More

    4 ತಿಂಗಳಾದರೂ ಫಲಿತಾಂಶವಿಲ್ಲ, ರಿಸಲ್ಟ್‌ಗಾಗಿ ಕಾದಿರುವ ಕನ್ನಡ ವಿವಿಯ ದೂರ ಶಿಕ್ಷಣ ವಿದ್ಯಾರ್ಥಿಗಳು

    ಪ್ರಭು ಹಂಪಾಪಟ್ಟಣ ಹೊಸಪೇಟೆ

    ಕರೊನಾ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಶೈಕ್ಷಣಿಕ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡ ಪರಿಣಾಮ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಸ್ನಾತಕೋತ್ತರ ಅಂತಿಮ ವರ್ಷದ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

    ಶೈಕ್ಷಣಿಕ ಚಟುವಟಿಕೆ ಅರಂಭಿಸುವ ವೇಳೆಗೆ ಕರೊನಾ ಅಪ್ಪಳಿಸಿದ್ದರಿಂದ ಎಲ್ಲ ಚಟುವಟಿಕೆಗಳಿಗೆ ಗರ ಬಡಿಯಿತು. ಇದರಿಂದ ದೂರ ಶಿಕ್ಷಣ ಸೇರಿ ಎಲ್ಲ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು. ದೂರ ಶಿಕ್ಷಣ ವಿಭಾಗದಡಿ ಸ್ನಾತಕೋತ್ತರ ವಿಷಯಗಳಾದ ಕನ್ನಡ, ಇತಿಹಾಸ, ಸಮಾಜ ಶಾಸ್ತ್ರ, ಪತ್ರಿಕೋದ್ಯಮ ವಿಷಯ ಸೇರಿ ಒಟ್ಟು 1059 ವಿದ್ಯಾರ್ಥಿಗಳು 2021ರ ಫೆ.22 ರಿಂದ 26 ರವರೆಗೆ ಪರೀಕ್ಷೆ ಬರೆದಿದ್ದಾರೆ. ಆದರೆ, ಪರೀಕ್ಷೆ ಬರೆದು ನಾಲ್ಕು ತಿಂಗಳು ಕಳೆದರೂ ಫಲಿತಾಂಶ ಬಾರದಿರುವುದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

    ಪರೀಕ್ಷೆ ಮುಗಿದ ಬಳಿಕ ಶೇ.50 ಮೌಲ್ಯ ಮಾಪನ ನಡೆದಿದೆ. ತರುವಾಯ ಕರೊನಾ ಎರಡನೇ ಅಲೆಯಿಂದ ಸೋಂಕಿನ ಪ್ರಮಾಣ ಹೆಚ್ಚಳವಾದ್ದರಿಂದ ಲಾಕ್‌ಡೌನ್ ಘೋಷಣೆ ಅಯಿತು. ಇದರಿಂದ ಮೌಲ್ಯ ಮಾಪನವೂ ಸ್ಥಗಿತಗೊಳಸಲಾಗಿತ್ತು. ಈಗ ಮತ್ತೆ ಅನ್‌ಲಾಕ್ ಆಗಿದ್ದು, ಮತ್ತೆ ಮೌಲ್ಯಮಾಪನ ಕಾರ್ಯ ಅರಂಭವಾಗಿದೆ.

    ಸ್ಪರ್ಧಾತ್ಮಕ ಪರೀಕ್ಷೆಗೆ ಸಮಸ್ಯೆ
    ವಿವಿಧ ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ ದೂರ ಶಿಕ್ಷಣದಲ್ಲಿ ಪದವಿ ಪಡೆಯುವ ಉದ್ದೇಶದಿಂದ ಬಹುತೇಕರು ಪ್ರವೇಶ ಪಡೆದಿರು ತ್ತಾರೆ. ಸ್ನಾತಕೋತ್ತರ ಪದವಿ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಮಸ್ಯೆ ಎದುರಿಸುವಂತಾಗಿದೆ. ದೂರ ಶಿಕ್ಷಣದ ಫಲಿತಾಂಶ ಇನ್ನೂ ಪ್ರಕಟಗೊಳ್ಳದಿರುವುದರಿಂದ ಅಭ್ಯರ್ಥಿಗಳು ಚಿಂತೆಗೀಡಾಗಿದ್ದಾರೆ. ಅಲ್ಲದೆ ಬಿ.ಇಡಿ ಪ್ರವೇಶಕ್ಕೆ ಏಪ್ರಿಲ್‌ನಲ್ಲಿ ಎರಡು ಹಂತದಲ್ಲಿ ಕೌನ್ಸೆಲಿಂಗ್ ನಡೆದಿದೆ. ಪ್ರಸ್ತುತ ಮೂರನೇ ಹಂತದ ಕೌನ್ಸೆಲಿಂಗ್ ನಡೆಯುತ್ತಿದೆ. ಬಿ.ಇಡಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳೂ ಸ್ನಾತಕೋತ್ತರ ಫಲಿತಾಂಶ ಬಾರದ್ದರಿಂದ ತೊಂದರೆ ಅನುಭವಿಸುವಂತಾಗಿದೆ.

    ವಿವಿ ಶೆಡ್ಯೂಲ್ ಪ್ರಕಾರ ಏಪ್ರಿಲ್ ಅಂತ್ಯಕ್ಕೆ ಫಲಿತಾಂಶ ಪ್ರಕಟಗೊಳ್ಳಬೇಕಿತ್ತು. ಆದರೆ, ಇನ್ನೂ ಪ್ರಕಟಿಸಿಲ್ಲ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಮಸ್ಯೆಯಾಗಿದೆ. ಬೆಂಗಳೂರು ವಿವಿಯಲ್ಲಿ ಪಿ.ಎಚ್‌ಡಿಗೆ ಆಹ್ವಾನಿಸಲಾಗಿದ್ದು, ಅರ್ಜಿ ಹಾಕಲು ಅರ್ಹತೆ ಇಲ್ಲವಾಗಿದೆ. ಆದಷ್ಟು ಶೀಘ್ರ ಫಲಿತಾಂಶ ಪ್ರಕಟಗೊಂಡರೆ ಅನುಕೂಲವಾಗಲಿದೆ.
    | ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ

    2018-19ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿತ್ತು. ಲಾಕ್‌ಡೌನ್‌ನಿಂದ ಸ್ಥಗಿತ ಗೊಳಿಸಲಾಯಿತು. ಈಗ ಮತ್ತೆ ಆರಂಭಿಸಲಾಗಿದೆ. ಮೌಲ್ಯ ಮಾಪನ ಪೂರ್ಣಗೊಳಿಸಿ ಜುಲೈ ಅಂತ್ಯದ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು.
    | ಡಾ.ಚಿನ್ನಸ್ವಾಮಿ ಸೋಸಲೆ ನಿರ್ದೇಶಕ, ದೂರ ಶಿಕ್ಷಣ ವಿಭಾಗ, ಕನ್ನಡ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts