ಹೊಸದುರ್ಗ: ಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನೆ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಕೆಂಡದ ಹೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು.
ಕೆಂಡಾರ್ಚನೆ ಮಹೋತ್ಸವದ ಪೂರ್ವಭಾವಿಯಾಗಿ ಸೋಮವಾರ ದೇವಾಲಯದ ಆವರಣದಲ್ಲಿ ಧರ್ಮ ಧ್ವಜಾರೋಹಣ ಹಾಗೂ ಲಿಂಗಧಾರಣೆ ನೆರವೇರಿಸಲಾಯಿತು. ಶ್ರೀ ವೀರಭದ್ರಸ್ವಾಮಿ ಮೂಲ ಶಿಲಾಮೂರ್ತಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಮಂಗಳವಾರ ಮುಂಜಾನೆ ಕೆಂಡಾರ್ಚನೆ ಅಂಗವಾಗಿ ಪಟ್ಟಣದ ಶ್ರೀಗುರು ಒಪ್ಪತ್ತಿನ ಸ್ವಾಮಿ ವಿರಕ್ತಮಠದಲ್ಲಿ ಗಂಗಾಪೂಜೆ ನೆರವೇರಿಸಿ ಗಂಗಾದೇವಿ ಕಳಸ, ಶ್ರೀ ಈಶ್ವರ ಸ್ವಾಮಿ, ಶ್ರೀ ವೀರಭದ್ರಸ್ವಾಮಿ ಆಡ್ಡಪಲ್ಲಕ್ಕಿ ಹಾಗೂ ಜಂಗಮ ಮಹೇಶ್ವರರ ಮೆರವಣಿಗೆ ನಡೆಸಲಾಯಿತು. ನೂರಾರು ಮಹಿಳೆಯರು ಕುಂಭ ಹೊತ್ತು ನಡೆದು ಬಂದ ಮೆರವಣಿಗೆಗೆ ವೀರಗಾಸೆ, ನಂದಿ ಧ್ವಜ, ವೀರಭದ್ರ ಕುಣಿತ ಮತ್ತಿತರ ಕಲಾತಂಡಗಳು ಮೆರಗು ನೀಡಿದವು.
ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿದ್ದ ಆಗ್ನಿಕುಂಡಕ್ಕೆ ಪೂಜೆ ಸಲ್ಲಿಸಿದ ನಂತರ ಮುತೈದೆಯರ ಮಡಿಲಿಗೆ ಕೆಂಡ ಹಾಕುವ ಸೇವೆ ನಡೆಸಲಾಯಿತು. ನಂದಿ ಧ್ವಜ, ಗಂಗಾ ಕಳಸ ಹಾಗೂ ಜಂಗಮ ಮಹೇಶ್ವರರು ಕೆಂಡ ಹಾಯ್ದ ನಂತರ ದೇವರು ಹಾಗೂ ಭಕ್ತರು ಕೆಂಡ ಹಾಯ್ದರು.
ದೇವಾಲಯವನ್ನು ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಂತರ ದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸಂಜೆ ಶ್ರೀ ವೀರಭದ್ರಸ್ವಾಮಿ ಹಾಗೂ ಪರಿವಾರದ ದೇವರ ರಾಜಬೀದಿ ಉತ್ಸವ ನಡೆಯಿತು.