More

    ಕನ್ನಡ ವಿಶ್ವ ವಿದ್ಯಾಲಯಕ್ಕೆ ಅನುದಾನ ನೀಡುವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಸೌಕರ್ಯ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ಮುಖ್ಯಮಂತ್ರಿ ವಿವೇಚನಾ ಅನುದಾನದಡಿ 20 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಲಾಗುವುದು ಎಂಂ ಮುಖ್ಯಮಂತ್ರಿ ್ಬಸವರಾಜ ಬೊಮ್ಮಾಯಿ ಹೇಳಿದರು. ಕನ್ನಡ ವಿವಿಯಲ್ಲಿ ಶನಿವಾರ ನೂತನ ಐದು ಕಟ್ಟಡಗಳ ಉದ್ಘಾಟನೆ, 128 ಪುಸ್ತಕಗಳ ಬಿಡುಗಡೆ ಹಾಗೂ ಸಂಚಾರಿ ವಿವಿ ಪುಸ್ತಕ ಮಾರಾಟ ವಾಹನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

    ವಿವಿಗೆ ಈಗ ಒದಗಿಸಲಾಗುವ ಅನುದಾನ ಬಳಸಿಕೊಂಡು ವಿದ್ಯಾರ್ಥಿಗಳ ಶಿಷ್ಯವೇತನ, ಹೊರಗುತ್ತಿಗೆ ಸಿಬ್ಬಂದಿಗಳ ಬಾಕಿ ವೇತನ ಪಾವತಿ ಹಾಗೂ ತುರ್ತು ಕೆಲಸಗಳಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ವಿಶ್ವ ವಿದ್ಯಾಲಯಕ್ಕೆ ಅಗತ್ಯ ಸೌಕರ್ಯ ಹಾಗೂ ಇತರ ಚಟುವಟಿಕೆಗಳಿಗಾಗಿ ಕುಲಪತಿ ಡಾ.ಸ.ಚಿ. ರಮೇಶ ಅವರು ತುರ್ತಾಗಿ 80 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಈ ಅನುದಾನವನ್ನು ಹಂತಹಂತವಾಗಿ ಜಿಲ್ಲಾ ಖನಿಜ ನಿಧಿ ಮತ್ತು ಸರ್ಕಾರದ ಅನುದಾನಡಿ ಬಿಡುಗಡೆ ಮಾಡಲಾಗುವುದು ಎಂದರು.

    ಕನ್ನಡ ವಿವಿಯು ಕನ್ನಡ ಭಾಷೆ ಸಮೃದ್ಧಿಗೊಳಿಸುವ ಮತ್ತು ಶಕ್ತಿ ತುಂಬುವ ಕೆಲಸ ಮಾಡುವ ಕಾಯಕದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಲಿ. ವಿವಿಯ 10 ವಿಸ್ತರಣಾ ಕೇಂದ್ರಗಳು ರಾಜ್ಯದ 30 ಜಿಲ್ಲೆಗಳಲ್ಲಿ ತಲಾ 3 ಜಿಲ್ಲೆಗಳಲ್ಲಿ ಒಂದೊಂದಾಗಿದ್ದು ಕನ್ನಡ ಪಸರಿಸುವ, ಕನ್ನಡದ ವಿವಿಧ ಆಯಾಮಗಳಲ್ಲಿ ಸಂಶೋಧಿಸುವ ಮತ್ತು ಅಧ್ಯಯನ ನಡೆಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

    ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು. ಸಂಚಾರಿ ಪುಸ್ತಕ ಮಾರಾಟ ವಾಹನವನ್ನು ವಿವಿಗೆ ದೇಣಿಗೆಯಾಗಿ ನೀಡಿದ ಬಲ್ಡೋಟ ಗ್ರೂಪ್ ಅಧ್ಯಕ್ಷ ಡಾ. ನರೇಂದ್ರಕುಮಾರ್ ಬಲ್ಡೋಟ ಅವರನ್ನು ಇದೇ ವೇಳೆ ಸಿಎಂ ಗೌರವಿಸಿದರು. ಸಾರಿಗೆ ಸಚಿವ ಬಿ. ಶ್ರೀರಾಮುಲು, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಸೋಮಶೇಖರ ರೆಡ್ಡಿ, ವೈ.ಎಂ. ಸತೀಶ್, ಕುಲಪತಿ ಡಾ.ಸ.ಚಿ. ರಮೇಶ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಎಸ್ಪಿ ಡಾ.ಅರುಣ್ ಎಸ್.ಕೆ, ಕುಲಸಚಿವ ಡಾ.ಎ. ಸುಬ್ಬಣ್ಣ ರೈ, ಪ್ರಸಾರಂಗ ವಿಭಾಗದ ನಿರ್ದೇಶಕಿ ಡಾ.ಶೈಲಜಾ ಎಂ. ಹಿರೇಮಠ, ವಿವಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್. ನಂಜಯ್ಯನವರ್ ಮತ್ತಿತರರಿದ್ದರು.

    ಕಟ್ ಆ್ಯಂಡ್ ಪೇಸ್ಟ್ ಕೆಲಸ ಬೇಡ

    ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದ ಹಾಗೂ ಕನ್ನಡ ಸಂಸ್ಕೃತಿಗೆ ಸದಾ ದುಡಿಯುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ದಿಂ.ಎಂ.ಪಿ. ಪ್ರಕಾಶ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ಘೋಷಣೆ ಮಾಡಿದರು. ಈ ಅಧ್ಯಯನ ಪೀಠ ಹೇಗಿರಬೇಕು ಮತ್ತು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಯೋಜನಾ ರೂಪುರೇಷೆ ಸಿದ್ಧಪಡಿಸುವಂತೆ ಕುಲಪತಿಗೆ ಸೂಚಿಸಿದರು. ಕನ್ನಡ ವಿವಿ ಸ್ಥಾಪನೆಯಲ್ಲಿ ಎಂಪಿಪಿ ವಹಿಸಿದ ಪಾತ್ರವನ್ನು ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ಬಿಚ್ಚಿಟ್ಟರು. ವಿಶ್ವ ಭೂಪಟದಲ್ಲಿ ಕನ್ನಡ ಎಲ್ಲಿರಬೇಕು, ಕನ್ನಡಿಗರು ಎಲ್ಲಿ ನಿಲ್ಲಬೇಕು ಅನ್ನುವುದನ್ನು ನಿರ್ಧರಿಸುವ ಕೆಲಸ ಕನ್ನಡ ವಿವಿ ಮಾಡಬೇಕು. ಕೇವಲ ಪದವಿಗಾಗಿ ಕಟ್ ಆ್ಯಂಡ್ ಪೇಸ್ಟ್ ಮಾಡುವ ಕೆಲಸ ಬೇಡ ಎಂದರು.

    ಪುಸ್ತಕ ಖರೀದಿಸಿದ ಮುಖ್ಯಮಂತ್ರಿ

    ಪುಸಕ್ತ ಓದುವುದರಲ್ಲಿ ಸದಾ ಮುಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಪುಸ್ತಕಗಳನ್ನು ಅನಾವರಣಗೊಳಿಸಿ ಕೆಲ ಪುಸ್ತಕ ಖರೀದಿಸಿದರು. ಡಿ.ಆರ್. ನಾಗರಾಜ ಅವರ ಸಮಗ್ರ ಸಾಹಿತ್ಯ ಚಿಂತನೆ ಪುಸ್ತಕ ಹಾಗೂ ಸಂಪಾದಕ ಡಾ. ವೆಂಕಟೇಶ್ ಇಂದ್ವಾಡಿ ಅವರ ಪುಸ್ತಕ ಖರೀದಿಸಿದ ಸಿಎಂ, ಇದಕ್ಕೆ ನಾನು ಹಣ ನೀಡುತ್ತೇನೆ ಉಚಿತ ಬೇಡ ಎಂದು ಪ್ರಸಾರಾಂಗದವರಿಗೆ ತಿಳಿಸಿದರು.

    ಸಿಎಂ ಬೊಮ್ಮಾಯಿಯವರ ತಂದೆಯವರೂ ಕೂಡ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣವಾಗಿದ್ದಾರೆ. ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಬೇಕಿದ್ದು ಇದನ್ನು ಒದಗಿಸುವ ಕೆಲಸ ಮಾಡಲಾಗುವುದು. ಸಾರಿಗೆ ಸಚಿವ ಬಿ.ಶ್ರೀರಾಮುಲು ವಿವಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು. ವಿಶ್ವವಿದ್ಯಾಲಯ ಸಂಪೂರ್ಣ ಡಿಜಿಟಲೈಸ್ ಆಗುತ್ತದೆ. ಇದಕ್ಕೆ ಏನು ಬೇಕೊ ಅದನ್ನು ತ್ವರಿತವಾಗಿ ಮಾಡಿಕೊಡಲಾಗುವುದು.
    | ಡಾ. ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts