More

    ಒತ್ತಡ ಮುಕ್ತಿಗೆ ಜ್ಞಾನ, ಧ್ಯಾನ, ಗಾನವೇ ಔಷಧ; ಶ್ರೀಶ್ರೀ ರವಿಶಂಕರ ಗುರೂಜಿ ಆಶೀರ್ವಚನ

    ಹೊಸಪೇಟೆಯಲ್ಲಿ ‘ಆನಂದ ವಿಜಯೋತ್ಸವ ಮಹಾಸತ್ಸಂಗ’

    ಹೊಸಪೇಟೆ: ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕ ಜನರು ಖಿನ್ನತೆ, ಸಿಟ್ಟು, ಆವೇಶಗಳಿಗೆ ಒಳಗಾಗುತ್ತಿದ್ದಾರೆ. ಇವುಗಳಿಗೆ ಯೋಗ, ಧ್ಯಾನವೇ ಉತ್ತಮ ಔಷಧ ಎಂದು ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಗುರುದೇವ ಶ್ರೀಶ್ರೀ ರವಿಶಂಕರ ಗುರೂಜಿ ಹೇಳಿದರು.

    ಡಾ.ಪುನೀತ್ ರಾಜಕುಮಾರ ಜಿಲ್ಲಾಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ‘ಆನಂದ ವಿಜಯೋತ್ಸವ ಮಹಾಸತ್ಸಂಗ’ದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ನಮ್ಮ ಮನಸ್ಸಿನಲ್ಲಿ ಹಲವು ವಿಚಾರಗಳಿರುತ್ತವೆ. ಅನೇಕ ರೀತಿಯ ಒತ್ತಡಗಳಲ್ಲಿ ಸಿಲುಕಿರುತ್ತೇವೆ. ಅವುಗಳಿಂದ ಹೊರಬಂದು ಸಹಜ ಜೀವನ ನಡೆಸಬೇಕು. ಎಲ್ಲರ ಮುಖದಲ್ಲೂ ಮುಗುಳ್ನಗೆ ನೆಲೆಸಬೇಕು. ದೇಹದಲ್ಲಿ ಯಶಸ್ಸು, ಮನದಲ್ಲಿ ಉತ್ಸವ ನೆಲೆಸಬೇಕು. ಇದಕ್ಕಾಗಿ ಜ್ಞಾನ, ಧ್ಯಾನ, ಗಾನದತ್ತ ಹೆಜ್ಜೆ ಹಾಕಬೇಕು ಎಂದರು.

    ಕೋವಿಡ್ ನಂತರ ನಾನಾ ಕಾರಣಗಳಿಂದಾಗಿ ಅನೇಕರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಯುವಸಮೂಹವನ್ನು ಡ್ರಗ್ಸ್ ನಾಶಮಾಡಿಬಿಡುತ್ತದೆ. ನಿಮ್ಮ ಮಕ್ಕಳನ್ನು ಮಾದಕ ವಸ್ತುಗಳಿಂದ ದೂರ ಇರಿಸುವ ಸಂಕಲ್ಪ ಮಾಡೋಣ ಎಂದು ಪಾಲಕರಿಗೆ ಸಲಹೆ ನೀಡಿದರು.

    ಒಂದು ದೇಶವು ವಿಶ್ವಕ್ಕೇ ಮಾರಕ ಕರೊನಾ ಎಂಬ ಕಾಯಿಲೆ ಕೊಟ್ಟರೆ ನಾವು ಜಗತ್ತಿಗೇ ಔಷಧ ಕೊಟ್ಟೆವು. ನಮ್ಮ ಆಶ್ರಮದ ಕೋವಿಡ್ ಆಯುರ್ವೇದಿಕ್ ಔಷಧವನ್ನು ಜರ್ಮನಿ ಒಪ್ಪಿದೆ. ಆಯುರ್ವೇದ, ಧ್ಯಾನ, ಯೋಗ ಎಂಬ ದಿವ್ಯ ಔಷಧವನ್ನು ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ್ದಾರೆ. ಭಾರತವು ಜಗತ್ತಿನ ಜ್ಞಾನ ಶಕ್ತಿಯಾಗಿದೆ. ಆಂಗ್ಲ ಭಾಷೆಯ ತಿಂಗಳ ಹೆಸರುಗಳಲ್ಲೂ ಸಂಸ್ಕೃತ ಶಬ್ದಗಳಿವೆ. ಜಗತ್ತಿಗೆ ಸೊನ್ನೆ ಕೊಟ್ಟಿದ್ದು ಭಾರತ. ಕರೊನಾ ಕಾಲಘಟ್ಟದಲ್ಲಿ ಎಲ್ಲ ದೇಶಗಳು ಭಾರತದತ್ತ ಮತ್ತೆ ತಿರುಗಿ ನೋಡುವಂತಾಯಿತು ಎಂದರು.

    ಪೂಜ್ಯರ ಸಾನ್ನಿಧ್ಯದಲ್ಲಿ ಧ್ಯಾನದ ಪುಳಕ: ಗುರುದೇವ ಶ್ರೀಶ್ರೀ ರವಿಶಂಕರ ಗುರೂಜಿ ಸಾನ್ನಿಧ್ಯದಲ್ಲಿ ಸುಮಾರು 15 ನಿಮಿಷಗಳ ಕಾಲ ಸಾವಿರಾರು ಜನರು ಕುಳಿತಲ್ಲೇ ಸರಳ ವ್ಯಾಯಾಮ ಹಾಗೂ ಧ್ಯಾನದಲ್ಲಿ ತೇಲುವ ಮೂಲಕ ಪುಳಕಗೊಂಡರು.

    ಹರಿದುಬಂತು ಜನಸಾಗರ: ಆಧ್ಯಾತ್ಮಿಕ ಗುರುಗಳು, ಮಾನವಾತಾವಾದಿ ಗುರುದೇವ ಶ್ರೀಶ್ರೀ ರವಿಶಂಕರ ಗುರೂಜಿ ಸಾನ್ನಿಧ್ಯದಲ್ಲಿ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ‘ಆನಂದ ವಿಜಯೋತ್ಸವ ಮಹಾಸತ್ಸಂಗ’ ಕಾರ್ಯಕ್ರಮಕ್ಕೆ ವಿಜಯನಗರ ಸೇರಿ ಅಕ್ಕಪಕ್ಕದ ಜಿಲ್ಲೆಗಳಿಂದ ಸಾವಿರಾರು ಜನರು ಹರಿದು ಬಂದಿದ್ದರು. ವೇದಿಕೆಗೆ ಆಗಮಿಸಿದ ಗುರೂಜಿ ಅವರು ಸಭಿಕರ ಮೇಲೆ ಪುಷ್ಪ ವೃಷ್ಟಿಗೈದರು.

    ಭಕ್ತಿಯಿಂದ ಹೆಜ್ಜೆ ಹಾಕಿದ ಭಕ್ತರು: ಗುರುದೇವ ಶ್ರೀಶ್ರೀ ರವಿಶಂಕರ ಗುರೂಜಿ ಸಮ್ಮುಖದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸಂಗೀತ ಕಲಾವಿದರು ಭಕ್ತಿಗೀತೆಗಳನ್ನು ಹಾಡಿದರು. ಗುರುದೇವರ ಅಮೃತ ಕಂಠದಿಂದ ಹೊರ ಹೊಮ್ಮಿದ ‘ಶಂಭೋ ಶಂಭೋ’ ಭಜನಾ ಗೀತೆಗೆ ಜನರು ಭಕ್ತಿ ಪರವಶರಾದರು. ಗುರೂಜಿ ರ‌್ಯಾಂಪ್ ಮೇಲೆ ಪದಾರ್ಪಣೆ ಮಾಡುತ್ತಿದ್ದಂತೆ ನೆರೆದಿದ್ದ ಜನರು ಎದ್ದು ನಿಂತು, ಚಪ್ಪಾಳೆ ತಟ್ಟುತ್ತಾ ಸ್ಥಳದಲ್ಲೇ ಭಕ್ತಿಯಿಂದ ಹೆಜ್ಜೆ ಹಾಕಿ ಸಂಭ್ರಮಿಸಿದರು.

    ಒತ್ತಡ ಮುಕ್ತಿಗೆ ಜ್ಞಾನ, ಧ್ಯಾನ, ಗಾನವೇ ಔಷಧ; ಶ್ರೀಶ್ರೀ ರವಿಶಂಕರ ಗುರೂಜಿ ಆಶೀರ್ವಚನ
    ಒತ್ತಡ ಮುಕ್ತಿಗೆ ಜ್ಞಾನ, ಧ್ಯಾನ, ಗಾನವೇ ಔಷಧ; ಶ್ರೀಶ್ರೀ ರವಿಶಂಕರ ಗುರೂಜಿ ಆಶೀರ್ವಚನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts