More

    ವಿವಿ ಸಾಗರ ಹಿನ್ನೀರು ಹೊಸದುರ್ಗಕ್ಕೆ ಸಿಕ್ಕಿತೇ?

    ಎಂ.ಯೋಗೀಶ್ ಮೇಟಿಕುರ್ಕೆ ಹೊಸದುರ್ಗ: ಕಲ್ಪವೃಕ್ಷ, ದಾಳಿಂಬೆ ನಾಡು ಎಂಬ ಹೆಗ್ಗಳಿಕೆ ಪಡೆದಿದ್ದ ಹೊಸದುರ್ಗ ಜನ ಅಂತರ್ಜಲ ಪಾತಾಳಕ್ಕೆ ಇಳಿದ ಪರಿಣಾಮ ಹಲವು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇನ್ನೂ ವಿವಿ ಸಾಗರ ಹಿನ್ನೀರಿನಿಂದ ತಾಲೂಕಿಗೆ ನೀರು ಹರಿಸುವ ಹಲವು ವರ್ಷಗಳ ಹೋರಾಟ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕನಸಾಗಿಯೇ ಉಳಿದಿದೆ.

    ಈ ಮಧ್ಯೆ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಜರುಗುತ್ತಿದೆ. ಈ ಸ್ಥಳಕ್ಕೆ ಮಂಗಳವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಜನರಲ್ಲಿ ಕನಸುಗಳಿಗೆ ಚಿಗುರು ತಂದಿದೆ.

    ಪಟ್ಟಣ ಸೇರಿ ತಾಲೂಕಿನ ಕೆಲ ಗ್ರಾಮಗಳಿಗೆ ವಾಣಿ ವಿಲಾಸ ಸಾಗರದ ಹಿನ್ನೀರಿನಿಂದ ನೀರು ತಂದು ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಚಿಂನತೆ ನಡೆಸಿದ್ದು, ಮೇ 6ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ನೀರು ಒದಗಿಸುವಂತೆ ಒತ್ತಾಯಿಸಿದ್ದರು.

    ವಾಣಿವಿಲಾಸ ಸಾಗರ ನಿರ್ಮಾಣದಿಂದ ತಾಲೂಕಿನ ರೈತರ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗಿದೆ. ಯಾವುದೇ ಪರಿಹಾರ ಪಡೆಯದೆ ಭೂಮಿ ಕಳೆದುಕೊಂಡಿರುವ ತಾಲೂಕಿನ ಜನರಿಗೆ ನ್ಯಾಯ ಒದಗಿಸಬೇಕಿದೆ. ಹೀಗಾಗಿ ಕುಡಿಯುವ ಉದ್ದೇಶಕ್ಕೆ ವಾಣಿ ವಿಲಾಸ ಸಾಗರದ ನೀರಿನಲ್ಲಿ ತಾಲೂಕಿಗೆ ನೀರಿನ ಪ್ರಮಾಣವನ್ನು ನಿಗದಿಪಡಿಸಬೇಕು ಎಂಬುದು ಜನರ ಒತ್ತಾಯ.

    ಶಾಸಕರ ಆಗ್ರಹ: ನೀರಾವರಿ ಯೋಜನೆಗಳಿಗೆ ಜಮೀನು ನೀಡಿದ ತಾಲೂಕಿನ ಜನರಿಗೆ ಇದರಿಂದ ಅನುಕೂಲವಾಗುತ್ತಿಲ್ಲ. ವಾಣಿ ವಿಲಾಸ ಸಾಗರದ ನಿರ್ಮಾಣದಲ್ಲೂ ಅನ್ಯಾಯವಾಗಿದೆ. ವಿ.ವಿ.ಸಾಗರದ ನೀರನ್ನು ಕಾನೂನು ಬದ್ಧವಾಗಿ ಬಳಸಲು ಅನುಮತಿ ನೀಡುವ ಮೂಲಕ ತಾಲೂಕಿನ ಜನರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಶಾಸಕ ಗೂಳಿಹಟ್ಟಿ ಶೇಖರ್ ಅವರ ಪಟ್ಟು.

    ನಿಜ ಫಲಾನುವಿಗಳು ನಾವು: ವಾಣಿ ವಿಲಾಸ ಸಾಗರದ ನೀರಿಗೆ ಹಿರಿಯೂರು ಹಾಗೂ ಚಳ್ಳಕೆರೆ ಜನರು ಫಲಾನುಭವಿಗಳಾಗುವ ಜತೆಗೆ ನೀರಿಗಾಗಿ ಪ್ರಬಲ ಹಕ್ಕು ಮಂಡಿಸುತ್ತಿದ್ದಾರೆ. ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ನಾವು ನಿಜವಾದ ಫಲಾನುಭವಿಗಳಾಗಿದ್ದೇವೆ. ನಮಗೆ ಕೇವಲ ಜಾನುವಾರುಗಳ ಮೈತೊಳೆಯಲು ನೀರು ಬಳಕೆಯಾಗುತ್ತಿದೆ. ನೀರಿನ ಬಳಕೆಗೆ ಸರ್ಕಾರ ಕಾನೂನಾತ್ಮಕ ಅವಕಾಶ ನೀಡಬೇಕು ಎಂದು ಗೂಳಿಹಟ್ಟಿ ಶೇಖರ್ ಅವರ ಒತ್ತಾಯ.

    ನಮಗೆ ಕೊಟ್ಟು, ಮುಂದಕ್ಕೆ ತೆಗೆದುಕೊಂಡು ಹೋಗಿ: ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ತಾಲೂಕಿನ ರೈತರು ಸಾವಿರಾರು ಎಕರೆ ಕೃಷಿ ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಇಲ್ಲಿನ ಹಲವಾರು ಕೆರೆಗಳನ್ನು ಯೋಜನೆ ವ್ಯಾಪ್ತಿಯಿಂದ ಕೈ ಬಿಟ್ಟು ಅನ್ಯಾಯ ಮಾಡಲಾಗಿದೆ. ತಾಲೂಕಿನ ಎಲ್ಲ ಕರೆಗಳು ತುಂಬಿದರೆ ಮಾತ್ರ ಸಮಗ್ರ ನೀರಾವರಿ ಕಲ್ಪನೆ ಸಾಕಾರಗೊಳ್ಳುತ್ತದೆ. ಈ ಬೇಡಿಕೆ ಈಡೇರಿದ ಬಳಿಕ ಮುಂದಿನ ಜಿಲ್ಲೆಗಳಿಗೆ ನೀರು ತೆಗೆದುಕೊಂಡು ಹೋಗಬೇಕು ಎಂಬುದು ತಾಲೂಕಿನ ರೈತರ ಹಕ್ಕೊತ್ತಾಯವಾಗಿದೆ.

    ನನಸಾಗುವುದೇ ಸಮಗ್ರ ನೀರಾವರಿ ಕನಸು: ಶಾಸಕ ಗೂಳಿಹಟ್ಟಿ ಡಿ.ಶೇಖರ್ ಒತ್ತಾಯದ ಮೇರೆಗೆ ಮಂಗಳವಾರ ತಾಲೂಕಿಗೆ ಭೇಟಿ ನೀಡುತ್ತಿರುವ ಜಲಸಂಪನ್ಮೂಲ ಸಚಿವರು, ನೀರಾವರಿ ಸೌಲಭ್ಯದ ಬೇಡಿಕೆ ಈಡೇರಿಸುತ್ತಾರೆಂಬ ವಿಶ್ವಾಸ ಜನರಲ್ಲಿದೆ. ಒಂದು ವೇಳೆ ಸಚಿವರ ಭೇಟಿಯಿಂದ ಸ್ಥಳೀಯ ಬೇಡಿಕೆ ಈಡೇರಿದ್ದೇ ಆದರೆ ಬಹು ವರ್ಷಗಳ ಸಮಗ್ರ ನೀರಾವರಿ ಕನಸು ನನಸಾದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts