More

    ಮುಸಲ್ಮಾನ್ ನಾಯಕರಿಗೆ ಡಿಸಿಎಂ, ಗೃಹ ಖಾತೆ ನೀಡಿ

    ಹೊಸಪೇಟೆ: ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ನಾಯಕರೊಬ್ಬರಿಗೆ ಉಪ ಮುಖ್ಯಮಂತ್ರಿ ಇಲ್ಲವೇ ಗೃಹ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಮುಸ್ಲಿಂ ಸಂಘದ ಅಧ್ಯಕ್ಷ ಎಲ್.ಎಸ್.ಬಷೀರ್ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಶೇ.14 ಮುಸ್ಲಿಂ ಸಮುದಾಯದವರಿದ್ದು, ವಿಧಾನಸಭೆ ಚುನಾವಣೆಯಲ್ಲಿ ಶೇ.88 ಜನರು ಒಂದೇ ಉಸಿರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಬಾರಿ 9 ಮುಸ್ಲಿಂ ನಾಯಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.

    ಅವರಲ್ಲಿ ಜಮೀರ್ ಅಹಮ್ಮದ್ ಖಾನ್, ಯು.ಟಿ.ಖಾದರ್ ಸತತ ಗೆಲುವು ಸಾಧಿಸಿದ್ದಾರೆ. ಇವರಲ್ಲೊಬ್ಬರಿಗೆ ಉಪಮುಖ್ಯಮಂತ್ರಿ ಅಥವಾ ಗೃಹ ಖಾತೆ ನೀಡಬೇಕು ಎಂದು ಒತ್ತಾಯಿಸಿದರು.

    ಐಎಂಎನಲ್ಲಿ ಜಿಲ್ಲೆಯ ಹೊಸಪೇಟೆ ಮತ್ತು ಕೂಡ್ಲಿಗಿಯ ಮುಸ್ಲಿಂ ಸಮುದಾಯದವರು 12 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಐಎಂಎಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರದಲ್ಲಿ ಈ ಭಾಗದ ಜನರು ಹಣ ಕಳೆದುಕೊಂಡಿದ್ದಾರೆ. ಈ ಕುರಿತು ತನಿಖೆಗೆ ಚುರುಕುಗೊಳಿಸುವಂತೆ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತರಲಾಗುವುದು.

    ಐಎಂಎ ಸಂಸ್ಥೆಯ ಹಗರಣದಲ್ಲಿ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಆರೋಪಿ ಅಷ್ಟೇ. ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿದೆ. ಇತ್ತೀಚೆಗೆ ಬಹುತೇಕ ರಾಜಕಾರಣಿಗಳ ಮೇಲೆ ಒಂದಿಲ್ಲೊಂದು ಆರೋಪ, ಪ್ರಕರಣ ಇದ್ದೇ ಇರುತ್ತದೆ. ಆದರೆ, ಆರೋಪ ಇನ್ನೂ ಸಾಬೀತಾಗಿಲ್ಲ. ಹೀಗಾಗಿ ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡಲು ಯಾವುದೇ ಅಡತಡೆ ಇಲ್ಲ ಎಂದು ಸಮರ್ಥಿಸಿಕೊಂಡರು.

    ರಾಜಕಾರಣ ಜಾತಿ ಆಧಾರಿತವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಆದರೂ, ಎಲ್ಲ ಸಮುದಾಯಗಳು ತಮ್ಮನ್ನು ತಾವು ಪ್ರಬಲ ಎಂದು ಬಿಂಬಿಸಿಕೊಳ್ಳುವ ಜತೆಗೆ ಹೆಚ್ಚಿನ ಸ್ಥಾನಮಾನಗಳನ್ನು ಹೊಂದುತ್ತಿವೆ. ಹೀಗಾಗಿ ಮುಸ್ಲಿಂ ನಾಯಕರಿಗೆ ಅವಕಾಶ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಮಾದಿಗ ಎಡಗೈ ಸಮುದಾಯದ ಆರ್.ಬಿ.ತಿಮ್ಮಾಪೂರ್‌ಗೆ ಡಿಸಿಎಂ ಸ್ಥಾನ ನೀಡಿ

    ಯು.ಟಿ.ಖಾದರ್ ಮತ್ತು ಜಮೀರ್ ಅಹಮ್ಮದ್ ಖಾನ್ ಈ ಹಿಂದೆಯೂ ಸಚಿವರಾಗಿದ್ದು, ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಿಂದುಳಿದ ಮುಸ್ಲಿಂ ಸಮಾಜವನ್ನು ಪ್ರತಿನಿಧಿಸುವ ನಾಯಕರಿಗೆ ಈ ಬಾರಿ ಗೃಹ ಇಲ್ಲವೇ ಉಪ ಮುಖ್ಯಮಂತ್ರಿ ಸ್ಥಾನ ದೊರೆಯದಿದ್ದರೆ ಮುಂಬರುವ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಿಜ್ವಾನುಲ್ಲಾ, ಸಂಚಾಲಕ ಎನ್.ಅಬುಬಕರ್, ಎಲ್.ಎಸ್.ಮಹಮದ್ ರಫಿ, ಫಿರೋಜ್ ಆಲಂ ಮೌಲಾನಾ ಮರಬ, ಹೋನ್ನೂರ ವಲಿ, ಇಸ್ಮಾಯಿಲ್, ಷರೀಫ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts