More

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಗೆ ಟಾಪ್ 10ರ ಗರಿ

    ವೀರೇಂದ್ರ ನಾಗಲದಿನ್ನಿ

    ಹೊಸಪೇಟೆ: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದೆ. ರಾಜ್ಯ ಸೂಚ್ಯಂಕ ಪಟ್ಟಿಯಲ್ಲಿ ನೂತನ ವಿಜಯನಗರ ಜಿಲ್ಲೆ ಟಾಪ್ ಟೆನ್ ಸ್ಥಾನಕ್ಕೇರುವ ಮೂಲಕ ಗಮನ ಸೆಳೆದಿದೆ.

    ಇದನ್ನೂ ಓದಿ : ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ

    ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳನ್ನು ಒಳಗೊಂಡಂತೆ ನೂತನ ವಿಜಯನಗರ ಜಿಲ್ಲೆಯಾಗಿ ರೂಪುಗೊಂಡಿದೆ. 2021-22ರಲ್ಲಿ ಮೊದಲ ಬಾರಿಗೆ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯನಗರ 14ನೇ ಸ್ಥಾನ ಗಳಿಸಿತ್ತು. ಈ ಬಾರಿ ಶೇ.91.41 ರಷ್ಟು ಫಲಿತಾಂಶ ತನ್ನದಾಗಿಸಿಕೊಂಡಿದ್ದು, ರಾಜ್ಯದ ಟಾಪ್-10 ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಮಾತೃ ಜಿಲ್ಲೆ ಬಳ್ಳಾರಿ 81.54 ರಷ್ಟು ಫಲಿತಾಂಶದೊಂದಿಗೆ 31ನೇ ಸ್ಥಾನಕ್ಕೆ ಕುಸಿದಿದ್ದರೆ, ದಶಕಗಳ ಹಿಂದೆಯೇ ರಚನೆಯಾಗಿದ್ದ ಹಲವು ಜಿಲ್ಲೆಗಳನ್ನು ವಿಜಯನಗರ ಹಿಂದಿಕ್ಕಿರುವುದು ಗಮನಾರ್ಹ.

    ಫಲಿಸಿತು ಪರೀಕ್ಷಾ ಸುಧಾರಣಾ ಕ್ರಮ:

    ವಿಜಯನಗರ ಹೊಸ ಜಿಲ್ಲೆ ಘೋಷಣೆ ಬಳಿಕವೂ ಕಳೆದ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡು ಫಲಿತಾಂಶ ಹೊರಬಿದ್ದಿತ್ತು. ಆನಂತರ ಶಿಕ್ಷಣ ಇಲಾಖೆಗೆ ನೂತನ ಉಪನಿರ್ದೇಶಕರಾಗಿ ಬಂದ ಜಿ.ಕೊಟ್ರೇಶ, ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಈಗಿನ ಜಿಲ್ಲಾಧಿಕಾರಿ ಟಿ.ವೆಂಕಟೇಶ ಜಿಲ್ಲೆಯ 10ನೇ ತರಗತಿ ಫಲಿತಾಂಶ ಸುಧಾರಣೆಗೆ ಗಂಭೀರ ಚಿಂತನೆ ನಡೆಸಿದರು. ಜಿಲ್ಲೆಗೆ ಅಂಟಿಕೊಂಡಿರುವ ಶೈಕ್ಷಣಿಕವಾಗಿ ಹಿಂದುಳಿದ ಪಟ್ಟಿಯನ್ನು ಕಿತ್ತೆಸೆಯಲು ಅನೇಕ ಉಪಕ್ರಮಗಳನ್ನು ಜಾರಿಗೊಳಿಸಿದರು.

    ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಶೈಕ್ಷಣಿಕ ವರ್ಷ ಆರಂಭದಲ್ಲೇ ಶಿಕ್ಷಣ ತಜ್ಞರಾದ ಗುರುರಾಜ ಕರ್ಜಗಿ, ನಂದೀಶ ಶೆಟ್ಟರ್ ಮೂಲಕ ಪ್ರೌಢ ಶಾಲಾ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇಲಾಖೆಯ ಉನ್ನತಾಧಿಕಾರಿಗ ಳಿಂದ ಕಾಲಕಾಲಕ್ಕೆ ಪ್ರೌಢ ಶಾಲಾ ಮುಖ್ಯಶಿಕ್ಷಕರಿಗೆ ಮಾರ್ಗದರ್ಶನ ಒದಗಿಸಿ ಫಲಿತಾಂಶ ಸುಧಾರಣಾ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ.

    ಹೆಚ್ಚಿನ ಮಾರ್ಗದರ್ಶನ

    ವಿಶೇಷವಾಗಿ ಕನ್ನಡ ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ ಕಿರು ಪರೀಕ್ಷೆ ನಡೆಸಲಾಯಿತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಎ, ಬಿ, ಮತ್ತು ಸಿ ಗುಂಪುಗಳಲ್ಲಿ ವಿಂಗಡಿಸಿ, ಹೆಚ್ಚಿನ ಗಮನ ಹರಿಸಲಾಯಿ ತು. ಜನವರಿಯಿಂದ ಜಿಲ್ಲೆಯ ಹಲವು ಶಾಲೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಕಲಿಕೆ ಯಲ್ಲಿ ಹಿಂದುಳಿದ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಮತ್ತಿತರೆ ವಿಷಯಗಳ ಬಗ್ಗೆ ಹೆಚ್ಚಿನ ಮಾರ್ಗದರ್ಶನ ನೀಡಲಾಯಿತು.

    ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದಂತೆ ಹಲವು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ಜತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬಲಾಯಿತು. ಅದರೊಂದಿಗೆ ಕಲಿಕೆಯಲ್ಲಿ ತೀರಾ ಹಿಂದುಳಿದ ಮಕ್ಕಳ ಮನೆಗೆ ಶಿಕ್ಷಕರು ಭೇಟಿ ನೀಡುವ ಅವರನ್ನು ಕಲಿಕೆಯತ್ತ ಸೆಳೆಯಲು ನಡೆಸಿದ ಪ್ರಯತ್ನಗಳು ಫಲಿಸಿವೆ ಎನ್ನಲಾಗುತ್ತಿದೆ.

    ಇವರು ಜಿಲ್ಲೆಯ ಟಾಪರ್ಸ್‌

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಗೆ ಟಾಪ್ 10ರ ಗರಿ


    ಜಿಲ್ಲೆಯ ಹೂವಿನಹಡಗಲಿಯ ಎಂ.ಎಂ. ಪಾಟೀಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮೇಘನಾ ಪಿ.ತೋಟಗೇರಿ ಮತ್ತು ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಿಂಧು ಎಂ. 621 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ. ಹೊಸಪೇಟೆ ತಾಲೂಕು ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ಶಾಲೆ ಮನೋಜ್ ಎಲ್., ಹೂವಿನಹಡಗಲಿಯ ಎಂ.ಎಂ. ಪಾಟೀಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಚಿನ್ಮಯಿ ಜಿ. ಮತ್ತು ಕೊಟ್ಟೂರಿನ ಮಹಾದೇವ ಆಂಗ್ಲ ಮಾಧ್ಯಮ ಶಾಲೆಯ ಅರುಣ್ ಕುಮಾರ್ ಗುತ್ತೂರು ಸಮಾನವಾಗಿ 620 ಅಂಕಗಳೊಂದಿಗೆ
    ದ್ವಿತೀಯ ಸ್ಥಾನ ಹಂಚಿಕೊಂಡಿದ್ದರೆ, ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸೃಷ್ಟಿ ಕೆ. ಮತ್ತು ಸೃಷ್ಟಿ ಕೆ.ಎಸ್. 619 ಅಂಕ ಪಡೆದು, ತೃತೀಯ ಸ್ಥಾನ ಗಳಿಸಿದ್ದಾರೆ.

    ಇದನ್ನೂ ಓದಿ : ಎಸ್​ಎಸ್​ಎಲ್​ಸಿ ಪರೀಕ್ಷೆ ಕೀ ಉತ್ತರ ಪ್ರಕಟ: ಆಕ್ಷೇಪಣೆಗೆ 18 ಕಡೇ ದಿನ

    ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಡಿಡಿಪಿಐ ಜಿ.ಕೊಟ್ರೇಶ ಅವರು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಫಲಿತಾಂಶ ಹೆಚ್ಚಳಕ್ಕೆ ಅನೇಕ ರೀತಿಯ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯ ಮಟ್ಟದ ಪಟ್ಟಿಯಲ್ಲಿ ಜಿಲ್ಲೆಗೆ 10ನೇ ಸ್ಥಾನ ಲಭಿಸಿದ್ದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ.
    | ಟಿ.ವೆಂಕಟೇಶ ಜಿಲ್ಲಾಧಿಕಾರಿ


    ಜಿಲ್ಲಾಡಳಿತದ ನೆರವು, ಇಲಾಖೆಯ ಬಿಇಒ, ಶಾಲಾ ಮುಖ್ಯಶಿಕ್ಷಕರು ಮತ್ತು ವಿಷಯ ಶಿಕ್ಷಕರ ನಿರಂತರ ಪರಿಶ್ರಮದಿಂದ ಶೇ.91,41 ಫಲಿತಾಂಶ ಬಂದಿದೆ. ಹೊಸ ಜಿಲ್ಲೆಗೆ ಟಾಪ್-10 ಸ್ಥಾನ ಲಭಿಸಿದ್ದರಿಂದ ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಈ ಸಾಧನೆ ಜಿಲ್ಲೆಯ ಶಿಕ್ಷಕರಿಗೆ ಸಲ್ಲುತ್ತದೆ.
    | ಜಿ.ಕೊಟ್ರೇಶ್ ಡಿಡಿಪಿಐ, ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts