More

    ಕುಡಿವ ನೀರು ಪೂರೈಸುವಲ್ಲಿ ಜಿಲ್ಲಾಡಳಿತ ವಿಫಲ

    ಹೊಸಪೇಟೆ: ನಗರದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟಿರುವ ರಾಣಿಪೇಟೆಯ ಮಹಿಳೆ ಕುಟುಂಬಸ್ಥರಿಗೆ 10 ಲಕ್ಷ ರೂ., ಅಸ್ವಸ್ಥರಿಗೆ 2 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂಬುದು ಸೇರಿ ಮತ್ತಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

    ಇಲ್ಲಿನ ಡಾ.ಪುನೀತ್ ರಾಜ್‌ಕುಮಾರ್ ವೃತ್ತದಿಂದ ಬಸ್ ನಿಲ್ದಾಣ, ಪಟ್ಟಣ ಪೊಲೀಸ್ ಠಾಣೆ ಮಾರ್ಗವಾಗಿ ನಗರಸಭೆ ಕಚೇರಿಗೆ ತಲುಪಿತು. ನಗರಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, 35 ವಾರ್ಡ್‌ಗಳ ಪೈಕಿ 20 ವಾರ್ಡ್‌ಗಳಲ್ಲಿ ನೀರಿನ ಟ್ಯಾಂಕ್‌ಗಳ ಮುಖಾಂತರ ನೀರು ಸರಬರಾಜು ಮಾಡುತ್ತಿರುವುದು ಖಂಡನೀಯ. ಈಗಾಗಲೇ ಹಲವು ವಾರ್ಡ್‌ಗಳಲ್ಲಿ ನೀರಿನ ಸ್ಯಾಂಪಲ್‌ಗಳನ್ನು ಪರೀಕ್ಷಿಸಿ ಸಂಶೋಧನೆ ವರದಿ ಪ್ರಕಾರ ಕುಡಿಯಲು ಯೋಗ್ಯವಲ್ಲವೆಂದು ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಎಲ್ಲಾ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಿಸಬೇಕು. ಕುಡಿಯಲು ಯೋಗ್ಯವಾದ ಶುದ್ಧ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

    ಕಲುಷಿತ ನೀರು ಕುಡಿದು ಮಹಿಳೆ ಮೃತಪಟ್ಟಿದ್ದು, ಸಾವಿನ ಹೊಣೆಯನ್ನು ನಗರಸಭೆ ಹೊರಬೇಕು. ಪರಿಹಾರ ನೀಡುವುದರ ಜೊತೆಗೆ ಅವಲಂಬಿತರಿಗೆ ಸರ್ಕಾರಿ ನೌಕರಿ ಕಲ್ಪಿಸಬೇಕು. ನಗರದ ಎಲ್ಲಾ ವಾರ್ಡ್‌ಗಳಲ್ಲಿ 24×7 ಕುಡಿಯುವ ನೀರಿನ ಪೈಪ್‌ಗಳನ್ನು ಹೊಸದಾಗಿ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಇದಕ್ಕೂ ಮುನ್ನ ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಮಾತನಾಡಿ, ವಿಜಯನಗರ ಜಿಲ್ಲೆಗೆ ಅನುದಾನದ ಕೊರತೆಯಿಲ್ಲ. ಸರ್ಕಾರದ ಅನುದಾನವಲ್ಲದೇ ಡಿಎಂಎಫ್ ನಿಧಿಯೂ ದೊರೆಯುತ್ತದೆ. ಆದರೂ, ನಗರದ ಜನತೆಗೆ ಕುಡಿಯುವ ನೀರಿಲ್ಲ. ಆನಂದ ಸಿಂಗ್ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿದ್ದರೂ ಹೊಸಪೇಟೆ ಜನರಿಗೆ ಕುಡಿಯುವ ನೀರು ಕಲ್ಪಿಸದಿರುವುದು ಅವರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ ಮಾತನಾಡಿ, ನಗರದಲ್ಲಿ ಒಂದೇ ರಸ್ತೆಯನ್ನು ನಾಲ್ಕಾರು ಬಾರಿ ದುರಸ್ತಿಗೊಳಿಸಲಾಗುತ್ತದೆ. ಸ್ವಲ್ಪ ಮಳೆಯಾದರೂ ಇಲ್ಲಿನ ರಸ್ತೆಗಳು ಉಕ್ಕಿ ಹರಿದು ಮನೆಗಳಿಗೆ ನುಗ್ಗುತ್ತವೆ. ತರಕಾರಿ ಮಾರುಕಟ್ಟೆ ತೆರವುಗೊಳಿಸಿ 10 ವರ್ಷಗಳು ಕಳೆದರೂ, ಹೊಸ ಮಾರ್ಕೆಟ್ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ. ಇದೀಗ ಚುನಾವಣೆ ಹೊಸ್ತಿಲಲ್ಲಿ ಶಾಸಕ ಆನಂದ ಸಿಂಗ್ ಮಾರ್ಕೆಟ್ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ್ದಾರೆ. ಇದು ಕೇವಲ ಜನರ ಕಣ್ಣೊರೆಸುವ ತಂತ್ರವಷ್ಟೇ. ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

    ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿದ್ದುಹಳ್ಳೇಗೌಡ, ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಭರತ್ ಕುಮಾರ್ ಸಿ.ಆರ್., ಪಕ್ಷದ ಪ್ರಮುಖರಾದ ನಾಗೇಶ ಪಾಟೀಲ್, ಪ್ರದೀಪ್, ಜೀಶಾನ್, ಆಯಿಶಾ ಬೇಗಂ, ರೆಬೆಕಾ, ಅರ್ಬಾಜ್, ದೀಪಕ್ ಸಿಂಗ್, ಎಚ್.ಆರ್.ವಿರೂಪಾಕ್ಷಿ, ಸೈಯದ್ ಮೊಹಮ್ಮದ್, ಕೆ.ಮಹೇಶ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್, ನಿಂಬಗಲ್ ರಾಮಕೃಷ್ಣ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಯೋಗಲಕ್ಷ್ಮೀ, ಮಂಜುನಾಥ, ಎಚ್.ಬಿ. ಶ್ರೀನಿವಾಸ, ಕುಬೇರ, ಅಣ್ಣಾಮಲೈ, ರಾಘವೇಂದ್ರ,ಪಾಂಡು, ಬುಡೇನ್, ಲಿಂಗಣ್ಣ ನಾಯಕ, ಕೃಷ್ಣ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ರಾಧಾ,ಮಂಜುಳಾ, ಕವಿತಾ,ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts