More

    ಹಾನಿ ಪ್ರದೇಶಗಳಿಗೆ ಡಿಸಿಗಳು ಖುದ್ದು ಭೇಟಿ ನೀಡಲಿ, ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

    ಹೊಸಪೇಟೆ: ಮಳೆಯಿಂದ ಉಂಟಾದ ಬೆಳೆನಷ್ಟ, ಮನೆ ಹಾನಿಗೆ ಪರಿಹಾರ ಮತ್ತು ಸಂತ್ರಸ್ಥರಿಗೆ ಮೂಲ ಸೌಕರ್ಯ ಒದಗಿಸಲು ಅನುದಾನದ ಕೊರತೆ ಇಲ್ಲ. ಆದ್ದರಿಂದ ಪರಿಹಾರಕ್ಕಾಗಿ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.

    ತಾಲೂಕಿನ ಕಮಲಾಪುರದ ಆರೇಂಜ್ ಕೌಂಟಿ ಹೊಟೆಲ್‌ನಲ್ಲಿ ತಂಗಿರುವ ಸಿಎಂ ಗುರುವಾರ ಬೆಳಗ್ಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ರಾಜ್ಯದಲ್ಲಿ ಮ ಹಾನಿ ಕುರಿತು ಅವಲೋಕಿಸಿದರು. ಹಿಂದೆಂದೂ ಕಾಣದಂತಹ ಮಳೆಯಾಗುತ್ತಿದೆ. ಹಳ್ಳ-ಕೊಳ್ಳ, ಹೊಳೆ ತೀರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ಪ್ರದೇಶಗಳಿಗೆ ಆಯಾ ಡಿಸಿಗಳು ಖುದ್ದು ಭೇಟಿ ನೀಡಬೇಕು. ಪರಿಹಾರ ವಿತರಣೆ, ಮಾಹಿತಿ ದಾಖಲಿಸುವಲ್ಲಿ ಲೋಪವಾಗದಂತೆ ಆಯಾ ತಹಸೀಲ್ದಾರ್‌ಗೆ ಮಾರ್ಗಸೂಚಿ ನೀಡಬೇಕು ಎಂದರು.

    ಮನೆ ಹಾನಿ ದಾಖಲಿಸುವಾಗ ವಸ್ತುಸ್ಥಿತಿ ಆಧರಿಸಿ, ಪರಿಹಾರ ಕೋರಿ ಬಂದ ಮನವಿಗಳನ್ನು ದಾಖಲಿಸಬೇಕು. ಮನೆ ಹಾನಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸುವಂತೆ ವಿಪತ್ತು ನಿರ್ವಹಣೆ ಆಯುಕ್ತರಿಗೆ ಸೂಚಿಸಿದರು. ಬೆಳೆಹಾನಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು. ಅಕ್ಟೋಬರ್‌ನಲ್ಲಿ ಸಂಭವಿಸಿದ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಬೇಕು ಎಂದರು.

    ಮೂಲಸೌಲಭ್ಯ ಹಾನಿಗೆ ಸಂಬಂಧಿಸಿದಂತೆ ಹಾನಿಯ ತೀವ್ರತೆಯನ್ನು ಆಧರಿಸಿ, ಸಿ ವರ್ಗ- ಎನ್ ಡಿಆರ್ ಎಫ್ ಮಾರ್ಗಸೂಚಿಯನ್ವಯ ದುರಸ್ತಿ, ಬಿ ವರ್ಗಕ್ಕೆ ಸರ್ಕಾರದಿಂದ ಹೆಚ್ಚುವರಿ ನೆರವು, ಎ ವರ್ಗದಲ್ಲಿ ಗುರುತಿಸಲಾದ ಹಾನಿಯಾದಲ್ಲಿ ಪುನರ್ ನಿರ್ಮಾಣ ಅಗತ್ಯವಿರುವ ಕಾಮಗಾರಿಗಳು ಎಂದು ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಅ.1 ರಿಂದ ಈವರೆಗೆ 13 ಜೀವಹಾನಿ, 28 ಜಾನುವಾರು ಸಾವು, 3309 ಮನೆ ಹಾನಿ, 6279 ಹೆಕ್ಟೇರ್ ಪ್ರದೇಶ ಬೆಳೆಹಾನಿಯಾಗಿದೆ. 5 ಕಡೆ ಕಾಳಜಿ ಕೇಂದ್ರಗಳನ್ನು ತೆರೆದು, 1330 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

    ಮುಂಗಾರು ಹಂಗಾಮಿನಲ್ಲಿ ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೊಂದು ಹಂತದಲ್ಲಿ 2 ಲಕ್ಷ ರೈತರಿಗೆ ಅಂದಾಜು 250 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೂ.1 ರಿಂದ ಸೆ.30ರ ವರೆಗೆ 48485 ಮನೆ ಹಾನಿಯಾಗಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 635.13 ಕೋಟಿ ರೂ. ಲಭ್ಯವಿದೆ ಎಂದು ಸರ್ಕಾರದ ಉನ್ನತಾಧಿಕಾರಿಗಳು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts