More

    ಸುರುಳಿ ಬಿಳಿನೋಣ ಹತೋಟಿಗೆ ಜೈವಿಕ ಕ್ರಮ ಸೂಕ್ತ

    ಹೊಸದುರ್ಗ: ತೆಂಗಿನ ಮರಕ್ಕೆ ಮಾರಕವಾಗಿರುವ ರೋಗೊಸ್ ಸುರುಳಿ ಬಿಳಿನೋಣವನ್ನು ಜೈವಿಕ ಕ್ರಮದ ಮೂಲಕ ಹತೋಟಿ ಮಾಡಿದರೆ ತೆಂಗಿನ ಗರಿ ಒಣಗುವುದನ್ನು ನಿಯಂತ್ರಿಸಬಹುದು ಎಂದು ಎನ್‌ಬಿಎಐಆರ್‌ನ ಹಿರಿಯ ವಿಜ್ಞಾನಿ ಡಾ.ಸೆಲ್ವರಾಜ್ ಸಲಹೆ ನೀಡಿದರು.

    ತಾಲೂಕಿನ ಸಾಣೇಹಳ್ಳಿ ಮಠದ್ಝ್ಛ್ಝಜಿ ಗುರುವಾರ ಕೃಷಿ ಇಲಾಖೆ ಆಯೋಜಿಸಿದ್ದ ತೆಂಗಿನ ಬೆಳೆಯಲ್ಲಿ ಬಿಳಿನೋಣದ ಬಾಧೆ ತಡೆಗಟ್ಟುವ ಜೈವಿಕ ಕ್ರಮದ ತಾಂತ್ರಿಕ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈ ರೋಗ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿ 2016ರಲ್ಲಿ ಪ್ರಥಮವಾಗಿ ಕಾಣಿಸಿಕೊಂಡಿದ್ದು, ನಂತರ 2018ರಲ್ಲಿ ಕೇರಳ, 2019ರಲ್ಲಿ ರಾಜ್ಯದ ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು. ಪ್ರಸ್ತುತ ಹೊಸದುರ್ಗ ತಾಲೂಕಿನಲ್ಲಿ ವ್ಯಾಪಕವಾಗಿ ಹರಡಿದ್ದು, ರಾಸಾಯನಿಕ ಬದಲು ಜೈವಿಕ ವಿಧಾನ ಉತ್ತಮ ಮದ್ದು ಎಂದರು.

    ವಿದೇಶದಿಂದ ಬಂದಿರುವ ಬಿಳಿನೋಣಗಳು ತೋಟದ ಸಸ್ಯಗಳನ್ನು ಆಸರೆ ಮಾಡಿಕೊಂಡು ತೆಂಗಿನ ಮರಗಳ ಮೇಲೆ ದಾಳಿ ನಡೆಸುತ್ತವೆ. ಮರಿಗಳು ಹಾಗೂ ಪ್ರೌಢ ಕೀಟಗಳು ತೆಂಗಿನ ಗರಿಯ ಕೆಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಅದು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಆರಂಭವಾಗುತ್ತದೆ ಎಂದು ಹೇಳಿದರು.

    ಬಿಳಿನೋಣದ ನೈಸರ್ಗಿಕ ಶತ್ರುವಾದ ಎನ್ಕಾರ್ಸಿಯ ಗ್ವಾಡೆಲೋಪೆ ಕಣಜ ಹಾಗೂ ಇಸಾರಿಯಾ ಪ್ಯೂಮೋಸೋರೋಸಿಯ ಶಿಲೀಂಧ್ರ ಬಿಳಿನೋಣವನ್ನು ಹತೋಟಿಯಲ್ಲಿ ಇಡುತ್ತವೆ. ಇದನ್ನು ತೆಂಗಿನ ತೋಟದಲ್ಲಿ ಹಾರಿಬಿಡುವ ಹಾಗೂ ಸಿಂಪಡಿಸುವ ಮೂಲಕ ರೋಗವನ್ನು ನಿಯಂತ್ರಿಸಬಹುದು. ಜೈವಿಕ ಅಣುಗಳಿಂದ ಸಿದ್ಧಪಡಿಸಲಾದ ದ್ರಾವಣವನ್ನು ಸಂಜೆ 5ರ ನಂತರ ತಂಪಾದ ಸಮಯದಲ್ಲಿ ಸಿಂಪಡಿಸಿದರೆ ಹೆಚ್ಚಿನ ಪ್ರಭಾವ ಸಾಧ್ಯವಾಗುತ್ತದೆ. ರೋಗ ಹತೋಟಿಗೆ ಸಾಮೂಹಿಕವಾಗಿ ಎಲ್ಲ ರೈತರು ಮುಂದಾಗಬೇಕಾದ ಅಗತ್ಯ ಇದೆ ಎಂದರು.

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೃಷಿ ಇಲಾಖೆ ಎಡಿ ಸಿ.ಎಸ್.ಈಶ, ಡಾ.ಸರಸ್ವತಿ, ಓಂಕಾರಪ್ಪ, ಬಸವರಾಜಪ್ಪ, ಜಗದೀಶ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts