More

    ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಆಗ್ರಹ

    ಹೊಸಪೇಟೆ: ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ- ಕರ್ನಾಟಕ ಸಮಿತಿ ಕಾರ್ಯಕರ್ತರು ಶುಕ್ರವಾರ ಹಂಪಿಯಿಂದ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪಾದಯಾತ್ರೆ ನಡೆಸಿದರು.

    ಮೂರೂ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ರಾಜ್ಯ ಸರ್ಕಾರವೂ ರದ್ದುಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿ ಪಡಿಸಬೇಕು. ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆದು, ಬೆಲೆಯೇರಿಕೆಯನ್ನು ಕೂಡಲೇ ನಿಯಂತ್ರಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ನಿರ್ಧಾರ ಹಿಂಪಡೆಯಬೇಕು. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ಸ್ವಾಧೀನದಲ್ಲಿ, ದೀರ್ಘಕಾಲ ನಡೆಯುವಂತಹ ಸ್ಥಳವನ್ನು ಕಾಯ್ದಿರಿಸಿ ಕಾರ್ಖಾನೆ ನಡೆಸಲು ಮುಂದಾಗಬೇಕು. ತಾಲೂಕಿನಲ್ಲಿ ರಾಜಾಪುರ, ಪಿ.ಕೆ.ಹಳ್ಳಿ, ನಲ್ಲಾಪುರ ಗ್ರಾಮಗಳಿಗೆ ಏತ ನೀರಾವರಿ ತ್ವರಿತ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಸೆಟ್ಲಮೆಂಟ್ ಸಂದರ್ಭದಲ್ಲಿ ಕೈಬಿಟ್ಟ ರಾಜಾಪುರ, ಜಂಬುನಾಥನಹಳ್ಳಿ, ಸಂಕ್ಲಾಪುರ ಗ್ರಾಮದ ರೈತರಿಗೆ ರೈತುವಾರಿ ಪಟ್ಟಾ, ಅರಣ್ಯ ಭೂ ಹಿಡುವಳಿದಾರರು, ಸರ್ಕಾರಿ ಜಮೀನುಗಳಲ್ಲಿ ಉಳಿಮೆ ಮಾಡುವವರಿಗೆ ಪಟ್ಟಾ ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ಖನಿಜ ಮತ್ತು ಅರಣ್ಯ ಸಂಪತ್ತಿನ ಮೂಲಕ ಸಂಗ್ರಹಿಸಿರುವ ಡಿ.ಎಂ.ಎಫ್. ಅನುದಾನವನ್ನು ಸರಿಯಾಗಿ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

    ತುಂಗಭದ್ರಾ ಎಡದಂಡೆ ಕೆಳಮಟ್ಟದ ಕಾಲುವೆಯಲ್ಲಿ ಎರಡನೇ ಬೆಳೆಗಾಗಿ ಏಪ್ರಿಲ್ 20ರ ವರೆಗೆ ನೀರು ಹರಿಸಬೇಕು. ತಾಲೂಕಿನ ವಿವಿಧೆಡೆ ತಲೆದೂರಿದ ನೀರಿನ ಸಮಸ್ಯೆ ನಿವಾರಿಸಬೇಕು. ಅಡುಗೆ ಅನಿಲ, ಇಂಧನ ಬೆಲೆಗಳನ್ನು ನಿಯಂತ್ರಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts