ಹೊಸದುರ್ಗ: ಕುಂಚಿಟಿಗ ಸಮುದಾಯದ ಜಾಗೃತಿ, ಸಂಘಟನೆ ಹಾಗೂ ಅಭಿವೃದ್ಧಿಯೇ ವಿಜಯರಾಯ ಸಂಗಮೇಶ್ವರ ಜಯಂತ್ಯುತ್ಸವದ ಮೂಲ ಆಶಯವಾಗಿದೆ ಎಂದು ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಬೋಕಿಕೆರೆ ಗೇಟ್ ಬಳಿ ಮಂಗಳವಾರ ಆಯೋಜಿಸಿದ್ದ ಶ್ರೀ ವಿಜಯರಾಯ ಸಂಗಮೇಶ್ವರ ಜಯಂತ್ಯುತ್ಸವ ಹಾಗೂ ನೂತನ ಸಮುದಾಯ ಭವನದ ಭೂಮಿಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಗಮೇಶ್ವರ ಜಯಂತ್ಯುತ್ಸವವು ಪಕ್ಷಾತೀತ ಕಾರ್ಯಕ್ರಮ. ಈ ವೇದಿಕೆಯನ್ನು ರಾಜಕೀಯ ಅಥವಾ ಯಾವುದೇ ವ್ಯಕ್ತಿಯನ್ನು ಬಿಂಬಿಸುವುದಕ್ಕಾಗಿ ಬಳಸಿಕೊಂಡಿಲ್ಲ. ಎಲ್ಲ ಸಮಾಜ ಹಾಗೂ ಪಕ್ಷದ ಜನರನ್ನು ವಿಶ್ವಾಸಕ್ಕೆ ಪಡೆದು ಸದೃಢ ಸಮಾಜ ಕಟ್ಟುವುದೇ ನನ್ನ ಉದ್ದೇಶ. ಮುಂದಿನ 10 ವರ್ಷ ರಾಜಕೀಯಕ್ಕೆ ಆಸ್ಪದವಿಲ್ಲದೆ ಸಮಾಜ ಬಲಪಡಿಸಲು ಆದ್ಯತೆ ನೀಡಲಾಗುವುದು ಎಂದರು.
ಕುಂಚಿಟಿಗ ಸಮುದಾಯಕ್ಕೆ ಮೊದಲ ಗುರುವಾಗಿ ಸಮುದಾಯ ಸಂಘಟಿಸುವ ಕಾರ್ಯದಲ್ಲಿ ಕೆಲವೊಮ್ಮೆ ಕಠೋರವಾಗಿ ನಡೆದುಕೊಂಡಿದ್ದೇನೆ. ಆದರೆ, ನಮ್ಮನ್ನು ನಂಬಿ ಬಂದವರಿಗೆ ಮೋಸ ಮಾಡಿಲ್ಲ. 2001ರಲ್ಲಿ ಕುಂಚಿಟಿಗ ಮಠದ ಹೆಸರಲ್ಲಿ 1 ರೂ.ನ ಆಸ್ತಿಯೂ ಇರಲಿಲ್ಲ. ಸದ್ಯ ಹೊಸದುರ್ಗ ಪಟ್ಟಣದ ಹೃದಯ ಭಾಗದಲ್ಲಿ 15 ಎಕರೆ ಜಮೀನು ಹಾಗೂ 36 ನಿವೇಶನಗಳನ್ನು ಹೊಂದಲಾಗಿದೆ. ಕಾಲೇಜು, ಹಾಸ್ಟೆಲ್ ಸೇರಿ ಹಲವಾರು ಕಟ್ಟಡಗಳ ನಿರ್ಮಾಣಕಾರ್ಯ ನಡೆಯುತ್ತಿದೆ. ಸಮಾಜ ಗೌರವ ಹಾಗೂ ಗರ್ವದಿಂದ ತಲೆ ಎತ್ತಿ ನಿಲ್ಲುವಂಥ ಕೆಲಸ ಮಾಡಿದ್ದೇನೆ ಎಂದರು.
ಸಾಣೇಹಳ್ಳಿಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೊರಡಾಗಿದ್ದ, ಬರಡಾಗಿದ್ದ ಕುಂಚಿಟಿಗ ಸಮಾಜಕ್ಕೆ ಚೈತನ್ಯ ತುಂಬುವ ಕೆಲಸವನ್ನು ಶಾಂತವೀರ ಶ್ರೀಗಳು ಮಾಡಿದ್ದಾರೆ. ಅವರಲ್ಲಿರುವ ಅತ್ಮಬಲ, ಛಲದಿಂದ ಅಲ್ಪಾವಧಿಯಲ್ಲೇ ಸಮಾಜಮುಖಿ ಸಾಧನೆ ಮಾಡಿದ್ದಾರೆ. ಶ್ರೀಗಳ ಪ್ರಯತ್ನಕ್ಕೆ ಭಕ್ತರು ಸಹಕಾರ ನೀಡಿದರೆ ಸಮುದಾಯಭವನ ಇತರೆ ಹತ್ತಾರು ಕಾರ್ಯಗಳು ನಡೆಯುತ್ತವೆ. ಭಕ್ತರು ಹಾಗೂ ಗುರುವಿನ ನಡುವೆ ಜಾತಿ, ಪಕ್ಷ, ಮತ ಅಡ್ಡ ಬರಬಾರದು ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ವಿಜಯರಾಯ ಸಂಗಮೇಶ್ವರ ಜಯಂತ್ಯುತ್ಸವ ಕುಂಚಿಟಿಗ ಸಮುದಾಯವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಶಾಂತವೀರ ಸ್ವಾಮೀಜಿ ಪರಿಶ್ರಮ ಹೆಚ್ಚಾಗಿದೆ. ಎಲ್ಲ ಸಮುದಾಯದ ಶ್ರೀಗಳ ಆಶೀರ್ವಾದದಿಂದಾಗಿ ನಾನು ವಿಧಾನಸೌಧಕ್ಕೆ ಹೋಗಲು ಸಾಧ್ಯವಾಯಿತು. ನಿರ್ಮಾಣ ಹಂತದ ಸಮುದಾಯ ಭವನಕ್ಕೆ 10 ಲಕ್ಷ ರೂ. ಅನುದಾನ ಒದಗಿಸುವುದಾಗಿ ತಿಳಿಸಿದರು.
ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಶಾಂತವೀರ ಸ್ವಾಮೀಜಿ ಬಂದ ನಂತರ ಕುಂಚಿಟಿಗ ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದೆ. ಶ್ರೀಗಳು ನೂತನ ಸಮುದಾಯ ಭವನಕ್ಕೆ ಸರ್ಕಾರದಿಂದ 5 ಕೋಟಿ ಅನುದಾನ ತಂದಿದ್ದಾರೆ ಎಂದರು.
ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮಿಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಜ್ಞಾನಪ್ರಭು ದೇಶಿಕೇಂದ್ರ ಸ್ವಾಮಿಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಶ್ರೀ ಅನ್ನದಾನ ಭಾರತೀ ಸ್ವಾಮಿಜಿ, ಬಸವ ಮಾಚಿದೇವ ಸ್ವಾಮೀಜಿ, ಸಮಾಜದ ಅಧ್ಯಕ್ಷ ಕಲ್ಕೆರೆ ಶೇಖರಪ್ಪ, ಮುರಳೀಧರ ಹಾಲಪ್ಪ, ಎಚ್.ಆರ್.ಕಲ್ಲೇಶ್ ಇತರರಿದ್ದರು.