More

    ಮುತ್ತಿನಪುರ ದೇಗುಲದ ಕಲಶಾರೋಹಣ

    ಚಿಕ್ಕಮಗಳೂರು: ಮುತ್ತಿಪುರದ ಗ್ರಾಮದಲ್ಲಿ ಭಾನುವಾರ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ಅಮ್ಮನವರ ನೂತನ ದೇವಾಲಯ ಉದ್ಘಾಟನೆ, ಕಲಶ ಗೋಪುರ ಪ್ರತಿಷ್ಠಾಪನಾ ಹಾಗೂ ಕುಂಭಾಭಿಷೇಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

    ಬೆಳಗಿನ ಜಾವದಿಂದಲೇ ದೇವಾಲಯದ ಆವರಣದಲ್ಲಿ ರುದ್ರ ಹೋಮ, ಕಲಶಾರೋಹಣ, ಕುಂಭಾಭಿಷೇಕ, ಪ್ರಧಾನ ಹೋಮ, ಜಯಾದಿ ಹೋಮ, ರುದ್ರಾಭಿಷೇಕ, ಪೂರ್ಣಾಹುತಿ, ಪ್ರಾಣ ಪ್ರತಿಷ್ಠಾಪನೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
    ಗ್ರಾಮ ಸಮೀಪದ ಹೊಳೆಯಿಂದ 108 ಕಳಸವನ್ನು ಹೊತ್ತುಕೊಂಡು ಮುತ್ತೈದೆಯರು ದೇವಾಲಯಕ್ಕೆ ಆಗಮಿಸಿದರು. ಬಳಿಕ ಪವಿತ್ರ ಕಳಸದ ಜಲವನ್ನು ಹಾಗೂ ಪಂಚಮಠಗಳ ಪುಣ್ಯತೀರ್ಥವನ್ನು ಉತ್ಸವ ಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು.
    ಯಡಿಯೂರು ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಕಲಶಾರೋಹಣ ನೆರವೇರಿಸಿದರು. ಹುಣಸಘಟ್ಟದ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ದೇವಾಲಯ ಧರ್ಮದರ್ಶಿ ಶಶಿಧರ್ ಮಾತನಾಡಿ, ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಗ್ರಾಮದ ಪೂರ್ವಿಕರು ಅಂದಿನಿಂದ ಶ್ರದ್ಧೆಯಿಂದ ಪೂಜೆ ನೆರವೇರಿಸಿಕೊಂಡು ಬಂದಿದ್ದರು. ಇದೀಗ ದೇವಾಲಯ ಜೀರ್ಣೋದ್ಧಾರ ಗ್ರಾಮಸ್ಥರು, ದೇವಾಲಯ ಸಮಿತಿ ಅಧ್ಯಕ್ಷರು, ಸದಸ್ಯರು ಭಕ್ತರು ಹಾಗೂ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ಸಹಕಾರದಿಂದ ಸಂಪನ್ನಗೊಂಡಿದೆ ಎಂದರು.
    ಮಾಜಿ ಸಚಿವ ಸಿ.ಟಿ.ರವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಲಶಾರೋಹಣ ಮಹೋತ್ಸವದಲ್ಲಿ ಮುತ್ತಿನಪುರ ಗ್ರಾಮಸ್ಥರು, ಹೊರ ಜಿಲ್ಲೆಗಳ ನೂರಾರು ಭಕ್ತರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts