ಹೊಸದುರ್ಗ: ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಡಿಸಿದರು.
ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಪಂ 14ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ವೈದ್ಯರು ನಿರ್ಗತಿಕರಂತೆ ಕಾಣುತ್ತಾರೆ. ಅವರಿಂದ ಹಣ ವಸೂಲಿ ಮಡುತ್ತಾರೆ. ಜನರನ್ನು ದೂರದಲ್ಲೇ ನಿಲ್ಲಿಸಿ ಮಾತ್ರೆ ಎಸೆಯುತ್ತಾರೆ ಎಂಬ ಗಂಭೀರ ಆರೋಪ ಮಾಡಿದರು.
ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಮಾತ್ರೆಗಳನ್ನು ದೂರದಿಂದ ಎಸೆಯುತ್ತಾರೆ. ರೋಗಿಗಳನ್ನು ಅವಮಾನಿಸುತ್ತಾರೆ ಎನ್ನುವ ದೂರುಗಳಿವೆ. ಇಲಾಖೆ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಪಂ ಉಪಾಧ್ಯಕ್ಷೆ ನೇತ್ರಾವತಿ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಪ್ರೇಮಾ ರವೀಂದ್ರ ಮತ್ತು ಈರವಳಪ್ಪ ಮಾತನಾಡಿ, ಮಾಡದಕೆರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಅಸಭ್ಯವಾಗಿ ವರ್ತಿಸುತ್ತಾರೆ. ರೋಗಿಗಳ ಸಂಕಷ್ಟ ಕೇಳುವರಿಲ್ಲದಂತಾಗಿದೆ ಎಂದರು.
ನಿರಂಜನಮೂರ್ತಿ ಮಾತನಾಡಿ, ಮತ್ತೋಡು ಆಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ಗರ್ಭಿಣಿಯರನ್ನು ಹೆರಿಗೆಗಾಗಿ ಹೊಸದುರ್ಗ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಪಟ್ಟಣದ ಆಸ್ಪತ್ರೆಗೆ ಕಳುಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಪ್ರೇಮಾ ಪ್ರಹ್ಲಾದ ಮಾತನಾಡಿ, ಲಾಕ್‌ಡೌನ್ ಸಡಿಲಿಕೆ ಬಳಿಕ ಹೊರ ರಾಜ್ಯ ಹಾಗೂ ಬೆಂಗಳೂರಿನಿಂದ ಹಳ್ಳಿಗಳಿಗೆ ಬರುವರ ಸಂಖ್ಯೆ ಹೆಚ್ಚಾಗಿದೆ. ಅವರನ್ನು ಸರಿಯಾಗಿ ನಿರ್ವಹಿಸದಿದ್ದರೆ ಹಳ್ಳಿಗಳು ಕರೊನಾಕ್ಕೆ ತುತ್ತಾಗುವ ಅಪಾಯವಿದೆ. ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತಿಸಬೇಕು ಎಂದರು.
ಮತ್ತೋಡು ಗ್ರಾಮದಲ್ಲಿ ಸುಸ್ಥಿತಿಯಲ್ಲಿದ್ದ ಅಂಗನವಾಡಿ ಕಟ್ಟಡವನ್ನು ಕೆಡವಿ ಕಟ್ಟಲಾಗುತ್ತಿದೆ. ಚೆನ್ನಾಗಿದ್ದರೂ ಏಕೆ ಬೀಳಿಸಲಾಯಿತು. ಬೇರೆ ಕಾಮಗಾರಿಗೆ ಈ ಅನುದಾನ ಬಳಸಬಹುದಾಗಿತ್ತು ಎಂದು ನಿರಂಜನಮೂರ್ತಿ ಸಿಡಿಪಿಒ ಪವಿತ್ರ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಿಇಒ ಎಲ್.ಜಯಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಮಕ್ಕಳನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಸರ್ಕಾರ ಸೂಚಿಸಿದ್ದು, ತಾಲೂಕಿನ 10 ಕಡೆಗಳಲ್ಲಿ ಕೆಪಿಎಸ್ ಆರಂಭಿಸಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಸುಮಿತ್ರಾ ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನೇತ್ರಾವತಿ ದೇವರಾಜು, ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಾ ಮಂಜುನಾಥ್, ಇಒ ಜಾನಕಿರಾಮ್ ಮತ್ತಿತರಿದ್ದರು.