More

    ರಾಗಿ ಬೆಳೆ ರೈತರ ಮುಖದಲ್ಲಿ ಕಳೆ

    ಯೋಗೀಶ್ ಮೇಟಿಕುರ್ಕೆ ಹೊಸದುರ್ಗ: ಐದು ವರ್ಷಗಳ ಸತತ ಬರದ ಬಳಿಕ ಸುರಿದ ಮಳೆ ಹೊಸದುರ್ಗ ತಾಲೂಕಿನ ಕೆರೆ ಕಟ್ಟೆಗಳಿಗೆ ಜೀವ ಕಳೆ ತಂದಿದ್ದು ಮಾತ್ರವಲ್ಲ ರಾಗಿ ಬೆಳೆಗಾರರನ್ನೂ ಕೈ ಹಿಡಿದಿದೆ.

    ಹೊಸದುರ್ಗ ತಾಲೂಕಿನ 54137 ಎಕರೆ ಪ್ರದೇಶದಲ್ಲಿ ಈ ಬಾರಿ ರಾಗಿ ಬೆಳೆಯಲಾಗಿದ್ದು, ಭರಪೂರ ಇಳುವರಿ ರೈತರ ಮುಖದಲ್ಲಿ ಸಂತಸ ಅರಳಿಸಿದೆ.

    ಇಷ್ಟು ವರ್ಷ ಜಮೀನಿಗೆ ದುಡ್ಡು ಹಾಕಿ ಕಳೆದುಕೊಂಡಿದ್ದ ರೈತರು ಈ ಬಾರಿ ಪ್ರತಿ ಹೆಕ್ಟೇರ್‌ಗೆ 15 ಕ್ವಿಂಟಾಲ್‌ಗೂ ಅಧಿಕ ಇಳುವರಿ ನಿರೀಕ್ಷಿಸಿ ಖುಷಿಯಲ್ಲಿದ್ದಾರೆ.

    ರಾಜ್ಯದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ತಾಲೂಕುಗಳಲ್ಲಿ ಹೊಸದುರ್ಗವೂ ಒಂದು. ಇದು ಇಲ್ಲಿನ ಸಾಂಪ್ರದಾಯಕ ಬೆಳೆಯೂ ಹೌದು. ಹಿಡುವಳಿ ಹೊಂದಿದ ಪ್ರತಿ ರೈತರೂ ರಾಗಿ ಬಿತ್ತನೆ ಮಾಡಿದ್ದಾರೆ.

    2019-20ರ ಮುಂಗಾರು ಹಂಗಾಮಿಗೆ ತಾಲೂಕಿನ 21665 ಹೆಕ್ಟೆರ್ ಭೂಮಿಯಲ್ಲಿ ರಾಗಿ ಬೆಳೆಯಲಾಗಿದ್ದು ಈ ಬಾರಿ ಮಳೆ ಕೊರತೆ ಬಾಧಿಸಲಿಲ್ಲ.

    ರಾಗಿ ಖರೀದಿ ಕೇಂದ್ರ ಸ್ಥಾಪನೆ: ಎಪಿಎಂಸಿ ಮಾರುಕಟ್ಟೆಯಲ್ಲಿ ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದಿದೆ. ಕ್ವಿಂಟಾಲ್ ರಾಗಿಗೆ 3200 ರೂ. ಬೆಂಬಲ ಬೆಲೆ ಘೋಷಿಸಿದೆ. ಕ್ವಿಂಟಾಲ್‌ಗೆ 3 ಸಾವಿರ ಅಸುಪಾಸಿನಲ್ಲಿದ್ದ ರಾಗಿ ಬೆಲೆ 2200 ರೂ.ಗಳಿಗೆ ಕುಸಿತ ಕಂಡಿತ್ತು. ಬೆಂಬಲ ಬೆಲೆ ಘೋಷಣೆಯಿಂದ ಬೆಲೆ ಸ್ಥಿರತೆ ಕಾಣುತ್ತಿದೆ. ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಬೆಳೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಮಾರ್ಗದರ್ಶನ ಕೂಡ ನೀಡಿತ್ತು. ರೈತ ಸಂಪರ್ಕ ಕೇಂದ್ರಗಳ ಮೂಲಕ ಶೇ 50 ರ ಸಬ್ಸಿಡಿಯಲ್ಲಿ ರೈತರಿಗೆ 1468 ಕ್ವಿಂಟಾಲ್ ರಾಗಿ ಬೀಜ ವಿತರಿಸಲಾಗಿತ್ತು.

    ಆಕ್ಷೇಪಣೆ ಸಲ್ಲಿಸಲೂ ಅವಕಾಶ: ಬೆಳೆ ದೃಢೀಕರಣ ನಮೂದಿಸಿದ ರೈತರಿಂದ ಮಾತ್ರ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಸಲಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಬೇಟಿ ನೀಡಿ ಬೆಳೆ ದಾಖಲಿಕರಣ ಮಾಡಿದ್ದರೂ ತಾಂತ್ರಿಕ ಕಾರಣಗಳಿಂದ ಕೆಲವು ಆಗಿಲ್ಲ. ರಾಗಿ ಬೆಳೆದು ದಾಖಲೀಕರಣ ಆಗದಿದ್ದರೆ ರೈತರು ನಿಗದಿತ ನಮೂನೆಯಲ್ಲಿ ಕೃಷಿ ಇಲಾಖೆಗೆ ಅಕ್ಷೇಪಣೆ ಸಲ್ಲಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ. ಜನವರಿ 30 ರ ಒಳಗೆ ರೈತರು ಬೆಳೆ ದರ್ಶಕ ಮೊಬೈಲ್ ಆ್ಯಪ್, ಬೆಳೆ ಸಮೀಕ್ಷೆ ವೆಬ್‌ಸೈಟ್ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಆಕ್ಷೇಪಣೆ ಸಲ್ಲಿಸಬಹುದು.

    ಅಧಿಕ ಪೌಷ್ಟಿಕ ಆಹಾರ: ರಾಗಿ ಅಧಿಕ ಪೌಷ್ಟಿಕ ಅಂಶಗಳನ್ನು ಹೊಂದಿದೆ. ಮಧುಮೇಹಿಗಳು, ಕಬ್ಬಿಣಾಂಶದ ಕೊರತೆ, ಬಲಹೀನತೆ ಹೊಂದಿದವರಿಗೆ ರಾಗಿ ಉತ್ತಮ ಆಹಾರ. ಪ್ರತಿ ನೂರು ಗ್ರಾಂ ರಾಗಿಯಲ್ಲಿ 7.3ರಷ್ಟು ಪ್ರೋಟಿನ್, 3.6ರಷ್ಟು ನಾರು, 2.7ರಷ್ಟು ಲವಣಾಂಶಗಳು, 3.9ರಷ್ಟು ಕಬ್ಬಿಣ, 34ರಷ್ಟು ಕ್ಯಾಲ್ಸಿಯಂ ಪ್ರಮಾಣ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts