More

    ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!

    | ಕಿರಣ್ ಪೈ ಮಂಗಳೂರು

    ಸಾಮಾನ್ಯವಾಗಿ ಅಂದ ಚಂದದ ದುಂಡಗಿನ,ಬೆಣ್ಣೆಯಂತೆ ಮುದ್ದಾದ ಮಗುವಿಗೆ ಅಮೂಲ್ ಬೇಬಿ ಅಂತ ಕರೆಯುತ್ತಾರೆ. ಕಾರಣ, ಅಮುಲ್ ಜಾಹೀರಾತಿನಲ್ಲಿ ಕಂಡು ಬರುವ ಮಗು. 1966 ರಲ್ಲಿ ಮೊದಲ ಮುದ್ರಿತ ಅಮೂಲ್ ಜಾಹೀರಾತು ಪ್ರಕಟವಾಗುತ್ತದೆ. ಹೆಚ್ಚು ಕಮ್ಮಿ 6 ದಶಕಗಳಿಂದ ಜನಮನದಲ್ಲಿ ಅಮುಲ್ ಬೇಬಿ ಅಚ್ಚಳಿಯದೆ ನೆನಪುಳಿದಿದೆ. ಜಾಹೀರಾತಿನ ಮೊದಲ ಮಗು ಯಾರು? ಈಗ ಹೇಗಿದ್ದಾರೆ?ಅವರ ಬಗ್ಗೆ ಯಾರಿಗಾದರೂ ಗೊತ್ತೇ? ಅನೇಕರಿಗೆ ತಿಳಿಯದ ಒಂದು ಸ್ವಾರಸ್ಯಕರ ವಿಷಯ ತಿಳಿಯೋಣ. 

    ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!

    ಗುಜರಾತ್ ಅಮುಲ್ ಗೆ ಕೇರಳದ ತರೂರ್ ಕುಟುಂಬ ನಂಟು; 
    ನಿಮಗೆ ಗೊತ್ತೇ?..ಪ್ರಪ್ರಥಮ ಹಾಗೂ ದ್ವಿತೀಯ ಅಮುಲ್ ಬೇಬಿ ಕೇರಳ ಮೂಲದ್ದು. ಹೌದು ಗೆಳೆಯರೆ….ಶೋಭಾ ತರೂರ್ ಶ್ರೀನಿವಾಸನ್ ಮತ್ತು ಸ್ಮಿತಾ ತರೂರ್ ತಿರುವನಂತಪುರಂ ಸಂಸದ ಶಶಿ ತರೂರ್​ನ ಸಹೋದರಿಯರು. ಬಹುಶಃ ಇದು ಅನೇಕರಿಗೆ ತಿಳಿಯದಿರದ ಸಂಗತಿ. ಅಮುಲ್ ತನ್ನ ಮೊದಲ ಹಾಲಿನ ಪೌಡರ್ ಆಡ್ ನಲ್ಲಿ ಮೂರುವರೆ ನಾಲ್ಕು ವರ್ಷ ಆಸುಪಾಸಿನ ಹಾಲುಗೆನ್ನೆಯ ಮಗು ಶೋಭಾ ತರೂರ್ ರ ಕಪ್ಪು ಬಿಳುಪು ಚಿತ್ರವನ್ನು ತನ್ನ ಜಾಹೀರಾತಿನಲ್ಲಿ ಮೊದಲ ಬಾರಿಗೆ ಬಳಸುತ್ತದೆ. ನಂತರ ಕಲರ್ ನಲ್ಲಿ ಕಿರಿಯ ಸಹೋದರಿ ಮುದ್ದಾದ ಸ್ಮಿತಾ ತರೂರ್ ಜಾಹೀರಾತಲ್ಲಿ ಕಂಡುಬರುತ್ತಾರೆ. ಆ ಮಕ್ಕಳ ಚಿತ್ರ ಎಷ್ಟು ಪ್ರಸಿದ್ಧವಾಯಿತು ಎಂಬುದು ಇತಿಹಾಸ. ಅಂದಿನ ಆಡ್ ನ ಸುದ್ದಿ ಕೇರಳದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಶಶಿ ತರೂರ್ 2016 ಮಲಯಾಳಂ ಪತ್ರಿಕೆಗೆ ಬರೆದ ಅಂಕಣದಲ್ಲಿ ಹಾಗೂ ಒಂದು ಖಾಸಗಿ ಸಂದರ್ಶನದಲ್ಲಿ ಸಹೋದರಿಯರ ಹಾಗೂ ತಮ್ಮ ಬಾಲ್ಯದ ಅಮುಲ್ ನೊಂದಿಗಿರುವ ಸ್ವಾರಸ್ಯಕರ ನೆನಪನ್ನು ಹಂಚಿದರು.

    712 ಮಕ್ಕಳ ಛಾಯಾಚಿತ್ರಗಳಲ್ಲಿ ಶೋಭಾ ಹಾಗೂ ಸ್ಮಿತಾ ಬೆಸ್ಟ್ ;
    1961 ರ ದೇಶದಲ್ಲಿ ಕ್ಷೀರ ಕ್ರಾಂತಿಯ ಆರಂಭ,ಗುಜರಾತ್ ನ ಅಮುಲ್ ದೇಶದ ಅತಿ ದೊಡ್ಡ ಹಾಲಿನ ಒಕ್ಕೂಟವಾದ ಕೀರ್ತಿ ಗೆ ಪಾತ್ರವಾಗುತ್ತದೆ. ಅಮುಲ್ ಜಾಹೀರಾತಿಗೆ ಸಂಬಂಧ ಪಟ್ಟಂತೆ ಶೋಭಾರನ್ನು ನಾನು ಮಾತನಾಡಿಸಿದಾಗ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಶೋಭಾರ ತಂದೆ ಚಂದ್ರನ್ ತರೂರ್ ರವರಿಗೆ ಅಮುಲ್ ಗೆ ಜಾಹೀರಾತು ಏಜೆನ್ಸಿ ಎ.ಎಸ್.ಪಿ ಸಂಸ್ಥೆಯ ಅಂದಿನ ಕ್ರಿಯೇಟಿವ್ ಹೆಡ್ ಸಿಲ್ವಸ್ಟರ್ ಡಿ ಕುನ್ನಾ ಭೇಟಿಯಾದ ಸಂಧರ್ಭದಲ್ಲಿ ಅಮುಲ್ ಜಾಹೀರಾತಿಗಾಗಿ ಮಗುವಿನ ಹುಡುಕಾಟದ ಬಗ್ಗೆ ಉಲ್ಲೇಖ ಮಾಡುತ್ತಾರೆ.712 ಮಕ್ಕಳ ಚಿತ್ರ ಆಯ್ಕೆ ಯಾಗಿದೆ ಆದರೆ ಯಾವುದು ಫೈನಲ್ ಆಗಲಿಲ್ಲ. ನಿಮಗೂ ಹೆಣ್ಣು ಮಗು ಇದೆಯಲ್ಲವೇ…ನಿಮ್ಮ ಮಗುವಿನ ಛಾಯಾಚಿತ್ರ ಕೊಡಿ ಎಂದು ಕೇಳಿ ಪಡೆದರು. ಸುಂದರವಾದ ನಗು,ಆಕರ್ಷಕ ಕಣ್ಣುಗಳು,ಮುದ್ದಾದ ಮಗು ಅಮುಲ್ ಬೇಬಿ ಗರ್ಲ್ “ಅಟರ್ ಲೀ ಬಟರ್ ಲೀ ಡಿಲಿಶಿಯಶ್” ಆಡ್ ನಲ್ಲಿ ಶೋಭಾ ಕಂಡುಬರುತ್ತಾರೆ.ಸಣ್ಣ ಕಿರಾಣಿ ಅಂಗಡಿಯಿಂದ,ಮಹಾನಗರಗಳ ದೊಡ್ಡ ದೊಡ್ಡ ಜಾಹೀರಾತು ಬೋರ್ಡ್ ನಲ್ಲಿ ಬೇಬಿ ಶೋಭಾ ಚಿತ್ರ ಅತ್ಯಂತ ಜನಪ್ರಿಯವಾಗುತ್ತದೆ. ಅಮೂಲ್ ಮತ್ತು ತರೂರ್ ಕುಟುಂಬದ ಆಡ್ ಸಂಬಂಧ ಇಲ್ಲಿಗೆ ಮುಗಿಯುವುದಿಲ್ಲ, ಕಲರ್ ಆಡ್ ಬಂದ ಸಂದರ್ಭದಲ್ಲಿ ಶೋಭಾ ಹಾಗೂ ಶಶಿ ತರೂರ್ ನ ಕಿರಿಯ ಸಹೋದರಿ ಸ್ಮಿತಾ ತರೂರ್ ಅಮುಲ್ ಬೇಬಿಯಾಗಿ ಮಿಂಚುತ್ತಾರೆ.ಸಹೋದರಿಯರಿಬ್ಬರು ರಜಾ ದಿನಗಳಲ್ಲಿ ತಮ್ಮ ಊರು ಪಾಲಕ್ಕಾಡ್ ನಲ್ಲಿ ತಮ್ಮದೆ ಮಗುವಿನ ಚಿತ್ರ ವನ್ನು ಜಾಹೀರಾತು ಫಲಕದಲ್ಲಿ ಕಂಡು ಮೊದಲ ಬಾರಿಗೆ ಆಶ್ಚರ್ಯ ಪಡುತ್ತಾರೆ. ಶಶಿ ತರೂರ್ ಕೂಡಾ ಅಮೆರಿಕದಲ್ಲಿ ಶಿಕ್ಷಣ ಪಡೆದು ಭಾರತಕ್ಕೆ ಬಂದ ಸಂದರ್ಭ ಅಮುಲ್ ಕಾರ್ಟೂನ್ ಆಡ್ ನಲ್ಲಿ ಕಂಡುಬರುತ್ತಾರೆ. ಈ ರೀತಿ ದೂರದ ಗುಜರಾತ್ ನ ಅಮುಲ್ ಹಾಗೂ ದಕ್ಷಿಣದ ಕೇರಳದ ತರೂರ್ ಕುಟುಂಬದ ಮಕ್ಕಳಿಗೆ ಅವಿನಾಭಾವ ಸಂಬಂಧವಿದೆ. ಕ್ಷೀರ ಕ್ರಾಂತಿಯ ಹರಿಕಾರ,ಮಿಲ್ಕ್ ಮ್ಯಾನ್ ಆಫ್ ಇಂಡಿಯಾ, ಅಮುಲ್ ಸಂಸ್ಥಾಪಕ, ವಿಶ್ವ ಆಹಾರ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಡಾ.ವರ್ಗೀಸ್ ಕುರಿಯನ್ ಕೂಡ ಕೇರಳ ಮೂಲದವರು ಎಂಬುದನ್ನು ಇಲ್ಲಿ ನೆನಪಿಸಬಹುದು.

    ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!

    ಸಹೋದರಿಯರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ; 
    ತನ್ನ ಮುಗ್ಧತೆ,ಸೌಂದರ್ಯ ದಿಂದ ಅಮೂಲ್ ಜಾಹೀರಾತಿನಲ್ಲಿ ಮಿಂಚಿದ ಶೋಭಾ 1977 ರಲ್ಲಿ ಮಿಸ್ ಕಲ್ಕತ್ತಾ ಹಾಗೂ ಅದೇ ವರ್ಷ ತಂಗಿ ಸ್ಮಿತಾ ಮಿಸ್ ಇಂಡಿಯಾ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.

    ಅಮೆರಿಕದಲ್ಲಿ ಅಕ್ಕ, ಇಂಗ್ಲೆಂಡ್ ನಲ್ಲಿ ತಂಗಿ ;
    ಪ್ರಸ್ತುತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿರುವ ಶೋಭಾ ಸ್ವತಃ ಲೇಖಕಿ, ಹಾಗೂ ಇಂಗ್ಲೀಷ್ ಹಿನ್ನೆಲೆ ವಾಯ್ಸ್ ಓವರ್ ಎಕ್ಸಪರ್ಟ್.ಆಂಗ್ಲ ಭಾಷೆ ಹಾಗೂ ಸಾಹಿತ್ಯದಲ್ಲಿ ಅತ್ಯುತ್ತಮ ಹಿಡಿತವಿರುವ ಇವರು ಅನೇಕ ಪುಸ್ತಕ, ಲೇಖನ, ಮಕ್ಕಳಿಗಾಗಿ ಕಾರ್ಟೂನ್ ಪುಸ್ತಕಗಳನ್ನು ಬರೆದಿದ್ದಾರೆ. 

    * Prince With A Paint Brush (The Story of Raja Ravi Varma) 
    * How Many Lines In A Limerick?
     * Indi-Alphabet (Purple Dragonfly Book Award). 
    “A Pie Surprise & Other Stories. 

    ಮಕ್ಕಳಿಗಾಗಿ ಪುಸ್ತಕ ಭಾರತ ಹಾಗೂ ಅಮೆರಿಕದಲ್ಲಿ ಪ್ರಕಾಶನಗೊಂಡಿವೆ.  ಸಹೋದರಿ ಸ್ಮಿತಾ ತರೂರ್ ಇಂಗ್ಲೆಂಡ್ ನಲ್ಲಿ ತಮ್ಮ ಖಾಸಗಿ ಸಂಸ್ಥೆಯ ನಿರ್ದೇಶಕರಾಗಿದ್ದು ಕುಟುಂಬದ ಜೊತೆ ಇರುವ ಬಗ್ಗೆ ತಿಳಿದುಬಂದಿದೆ. 

    ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!

    ಅಮುಲ್ ಗುಣಮಟ್ಟ ಹಾಗೂ ಕ್ರಿಯೇಟಿವಿಟಿಗೆ ಹೆಸರುವಾಸಿ;
    ಅಮುಲ್ ಜಾಹೀರಾತಿನಲ್ಲಿ ಕೆಲ ವರ್ಷಗಳ ಕಾಲ ತರೂರ್ ಸಹೋದರಿಯರು ಕಂಡುಬರುತ್ತಾರೆ.ಕ್ರಮೇಣ ಹೊಸ ಮಕ್ಕಳ ಮುಖಗಳು ಕಂಡುಬಂದವು.ಪ್ರಸಕ್ತ ದಿನಗಳಲ್ಲಿ ವಿಜ್ಞಾನ, ರಾಷ್ಟ್ರೀಯತೆ, ರಾಜಕೀಯ, ಸಾಂಸ್ಕೃತಿಕ, ಕ್ರೀಡೆ,ಸಿನೆಮಾ,ವೈದ್ಯಕೀಯ, ತಂತ್ರಜ್ಞಾನ, ಇತ್ಯಾದಿ ಕ್ಷೇತ್ರಗಳಿಂದ ವಿವಿಧ ಸೆಲೆಬ್ರಿಟಿಗಳ ಮಕ್ಕಳ ರೂಪದ ಕಾರ್ಟೂನ್ ಜಾಹೀರಾತಿನ ಟ್ರೆಂಡ್ ಅಮುಲ್ ನಲ್ಲಿ ಆರಂಭವಾಗಿದೆ. ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾದ ಅಮುಲ್,ಬೆಸ್ಟ್ ಕಾನ್ಸೆಪ್ಟ್ ಜಾಹೀರಾತುಗಳಿಗೆ ಅಷ್ಟೇ ಫೇಮಸ್ ಆಗಿರುವುದು ಸತ್ಯ. ಅಮುಲ್ ನಿಜಕ್ಕೂ “ದ ಟೆಸ್ಟ್ ಆಫ್ ಇಂಡಿಯಾ”.

    ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts