More

    ಮಿಶ್ರ ಕೃಷಿಯಲ್ಲಿ ದಂಪತಿ ಯಶಸ್ವಿ

    ಸಿದ್ದಾಪುರ: ರೈತರು ಸಾಲ ಸಂಕಷ್ಟದಿಂದ ಒಂದು ಬೆಳೆಯಿಂದ ಹೊರ ಬರಲು ಸಾಧ್ಯವಿಲ್ಲ. ಹೀಗಾಗಿ ಮಿಶ್ರ ಬೆಳೆ ಅನಿವಾರ್ಯ ಎಂಬುದನ್ನು ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಬಡವಂಡ ಬಿದ್ದಪ್ಪ ಹಾಗೂ ಬಿ.ಬಿ.ಹರಣಿ ಸಾಧಿಸಿ ತೋರಿಸಿದ್ದಾರೆ.

    ತಮ್ಮ ತೋಟದಲ್ಲಿ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಜೀವನ ಕಟ್ಟಿಕೊಂಡಿರುವ ಈ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ. ಚಿಕ್ಕಂದಿನಿಂದಲೇ ಬಡವಂಡ ಬಿದ್ದಪ್ಪ ತಮ್ಮ ತಂದೆಯೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಕಾಲೇಜು ವ್ಯಾಸಂಗದ ನಂತರ ಪಿತ್ರಾರ್ಜಿತವಾಗಿ ಬಂದ 30 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಆರಂಭಿಸಿದರು. 10 ಎಕರೆಯಲ್ಲಿ ತುಂಗ, ಅತ್ತಿರ, ಇತ್ಯಾದಿ ಭತ್ತ ಬೆಳೆಯುತ್ತಿದ್ದಾರೆ. ಉಳಿದ 20 ಎಕರೆಯಲ್ಲಿ ರೋಬಾಸ್ಟಾ ಕಾಫಿ ಹಾಗೂ ಅರೇಬಿಕಾ ಕಾಫಿ ಬೆಳೆಯುತ್ತಿದ್ದಾರೆ. ಇದರೊಂದಿಗೆ ಕಾಳುಮೆಣಸು, ಅಡಕೆ, ತೆಂಗು, ಬಾಳೆ…ಇತ್ಯಾದಿ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಆ ಮೂಲಕ ಆದಾಯ ಮೂಲ ಕಂಡುಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

    ಹಸು ಸಾಕಣೆ: ತಂದೆ ಕಾಲದಿಂದಲೇ ಹಸು ಸಾಕಣೆಯಲ್ಲಿ ತೊಡಗಿದ್ದು, ಹುಲಿ ಹಾವಳಿ ಹಾಗೂ ಕೂಲಿ ಕಾರ್ಮಿಕರ ಕೊರತೆ ನಡುವೆಯೂ ಪ್ರಸ್ತುತ ಹತ್ತು ಹಸುಗಳನ್ನು ಸಾಕುತ್ತಿದ್ದಾರೆ. ಪ್ರಸ್ತುತ ತಮ್ಮ ಜಮೀನಿನಲ್ಲಿ ಜರ್ಸಿ, ಕಿರು, ನಾಟಿ, ಹಸುಗಳನ್ನು ಸಾಕುತ್ತಿದ್ದು ನಿತ್ಯ 8ರಿಂದ 10 ಲೀಟರ್ ಹಾಲು ಕರೆಯುತ್ತಿದ್ದಾರೆ. ಅಲ್ಲದೆ ಗ್ರಾಮದ ಕೆಲವು ಮನೆಗಳಿಗೆ ಲೀಟರ್‌ಗೆ 40 ರೂ. ನಂತೆ ಹಾಲು ಹಾಕುತ್ತಿದ್ದಾರೆ.

    ಹಸುಗಳಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಶೇಖರಣೆ ಮಾಡಿ ಟ್ರಾೃಕ್ಟರ್ ಒಂದಕ್ಕೆ 8,000 ರೂ.ನಂತೆ ಅಲ್ಪ ಗೊಬ್ಬರವನ್ನು ವರ್ಷದಲ್ಲಿ ಮಾರಾಟ ಮಾಡುತ್ತಾರೆ. ಇದರೊಂದಿಗೆ ತಮ್ಮ ತೋಟಕ್ಕೂ ಗೊಬ್ಬರ ಬಳಸುತ್ತಿದ್ದಾರೆ.

    ಮೀನು ಸಾಕಣೆ: ಬಿದ್ದಪ್ಪ ದಂಪತಿ ತೋಟದಲ್ಲಿರುವ ಎರಡು ಕೆರೆಯಲ್ಲಿ ಮೀನು ಸಾಕಣೆ ಆರಂಭಿಸಿದ್ದಾರೆ. ಗ್ರಾಸ್ ಕಾಟ್ಲಾ, ಕಾಮನ್ ಕಾರ್ಪ್, ಬರೆ ಮೀನು, ಕಾಟ್ಲಾ ಸೇರಿದಂತೆ ವಿವಿಧ ಸ್ಥಳೀಯ ಮೀನುಗಳನ್ನು ಕೆರೆಯಲ್ಲಿ ಸಾಕಿದ್ದಾರೆ. ಆ ಮೂಲಕ ಆದಾಯ ಕಂಡುಕೊಂಡಿದ್ದಾರೆ.

    ವಿವಿಧ ಬಗೆಯ ಹಣ್ಣುಗಳು: ಬಿದ್ದಪ್ಪ ಹಾಗೂ ಹರಣಿ ದಂಪತಿ ತಮ್ಮ ಮನೆಯ ಸುತ್ತ ವಿವಿಧ ಬಗೆಯ ಹಣ್ಣುಗಳಾದ ಹೈಬ್ರೀಡ್ ಕಿತ್ತಳೆ, 5ಕ್ಕೂ ಹೆಚ್ಚು ಬಗೆಯ 150 ಬಟರ್ ಫ್ರೂಟ್ ಬೆಳೆದಿದ್ದಾರೆ. ವಿವಿಧ ತಳಿಯ ಎರಡು ಬಗೆಯ ಹಲಸು, ಸೀಬೆಕಾಯಿ, ಪಚ್ಚಬಾಳೆ, ಸಪೋಟ, ಪಪ್ಪಾಯಿ, ಲಿಚ್ಚಿ, ಚಕೋತ, ಸೀತಾಫಲ, ರಾಮಫಲ, ಪಣಂಪುಳಿ, ಕೊಡಗಿನ ಕಿತ್ತಳೆ, ಮೈಸೂರು ನೆಲ್ಲಿಕಾಯಿ, ವಿವಿಧ ತಳಿಯ ಮಾವುಗಳನ್ನೂ ಬೆಳೆಯುತ್ತಿರುವುದು ಮತ್ತೊಂದು ವಿಶೇಷ.

    ಮನೆಯ ಸುತ್ತ ಹೂ ತೋಟ: ಕೃಷಿ ಅಲ್ಲದೆ ಹೂ ತೋಟದಲ್ಲಿ ಈ ದಂಪತಿ ಆಸಕ್ತಿ ಹೊಂದಿದೆ. ಇದಕ್ಕೆ ಪೂರಕ ಎಂಬಂತೆ ಮನೆ ಸುತ್ತ ಸುಂದರ ಉದ್ಯಾನ ನಿರ್ಮಿಸಿದ್ದಾರೆ. ವಿವಿಧ ಜಾತಿಯ ಹೂ, ಅಲಂಕಾರಿಕ ಗಿಡಗಳು, ಅಡೆನಿಯಂ, ಗುಲಾಬಿ, ಮನಿಫ್ಲಾಂಟ್, ದಾಸವಾಳ ಮುಂತಾದ ಜಾತಿ ಗಿಡಗಳನ್ನು ಬೆಳೆದಿದ್ದಾರೆ. ಇದರೊಂದಿಗೆ ಮನೆಗೆ ಅಗತ್ಯ ಇರುವಷ್ಟು ತರಕಾರಿಗಳನ್ನೂ ಬೆಳೆದು ಸ್ವಾವಲಂಬಿ ಜೀವನ ಮಾಡುತ್ತಿದ್ದಾರೆ. ಮನೆ ಸುತ್ತ ಇರುವ ಹೂವಿನ ಉದ್ಯಾನದಲ್ಲಿ ತೊಂಡೆ, ಬೆಂಡೆ, ಟೊಮ್ಯಾಟೊ, ಬಸಲೆ ಸೇರಿದಂತೆ ವಿವಿಧ ಬಗೆಯ ತರಕಾರಿ ಮತ್ತು ಸೊಪ್ಪುಗಳನ್ನೂ ಬೆಳೆಯುತ್ತಿರುವುದು ಮತ್ತೊಂದು ವಿಶೇಷ. ಇವೆಲ್ಲವನ್ನೂ ಸಾವಯವ ಪದ್ಧತಿಯಲ್ಲೇ ಬೆಳೆದು ಅನೇಕರಿಗೆ ಮಾದರಿ ಆಗಿದ್ದಾರೆ. ಕೊಟ್ಟಿಗೆ ಗೊಬ್ಬರವನ್ನೇ ಬಳಸಬೇಕು ಎಂಬುದು ದಂಪತಿ ಸಲಹೆ.

    ನರ್ಸರಿಗೂ ಆದ್ಯತೆ: ಮನೆ ಪಕ್ಕ ನರ್ಸರಿ ಮಾಡಿಕೊಂಡಿದ್ದು, ಕೊಂಚ ಜಾಗದಲ್ಲಿ ಶೆಡ್ ನಿರ್ಮಿಸಿ ಕಾಫಿ, ಬಟರ್, ಅಡಕೆ, ಕರಿಮೆಣಸು ಮುಂತಾದ ವಿವಿಧ ಬಗೆಯ ತಳಿಯ ಗಿಡಗಳನ್ನು ದಂಪತಿ ಬೆಳೆಸುತ್ತಿದ್ದಾರೆ. ಮಳೆಗಾಲದಲ್ಲಿ ತಮ್ಮ ತೋಟದಲ್ಲಿಯೂ ಅನೇಕ ಗಿಡಗಳನ್ನು ನೆಡುತ್ತಾರೆ. ತೋಟದ ಕೆಲಸ ಬಳಿಕ ಗಿಡಗಳನ್ನು ಹಾರೈಕೆ ಮಾಡುತ್ತಾರೆ.

    ಕಾಲೇಜು ವ್ಯಾಸಂಗದ ನಂತರ ಮಿಶ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಕಟ್ಟಿಕೊಂಡಿದ್ದೇನೆ. ಎಲ್ಲ ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಉತ್ತಮ ಆದಾಯ ಕಂಡುಕೊಳ್ಳಬಹುದು. ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಉದ್ಯೋಗದಲ್ಲಿ ಬರುವ ವೇತನಕ್ಕಿಂತ ಹೆಚ್ಚು ಆದಾಯ ಗಳಿಸಿ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು.
    ಬಡವಂಡ ಬಿದ್ದಪ್ಪ ಕೃಷಿಕ, ಮಾಲ್ದಾರೆ

    ಕೃಷಿ ನನಗೆ ಆಸಕ್ತಿಯ ಕ್ಷೇತ್ರ. ಮೊದಲಿನಿಂದಲೂ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದೇನೆ. ಜತೆಗೆ ಹೂವಿನ ತೋಟ ನಿರ್ಮಾಣದಲ್ಲೂ ಆಸಕ್ತಿ ಹೊಂದಿದ್ದು, ನೂರಾರು ರೀತಿಯ ಹೂವಿನ ಗಿಡಗಳನ್ನು ಪೋಷಿಸಲಾಗುತ್ತಿದೆ. ಮುಂದೆ ಜೇನು ಸಾಕಣೆ ಮಾಡಲು ಆಸಕ್ತಿ ಹೊಂದಿದ್ದೇವೆ.
    ಬಿ.ಬಿ.ಹರಣಿ ಮಾಲ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts