More

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದ ಆರ್ಥಿಕ ಪ್ರಗತಿ

    ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ರಾಷ್ಟ್ರ ಆರ್ಥಿಕತೆಯಲ್ಲಿ ಇಂಗ್ಲೆಂಡ್ ದೇಶವನ್ನು ಹಿಂದಿಕ್ಕಿದ್ದು, ಭವಿಷ್ಯದಲ್ಲಿ ನಂ.1 ಸ್ಥಾನಕ್ಕೇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಜಗದ್ಗುರು ಶ್ರೀ ಕೊಟ್ಟೂರು ಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2014ರಲ್ಲಿ ಭಾರತ ಸಾಲದ ಸುಳಿಯಲ್ಲಿ ಸಿಲುಕಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಆರ್ಥಿಕ ಶಿಸ್ತು ಅಳವಡಿಸಿಕೊಂಡಿದೆ. ಹಂತ ಹಂತವಾಗಿ ಸಾಲ ತೀರುತ್ತಿದೆ. ಕೋವಿಡ್ ಸಂಕಷ್ಟ ದಿಂದ ಕೆಲ ದೇಶಗಳು ಇನ್ನೂ ಹೊರಗೆ ಬಂದಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲೂ ಭಾರತ ಆರ್ಥಿಕವಾಗಿ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಅದರ ಫಲವಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾದ ರಾಷ್ಟ್ರಗಳಲ್ಲಿ 5ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ದೇಶವನ್ನೂ ಭಾರತ ಹಿಂದಿಕ್ಕಿದ್ದು, 5ನೇ ಸ್ಥಾನವನ್ನು ಅಂಕರಿಸಿದೆ. ಮೋದಿ ನಾಯಕತ್ವವನ್ನು ಅನ್ಯ ರಾಷ್ಟ್ರಗಳು ಕೂಡ ಮೆಚ್ಚಿಕೊಂಡಿವೆ. ಶ್ರೀಲಂಕಾ ಮತ್ತು ಪಾಕಿಸ್ತಾನಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಸದಾ ಭಾರತಕ್ಕೆ ತೊಂದರೆ ಕೊಡುವ ಪಾಕಿಸ್ತಾನಕ್ಕೆ ಇದೀಗ ಆಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ಥಾನದ ಜನ ಮೋದಿ ಮಾದರಿ ಆಡಳಿತ ಬೇಕೆನ್ನುತ್ತಿದ್ದಾರೆ ಎಂದರು.

    ಜಮ್ಮುಕಾಶ್ಮೀರದಲ್ಲಿ 370 ಕಲಂ ತೆಗೆದು ಹಾಕಿದ್ದು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯಾತಗಿದೆ. ಉಗ್ರಗಾಮಿಗಳನ್ನು ದಮನ ಮಾಡಿ ಶಾಂತಿ ನೆಲಸುವಂತೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ. ದೇಶದ ಯಾವುದೇ ಮೂಲೆಯಿಂದಲೂ ಜನ ಜಮ್ಮುಕಾಶ್ಮೀರಕ್ಕೆ ಹೋಗಬಹುದು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ ಎಂದರು.

    ಹಿಂದೆ ಚುನಾವಣಾ ಸಮಯದಲ್ಲಿ ಬಹುಮತದೊಂದಿಗೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಮ ಮಂದಿರ ನಿರ್ಮಾಣ, 370 ವಿಶೇಷ ಸ್ಥಾನಮಾನ ರದ್ದು ಮೊದಲಾದ ಭರವಸೆ ನೀಡಲಾಗಿತ್ತು. ಅದರಂತೆ ನಡೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ಕುರಿತು ಗೇಲಿ ಮಾಡುವವರಿಗೆ ತಿರುಗೇಟು ನೀಡಿದಂತಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ 5000 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಿಟ್ಟಿದ್ದಾರೆ ಎಂದರು.

    ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜ್, ವಿಭಾಗ ಸಂಘಟನೆ ಕಾರ್ಯದರ್ಶಿ ಸಿದ್ದೇಶ್ ಯಾದವ್, ಮಾದ್ಯಮ ರಾಜ್ಯ ಸಮಿತಿ ಸದಸ್ಯ ವೆಂಕಟ ಮಾಲಪಾಟಿ, ಮಾದ್ಯಮ ಸಂಚಾಲಕ ಸತ್ಯನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts