More

    ಉಸ್ತುವಾರಿ ಸಚಿವ ಬದಲಾಗಲಿ

    ಹೊಸಪೇಟೆ: ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿಯಿಂದ ಕೈ ಬಿಡದಿದ್ದರೆ ಪಕ್ಷವು ಮನೆಯೊಂದು ಮೂರು ಬಾಗಿಲು ಆಗಲಿದೆ ಎಂದು ಸ್ವ ಪಕ್ಷೀಯರ ವಿರುದ್ಧವೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿರಾಜ್ ಶೇಕ್ ಅಸಮಾಧಾನ ವ್ಯಕ್ತಪಡಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ನಿಷ್ಠಾವಂತ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಜಮೀರ್ ಕಡೆಗಣನೆ ಮಾಡುತ್ತಿದ್ದಾರೆ. ಹಂಪಿ ಉತ್ಸವಕ್ಕೆ ಜಮೀರ್ ಆಗಲಿ, ಜಿಲ್ಲಾಡಳಿತವಾಗಲಿ ಪಕ್ಷದ ಮುಖಂಡರು, ನಗರಸಭೆ ಸದಸ್ಯರಿಗೂ ಆಹ್ವಾನ ನೀಡದೆ ತಾತ್ಸಾರ ಮಾಡಲಾಗಿದೆ. ಈ ಹಿಂದೆ ಮಾಜಿ ಶಾಸಕರಿಗೆ 50 ವಿಐಪಿ ಪಾಸ್ ಕೊಟ್ಟು ಆಹ್ವಾನಿಸುವ ಸಂಪ್ರದಾಯವಿತ್ತು. ಈ ಬಾರಿ ನನಗೇ ಪಾಸ್‌ ನೀಡದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಯಾಕೆ ಬಂದಿಲ್ಲವೆಂದು ಕೇಳುವ ಗೋಜಿಗೆ ಉಸ್ತುವಾರಿ ಸಚಿವರೂ ಹೋಗಿಲ್ಲ. ಇದು ಕಾರ್ಯಕರ್ತರಿಗೆ ನೋವು ತಂದಿದೆ. ಉಸ್ತುವಾರಿ ಸಚಿವರ ಬದಲಾವಣೆ ಮಾಡಿದರೆ ಪಕ್ಷ ಉಳಿಯುತ್ತದೆ ಎಂದರು.

    ಜಿಲ್ಲಾಡಳಿತದಲ್ಲಿ ಖಾಸಗಿ ವ್ಯಕ್ತಿಗಳಿಂದ ಹಸ್ತಕ್ಷೇಪ ನಡೆಯುತ್ತಿದೆ. ಕಳೆದ ಐದಾರು ತಿಂಗಳಿಂದ ಜಿಲ್ಲೆಯವರಲ್ಲದ ಗಂಗಾವತಿಯ ಬಸನಗೌಡ ಕಕ್ಕರಗೋಳ, ಬೆಂಗಳೂರಿನ ರೋಹನ್ ಲಾಲ್ ಜೈನ್, ಕೊಪ್ಪಳದ ಸೈಯದ್ ಸೇರಿದಂತೆ ಕೆಲವರು ಸರ್ಕಾರಿ ಕಚೇರಿ, ಸಭೆ-ಸಮಾರಂಭ, ಡಿಸಿ, ಸಚಿವರ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ದೈನಂದಿನ ಸರ್ಕಾರಿ ಕೆಲಸಗಳನ್ನು ಅವರೇ ಆಪರೇಟ್ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಪ್ರಚಾರ ಪ್ರಿಯರಾಗಿದ್ದು, ಅರ್ಹ ಫಲಾನುಭವಿಗಳಿಗೆ ಸೌಕರ್ಯ ಸಿಗುತ್ತಿಲ್ಲ. ನಿಜವಾದ ಸಮಸ್ಯೆಗಳ ಸ್ಥಳಕ್ಕೆ ಹೋಗುತ್ತಿಲ್ಲ. ಪ್ರಚಾರ ಸಿಗುವ ಜಾಗಕ್ಕಷ್ಟೇ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಪ್ರಮುಖರಾದ ವಿನಾಯಕ್ ಶೆಟ್ಟರ್, ತಮ್ಮನ್ನಳ್ಳೆಪ್ಪ, ಡಿ.ವೆಂಕಟರಮಣ, ಗೌಸ್, ಇಂದುಮತಿ ಇತರರಿದ್ದರು.

    ಸಚಿವ ಜಮೀ‌ರ್ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರೀ ಶೋ-ಆಫ್ ಮಾಡುತ್ತಿದ್ದಾರೆ. ಬಡವರಿಗೆ ಹಣ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಇಂಥ ಪಬ್ಲಿಸಿಟಿ ಸರಿಯಲ್ಲ. ಪಕ್ಷಕ್ಕೆ ದುಡಿದವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಪರಿಸ್ಥಿತಿ ಕಷ್ಟವಾಗಲಿದೆ. ಜಿಲ್ಲೆಯವರೇ ಉಸ್ತುವಾರಿಗಳಾದರೆ ಸಮಸ್ಯೆಗಳು ಇರುತ್ತಿರಲಿಲ್ಲ. ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ, ಹಗರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಚ್ಚಿಡುತ್ತೇನೆ
    ಸಿರಾಜ್ ಶೇಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಜಯನಗರ.

    ಹಂಪಿ ಉತ್ಸವ ಪಕ್ಷಾತೀತ ಕಾರ್ಯಕ್ರಮ. ಇಲ್ಲಿ ಪಕ್ಷದ ಕಾರ್ಯಕರ್ತ ರನ್ನು ಕಡೆಗಣಿಸ ಲಾಗಿದೆ ಎಂಬುದು ಸರಿಯಲ್ಲ. ಇದು ಎಲ್ಲರ ಉತ್ಸವ, ಜನೋತ್ಸವ. ಮೂರು ದಿನ ನಡೆದ ಹಂಪಿ ಉತ್ಸವ ಯಶಸ್ವಿಯಾಗಿದೆ. ಇಲ್ಲಿ ರಾಜಕೀಯ ಬೆರೆಸುವುದು ಸಲ್ಲ. ಉಳಿದಂತೆ ಅವರು (ಸಿರಾಜ್ ಶೇಕ್) ಮಾಡಿರುವ ಆರೋಪಗಳು ಆಧಾರ ರಹಿತ.
    | ಜಮೀರ್ ಅಹ್ಮದ್ ಖಾನ್ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts