More

    ಬಿಲ್ ಕಟ್ಟಿದರಷ್ಟೇ ಶವ ಕೊಡ್ತೀವಿ ಎಂದ ಆಸ್ಪತ್ರೆ; ಭಿಕ್ಷೆ ಬೇಡಿ ಬಿಲ್ ಕಟ್ಟಿದ ಜನ!

    ವಿಜಯಪುರ: ಕರೊನಾಗೆ ಬಲಿಯಾದ ವ್ಯಕ್ತಿಯ ಶವ ನೀಡಲು ಸತಾಯಿಸಿದ ಖಾಸಗಿ ಆಸ್ಪತ್ರೆ ಎದುರು ಸಂಬಂಧಿಗಳ ಆಕ್ರಂದನ ಕಂಡು ಕಣ್ಣೀರಾದ ಸಾರ್ವಜನಿಕರು, ಶುಲ್ಕಕ್ಕಾಗಿ ಕರವಸ್ತ್ರ ಹಾಸಿ ಭಿಕ್ಷೆ ಬೇಡಿ ಶುಲ್ಕ ಕಟ್ಟಿದ್ದಲ್ಲದೆ, ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಗರದ ಡಿಸಿಸಿ ಬ್ಯಾಂಕ್ ಹತ್ತಿರದ ಕೋಟಿ ಆಸ್ಪತ್ರೆ ಎದುರು ಬುಧವಾರ ಬೆಳಗ್ಗೆ ಇಂಥದ್ದೊಂದು ಘಟನೆ ನಡೆದಿದ್ದು, ಕುಟುಂಬಸ್ಥರ ಗೋಳು ಕೇಳಿ ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ನೆರವಿಗೆ ನಿಂತರು. ಕೂಡಲೇ ಶವ ಹಸ್ತಾಂತರಿಸಲು ಮನವಿ ಮಾಡಿದರು. ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪದ ಕಾರಣ ತಮಟೆ ಬಾರಿಸಿ ಹೋರಾಟ ಆರಂಭಿಸಿದರು. ಮಾತ್ರವಲ್ಲ, ನೆರೆದವರಿಂದ ಹಣ ಸಂಗ್ರಹಿಸಿ ಶುಲ್ಕ ಪಾವತಿಸುವ ಪ್ರಕ್ರಿಯೆಗೆ ಮುನ್ನುಡಿ ಬರೆದರು.

    ಬೆಳಗಾವಿ ಜಿಲ್ಲೆ ಸಂಕೇಶ್ವರದ ನಿವಾಸಿಯೊಬ್ಬರು ಕರೊನಾ ಪೀಡಿತರಾಗಿದ್ದರು. ಆರಂಭದಲ್ಲಿ ಅಥಣಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಆಸ್ಪತ್ರೆಯವರು ಕೋಟಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಬಳಿಕ ಕುಟುಂಬಸ್ಥರು ಕೋಟಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ 13 ದಿನ ಚಿಕಿತ್ಸೆಗೆ ಆ ಆಸ್ಪತ್ರೆಯವರು ರೂ. 7 ಲಕ್ಷಕ್ಕೂ ಅಧಿಕ ಬಿಲ್ ಮಾಡಿದರು. ಈಗಾಗಲೇ ರೂ. 4 ಲಕ್ಷಕ್ಕೂ ಅಧಿಕ ಶುಲ್ಕ ಪಾವತಿಸಲಾಗಿದೆ. ಆದರೂ ರೋಗಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಯವರು ಕುಟುಂಬಸ್ಥರಿಗೆ ಅವಕಾಶ ನೀಡಿಲ್ಲ. ಮಂಗಳವಾರವೇ ರೋಗಿ ಮೃತಪಟ್ಟಿದ್ದು, ಆತನ ಪತ್ನಿಯನ್ನೂ ಹತ್ತಿರಕ್ಕೆ ಬಿಟ್ಟಿಲ್ಲ. ಬಾಕಿ 3 ಲಕ್ಷ ರೂ. ಶುಲ್ಕ ಪಾವತಿಸಿಯೇ ಶವ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆಂಬುದು ಕುಟುಂಬಸ್ಥರ ಆರೋಪ.

    ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಪೊಲೀಸರ ಮನವೊಲಿಕೆಗೆ ಮಣಿಯದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಾಪ್ಸೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ, ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ದೂರು ಕೊಟ್ಟರೆ ಪ್ರಕರಣದ ತನಿಖೆ ಮಾಡಿ ತಪ್ಪು ಕಂಡು ಬಂದಲ್ಲಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ಶವವನ್ನು ಪಾಲಿಕೆಯ ವಾಹನದಲ್ಲಿ ಅಂತಿಮ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts