆಗೆ ಸುಖದುಃಖಗಳು ತಪ್ಪಿದ್ದಲ್ಲ ಎಂದು ಶಾಸ್ತ್ರಗಳು, ಮಹಾತ್ಮರು ಸಾರುತ್ತಾರೆ. ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳುತ್ತಾನೆ: ‘ಮಾತಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖ ದುಃಖದಾಃ | ಆಗಮಾಪಾಯಿನೋ ಅನಿತ್ಯಾಃ ತಾನ್ ತಿತಿಕ್ಷಸ್ವ ಭಾರತ ||’ -‘ಇಂದ್ರಿಯಗಳಿಗೂ ವಿಷಯಗಳಿಗೂ ಆಗುವ ಸ್ಪರ್ಶಗಳು ಶೀತೋಷ್ಣಗಳನ್ನೂ ಸುಖದುಃಖಗಳನ್ನೂ ಕೊಡತಕ್ಕವುಗಳು. ಅವು ಬಂದು ಹೋಗುವ ಸ್ವಭಾವವುಳ್ಳವುಗಳು, ಅನಿತ್ಯಗಳು. ಆದುದರಿಂದ ಎಲೈ ಅರ್ಜುನ, ಅವುಗಳನ್ನು ಸಹಿಸಿಕೊ.’ ಯಾವಾಗ ನಮ್ಮ ಅರಿವು ವಿವೇಕ ಬುದ್ಧಿಯ ಪ್ರಕಾಶದಿಂದ ಜಾಗ್ರತಗೊಂಡು ನಮ್ಮ ಅಸ್ತಿತ್ವದ ಮೂಲದಲ್ಲಿರುವ ಆತ್ಮಚೈತನ್ಯದಲ್ಲಿ ನೆಲೆ ನಿಲ್ಲುವುದೊ ಆಗ ಮಾತ್ರ ದ್ವಂದ್ವದಿಂದ ನಿವೃತ್ತಿ ಸಾಧ್ಯ.

    ಸುಖದುಃಖಗಳ ನಿಜಸ್ವರೂಪ ತಿಳಿಯದಿರುವುದು ನಮ್ಮ ಹೆಚ್ಚಿನ ದುಃಖಕ್ಕೆ ಕಾರಣ. ದುಃಖ ಎಂಬುದು ಒಂದು ಪರಿಣಾಮ. ಅದಕ್ಕೆ ತನ್ನದೇ ಆದ ಅಸ್ತಿತ್ವವಿಲ್ಲ. ಅದು ನಮ್ಮ ನಿಜಸ್ವರೂಪವಲ್ಲ. ಇದು ಪ್ರಕೃತಿಗೆ ಸಂಬಂಧಪಟ್ಟದ್ದು. ಪುರುಷನಿಗೆ ಸಂಬಂಧಪಟ್ಟಿದ್ದಲ್ಲ. ಎಲ್ಲಿಯವರೆಗೆ ಅಹಂಕಾರಜನಿತ ಪ್ರವೃತ್ತಿಗೆ ಬದ್ಧರಾಗಿರುವೆವೊ ಅಲ್ಲಿಯವರೆಗೆ ದುಃಖದಿಂದ ಆತ್ಯಂತಿಕ ನಿವೃತ್ತಿ ಸಾಧ್ಯವಿಲ್ಲ. ಸುಖವು ಇಂದ್ರಿಯ ಮತ್ತು ವಸ್ತುಗಳ ಸಂಯೋಗದಿಂದ ಮನಸ್ಸಿನಲ್ಲಿ ಉಂಟಾದ ಒಂದು ಅಲೆ, ಮಾನಸಿಕ ಸ್ಥಿತಿ ಎನ್ನಬಹುದು. ಅದೇ ರೀತಿ ದುಃಖ ಕೂಡ. ಯಾವುದೂ ಶಾಶ್ವತವಲ್ಲ. ದೇಹಕ್ಕೆ ನೋವಾದರೂ, ಸುಖದ ಅನುಭವವಾದರೂ ಮನಸ್ಸಿನ ಮೂಲಕ ಮಾತ್ರ ತಿಳಿಯಲು ಸಾಧ್ಯ. ಈ ಅನುಭವ ಮುಖ್ಯವಾಗಿ ಮನಸ್ಸಿನ ಮೂಲದಲ್ಲಿರುವ ಅಹಂಕಾರಕ್ಕೆ, ಆದರೆ ಬುದ್ಧಿಗಲ್ಲ. ಬುದ್ಧಿಯ ಬೆಳಕಿನಲ್ಲಿ ಸುಖದುಃಖಗಳ ಅನುಭವ ಅಹಂಕಾರಕ್ಕೆ ಆಗುವುದು. ಬುದ್ಧಿಗೆ ತನ್ನದೇ ಆದ ಸುಖವೂ ಇಲ್ಲ ದುಃಖವೂ ಇಲ್ಲ; ಅದು ಆತ್ಮಚೈತನ್ಯದ ಪ್ರಕಾಶ.

    ಕ್ಲೇಶನಿವೃತ್ತಿ: ನಮ್ಮ ಸಹಜವಾದ ಸ್ವರೂಪ ಆನಂದ, ಆನಂದವೇ ನಮ್ಮ ನಿಜವಾದ ಸ್ವರೂಪವೆಂದು ಉಪನಿಷತ್ತುಗಳು ಹೇಳುತ್ತವೆ. ಹಾಗಾದರೆ ದುಃಖಕ್ಕೆ ಮೂಲ ಕಾರಣ ಯಾವುದು? ಅವಿದ್ಯೆ ಅಥವಾ ಅಜ್ಞಾನ. ನಮ್ಮ ನಿಜಸ್ವರೂಪದ ಬಗ್ಗೆ ಅಂದರೆ, ಮನಸ್ಸಿಗೆ ಮತ್ತು ಶರೀರಕ್ಕೆ ಅತೀತವಾದ ನಮ್ಮ ಆತ್ಮಸ್ವರೂಪದ ಬಗೆಗಿನ ಅಜ್ಞಾನ. ದುಃಖವೆಂಬುದು ಕೃತಕ. ನಮ್ಮ ಅಹಂಕಾರವು ಆಸೆ, ಕ್ಲೇಶ, ಕರ್ಮಗಳಿಂದ ಹೆಣೆದಂತಹ ಅಜ್ಞಾನದ ಪೊರೆ. ಪತಂಜಲಿ ಮಹರ್ಷಿಗಳು ‘ಯೋಗಸೂತ್ರ’ದಲ್ಲಿ ‘ಅವಿದ್ಯಾ ಅಸ್ಮಿತಾ ರಾಗ ದ್ವೇಷ ಅಭಿನಿವೇಶಾಃ ಕ್ಲೇಶಾಃ’ ಎಂದು ದುಃಖದ ವಿಶ್ಲೇಷಣೆಯನ್ನು ಮಾಡು ತ್ತಾರೆ. ಅವಿದ್ಯೆ ಎಂಬುದು ಮೂಲ ಕಾರಣ. ಅದರಿಂದ ಅಸ್ಮಿತಾ – ಎಂದರೆ ಅಹಂಕಾರ ಹುಟ್ಟುತ್ತದೆ. ಅದರಿಂದ ರಾಗದ್ವೇಷ, ಅಭಿನಿವೇಶಗಳು ಹುಟ್ಟುತ್ತವೆ. ರಾಗವೆಂದರೆ ಸುಖಕರವಾದುದನ್ನು ಬಯಸುವುದು. ದ್ವೇಷವೆಂದರೆ ದುಃಖಾತ್ಮಕವಾದುದನ್ನು ತಿರಸ್ಕರಿಸುವುದು. ಅಭಿನಿವೇಶವೆಂದರೆ ಸ್ಥೂಲ ಜೀವನಕ್ಕೆ ಅಂಟಿ ಕೊಳ್ಳುವುದು. ಇವುಗಳೆಲ್ಲವೂ ಕ್ಲೇಶಗಳೇ- ಅಂದರೆ ನೋವನ್ನುಂಟು ಮಾಡುವವು. ಯಾವಾಗ ನಮಗೆ ಆತ್ಮಜ್ಞಾನವೆಂಬ ಬೆಳಕಿನ ಅನುಭೂತಿಯಾಗುತ್ತದೊ ಆಗ ಈ ಅಜ್ಞಾನವೆಂಬ ಕತ್ತಲೆಯೊಳಗಿನ ಕ್ಲೇಶದಾಯಕ ಅನುಭವವೇ ಇರುವುದಿಲ್ಲ. ಇದು ನಿಜವಾದ ದ್ವಂದ್ವಾತೀತವಾದ ಸುಖ, ಆನಂದ. ಬುದ್ಧ ಇದನ್ನು ಇನ್ನೂ ಸರಳವಾಗಿ ದುಃಖಕ್ಕೆ ಮೂಲ ಕಾರಣ ಆಸೆ ಎಂದು ಹೇಳಿದನು. ಆಸೆಯಿಂದ ಮುಕ್ತರಾದೆವು ಎಂದರೆ ದುಃಖದಿಂದ ಮುಕ್ತರಾದಂತೆ ಎಂದನು ಬುದ್ಧ.

    ಮನಸ್ಸೇ ದುಃಖಕ್ಕೆ ಕಾರಣ, ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’- ಎಲ್ಲ ಕ್ಲೇಶಗಳ ವಾಸಸ್ಥಾನ ಮತ್ತು ಅಭಿವ್ಯಕ್ತಿ ಮನಸ್ಸಿನ ಮೂಲಕವಾದುದರಿಂದ ಮನಸ್ಸಿನ ಸ್ಥಿತಿಗತಿಗಳು ನಮ್ಮ ಎಲ್ಲಾ ರೀತಿಯ ಅನುಭವಕ್ಕೆ ಕಾರಣ ಎನ್ನಲಾಗಿದೆ. ಮನಸ್ಸು ಕ್ಲೇಶರಹಿತವಾದರೆ, ಅಂದರೆ ರಾಗದ್ವೇಷ ಅಭಿನಿವೇಶಗಳಿಂದ ಮುಕ್ತವಾಗಿ ಶುದ್ಧವಾದರೆ ಪುರುಷನ ಪ್ರಕಾಶ ಮನಸ್ಸಿನ ಮೂಲಕ ವ್ಯಕ್ತವಾಗಿ ಜ್ಞಾನಪ್ರಾಪ್ತಿಯಾಗುತ್ತದೆ. ಆದ್ದರಿಂದಲೇ ಶುದ್ಧ ಮನಸ್ಸು ಆತ್ಮಸದೃಶವೆಂದು ಶ್ರೀರಾಮಕೃಷ್ಣರು ಹೇಳುತ್ತಾರೆ.

    ಕರ್ಮನಿಯಮ: ಅಜ್ಞಾನ ಮತ್ತು ಅಹಂಕಾರದ ಪ್ರಭಾವದಿಂದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಗೆ ಒಳಗಾಗಿ ಯಾವುದೇ ಕರ್ಮವನ್ನು ಮಾಡಿದರೆ ಅದು ಕುಕರ್ಮವಾಗುತ್ತದೆ, ಬಂಧನ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಈ ಕಾರ್ಯಕಾರಣ ಪ್ರಪಂಚದಲ್ಲಿ ಕರ್ಮನಿಯಮದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕರ್ಮದ ಫಲವು ಎಲ್ಲಿ, ಯಾವ ಸಮಯದಲ್ಲಿ, ಯಾವ ರೂಪದಲ್ಲಿ, ಯಾವ ಜನ್ಮದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದಲೇ ‘ಗಹನಾ ಕರ್ಮಣೋ ಗತಿಃ |’- ಕರ್ಮದ ಗತಿ ಗಹನವಾದುದೆಂದು ಶ್ರೀಕೃಷ್ಣನು ಹೇಳುತ್ತಾನೆ.

    ಪ್ರತಿಯೊಂದು ಕರ್ಮವೂ ಎರಡು ರೀತಿಯ ಪರಿಣಾಮ ಬೀರುತ್ತದೆ. ಒಂದು ಪರಿಣಾಮ ವ್ಯಕ್ತಿಯ ಮೇಲೆ; ಮತ್ತೊಂದು ವಿಶ್ವಮನಸ್ಸಿನ ಮೇಲೆೆ. ಇದೇ ಮುಂದೆ ನಾವು ಹುಟ್ಟುವ ದೇಹ, ಆರೋಗ್ಯ, ಜಾತಿ, ಆಯುಸ್ಸು ಮುಂತಾದವುಗಳಿಗೆ ಕಾರಣ. ನಾವು ಬದಲಾಯಿಸಲಾಗದ ಪರಿಸ್ಥಿತಿ ಪ್ರಾರಬ್ಧವಾಗಿ ಪರಿಣಮಿಸುತ್ತದೆ. ಸುಖದುಃಖಗಳ ಸಮಸ್ಯೆಯನ್ನು ವ್ಯಷ್ಟಿ-ಸಮಷ್ಟಿಗಳ ಹೊಂದಾಣಿಕೆಯ ಸಮಸ್ಯೆಯೆಂದೂ ಪರಿಗಣಿಸಬಹುದು. ನಾವೆಲ್ಲ ವಿಶ್ವಧರ್ಮದ ನಿಯಮ, ಪ್ರಕೃತಿಯ ನಿಯಮಗಳಿಂದ ಬದ್ಧರಾಗಿದ್ದೇವೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ, ಸಮಾಜದ ಪರಿಸ್ಥಿತಿ ಇವೆಲ್ಲಾ ಒಂದಕ್ಕೆ ಇನ್ನೊಂದು ಸಂಬಂಧಪಟ್ಟವು. ನಾವು ಇದನ್ನೆಲ್ಲ ಉಲ್ಲಂಘಿಸಿ ಸಾಮರಸ್ಯವಿಲ್ಲದೆ, ಅಧಾರ್ವಿುಕ ಜೀವನ ನಡೆಸಿದರೆ ವ್ಯಕ್ತಿಯಾಗಲಿ, ಸಮಾಜವಾಗಲಿ ಶಾಂತಿ, ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ. ನಾವೆಲ್ಲರೂ ಈ ಪ್ರಕೃತಿಯ ಅವಿಭಾಜ್ಯ ಅಂಗ. ಇಂಥ ಸಮಗ್ರ ದೃಷ್ಟಿಯಿಂದ ಮಾತ್ರ ಸಮತೂಕದ ಜೀವನ ಸಾಧ್ಯ. ಸಮಸ್ಯೆಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಪ್ರಕೃತಿ ಸಹಜ ಸಮಸ್ಯೆ (Existential problems) ಮತ್ತು ಮಾನವನಿರ್ವಿುತ ಸಮಸ್ಯೆ (man-made problems). ಜನ್ಮ, ಮೃತ್ಯು, ಮುಪ್ಪು, ವ್ಯಾಧಿ, ನೆರೆ, ಕ್ಷಾಮ, ಭೂಕಂಪ ಮುಂತಾದುವು ಪ್ರಕೃತಿದತ್ತವಾದುವು. ಯುದ್ಧ, ಹಿಂಸೆ, ಶೋಷಣೆ, ಜಾತಿಭೇದ, ಕ್ಲೇಶ, ಮದಮಾತ್ಸರ್ಯ, ಅನ್ಯಾಯ, ಚಿಂತೆ, ಕುಟುಂಬ ಅಥವಾ ರಾಷ್ಟ್ರಗಳ ನಡುವಿನ ವೈಷಮ್ಯ ಇತ್ಯಾದಿ ಮನುಷ್ಯ ನಿರ್ವಿುತ ಸಮಸ್ಯೆಗಳು. ಮಾನವನೇ ಪ್ರಯತ್ನಪಟ್ಟು ಈ ಸಮಸ್ಯೆಗಳಿಂದ ಮುಕ್ತನಾಗಬೇಕು. ಶಿಕ್ಷಣ, ವೈಜ್ಞಾನಿಕತೆ, ವಾಣಿಜ್ಯಾಭಿವೃದ್ಧಿ, ಉತ್ತಮವಾದ ನೈತಿಕ ಚಾರಿತ್ರ್ಯ – ಇವುಗಳಿಂದ ದುಃಖದ ತೀವ್ರತೆ ಮತ್ತು ಪರಿಣಾಮವನ್ನು ಸಾಕಷ್ಟು ಕಡಿಮೆ ಮಾಡಬಹುದು.

    ಸುಖಪ್ರಾಪ್ತಿ ಮತ್ತು ದುಃಖನಿವೃತ್ತಿಯ ಇತರ ಉಪಾಯಗಳನ್ನೂ ನಾವು ನೋಡಬಹುದು. ದುಃಖದ ತೀವ್ರತೆ ಕಡಿಮೆ ಮಾಡಲು ನಮ್ಮ ಮನೋಭಾವ ಬದಲಾಗಬೇಕು. ಕಷ್ಟ ಬಂದಾಗ ಅದಕ್ಕೆ ಬೆನ್ನು ಹಾಕಿ ಓಡದೆ, ಸಾಹಸ, ಆತ್ಮವಿಶ್ವಾಸ, ಅರಿವಿನಿಂದ ಎದುರಿಸಿದರೆ ಈ ಪ್ರಕೃತಿಯ ಪರೀಕ್ಷೆಯಿಂದ ತೇರ್ಗಡೆಯಾಗಬಹುದು. ಆದ್ದರಿಂದಲೇ ಸ್ವಾಮೀಜಿ ‘face the brute’ (ಪಾಶವೀಶಕ್ತಿಯನ್ನು ಎದುರಿಸು) ಎಂದಿದ್ದಾರೆ. ಮುಳ್ಳನ್ನು ಹೇಗೆ ಮುಳ್ಳಿನಿಂದಲೇ ತೆಗೆಯಬೇಕಾಗುವುದೋ ಹಾಗೆಯೆ ಕಷ್ಟಗಳನ್ನು ಯುಕ್ತವಾದ ಇನ್ನೊಂದು ಪರಿಶ್ರಮದಿಂದಲೇ ಪರಿಹರಿಸಬೇಕಾಗುತ್ತದೆ. ಪೂರ್ಣ ಅರಿವಿನಿಂದ, ನಿರ್ದಿಷ್ಟ ಉಪಾಯದಿಂದ ಹಾಗೂ ಸಾಧನೆಯಿಂದ ಮುಂದೆ ಬರಬಹುದಾದ ಕಷ್ಟಗಳನ್ನು ತಡೆಯಬಹುದು. ಇದು ಆಧ್ಯಾತ್ಮಿಕ ಜೀವನಕ್ಕೂ ವ್ಯಾವಹಾರಿಕ ಜೀವನಕ್ಕೂ ಅನ್ವಯಿಸುತ್ತದೆ. ಪ್ರಾಯಶ್ಚಿತ್ತ, ತಪಸ್ಸು, ಧ್ಯಾನ, ಯಜ್ಞ ಎಂಬ ಪದಗಳ ಅರ್ಥ ಇದೇ.

    ಸಾಂಕ್ರಾಮಿಕ ರೋಗದಿಂದ ತಪ್ಪಿಸಿಕೊಳ್ಳಬೇಕಾದರೆ ಕಷ್ಟಪಟ್ಟು ವ್ಯಾಯಾಮ ಮಾಡುವುದು ಮತ್ತು ಆರೋಗ್ಯ ನಿಯಮಗಳನ್ನು ಅನುಸರಿಸುವುದು ಮಾತ್ರವಲ್ಲದೇ ಚುಚ್ಚುಮದ್ದನ್ನೂ ತೆಗೆದುಕೊಳ್ಳಬೇಕಾಗುತ್ತದೆ. (prevention is better than cure- ಚಿಕಿತ್ಸೆಗಿಂತ ನಿರೋಧ ಲೇಸು). ವ್ಯಾವಹಾರಿಕ ಅಜ್ಞಾನದಿಂದ ಬರಬಹುದಾದ್ದನ್ನು, ಕಷ್ಟಪಟ್ಟು ಸರಿಯಾದ ವ್ಯವಹಾರ ಜ್ಞಾನ ಪಡೆಯುವುದರಿಂದ ತಡೆಗಟ್ಟಬಹುದು. ಕೆಲವು ದುಃಖಗಳನ್ನು ಮುಂಜಾಗರೂಕತೆಯಿಂದ ತಡೆಗಟ್ಟಬಹುದು. ಒಟ್ಟಿನಲ್ಲಿ ಮಾನವ ತನ್ನ ಕಷ್ಟವನ್ನು ಪರಿಹರಿಸಲು ಭಗವತ್ ಪ್ರಾರ್ಥನೆ ಮೂಲಕ ಭಗವತ್ ಕೃಪೆ ಪಡೆಯುವುದರ ಜೊತೆ ಜೊತೆಗೆ ಬುದ್ಧಿಯ ಬಳಕೆಯ ಅನಿವಾರ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ನಾವು ಬಳಸುವ ಬುದ್ಧಿಯೂ ಭಗವದಿಚ್ಛಾನುವರ್ತಿಯಾಗಿರಬೇಕು ಮತ್ತು ನಾವು ಯಾವಾಗಲೂ ಭಗವಂತನೊಡನಿರುವುದನ್ನು ಕಲಿಯಬೇಕು. ಮಗು ತಾಯಿಯೊಡನಿರುವಾಗ ಪೂರ್ಣಭರವಸೆಯಿಂದ ಇರುತ್ತದೆ, ಪೂರ್ಣ ಸುರಕ್ಷತೆಯ ಭಾವ ಅದಕ್ಕಿರುತ್ತದೆ. ಹಾಗೆಯೇ ಭಗವಂತನ ಆಶ್ರಯ ಪಡೆದಾಗ ಯಾವ ದುಃಖದ ಬೋಧೆಯೂ ನಮಗೆ ಉಂಟಾಗುವುದಿಲ್ಲ.

    (ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts