More

    ಬಸವಣ್ಣನ ಕಲ್ಪನೆ ಮುಂದುವರಿಸಿದ ಮಹಾತ್ಮ

    ಹೊಸದುರ್ಗ: ಶಾಸಕಾಂಗ, ಕಾರ್ಯಾಂಗ, ಧಾರ್ಮಿಕ ಕ್ಷೇತ್ರವಲ್ಲದೆ ಕಾವಿಧಾರಿಗಳಿಗೂ ಮಾರ್ಗದರ್ಶನ ಮಾಡಿ ಸಮಾಜವನ್ನು ಸನ್ಮಾರ್ಗದೆಡೆ ಕೊಂಡೊಯ್ಯುವಂತೆ ಮಾಡಿದ ಕೀರ್ತಿ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳಿಗೆ ಸಲ್ಲುತ್ತದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

    ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ವಿವಿಧ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಜ್ಯಾತ್ಯತೀತ ನಿಲುವು ಹೊಂದಿದ್ದ ಶ್ರೀಗಳು 10 ಸಾವಿರ ಮಕ್ಕಳಿಗೆ ಮಠದಲ್ಲಿ ಆಶ್ರಯ ಅಷ್ಟೇ ಅಲ್ಲದೆ ಅನ್ನ, ಜ್ಞಾನ, ಸಂಸ್ಕಾರ ನೀಡಿ ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದಾರೆ. ಬಸವಣ್ಣನ ಸಮ ಸಮಾಜದ ಕಲ್ಪನೆ ಮುಂದುವರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪೂಜ್ಯರು ವೀರಶೈವ ಧರ್ಮಕ್ಕಷ್ಟೇ ಮೀಸಲಾಗದೆ ಸರ್ವರನ್ನೂ ಪ್ರೀತಿಸಿದ್ದರು ಎಂದು ಸ್ಮರಿಸಿದರು.

    ಕರ್ನಾಟಕದ ಸಾಧು ಸಂತರಿಗೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆಯುವಂತೆ ಮಾಡಿದ ಲಿಂಗೈಕ್ಯರ ಸೇವೆ ಅನನ್ಯವಾದುದು. ಕೌಶಲಕಿಂತ ಕರುಣೆ ದೊಡ್ಡದು. ಕರುಣಾಮಯಿ, ತ್ರಿವಿಧ ದಾಸೋಹಿ, ವಿಭೂತಿ ಪುರುಷ ಸಿದ್ಧಗಂಗಾ ಶ್ರೀಗಳು ಸರ್ವ ಕಾಲಕ್ಕೂ ಸಲ್ಲುವಂತವರು. ಇವರ ವಿಚಾರಧಾರೆಗಳನ್ನು ಪಠ್ಯವಾಗಿಸಿ ಮಕ್ಕಳಿಗೆ ಓದಿಸುವ ಹೊಣೆ ಸರ್ಕಾರ ತೆಗೆದುಕೊಳ್ಳಬೇಕು ಎಂದರು.

    ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಬಿ.ಮಂಜುನಾಥ್, ಎಪಿಎಂಸಿ ನಿರ್ದೇಶಕರಾದ ರಾಗಿ ಕುಮಾರಪ್ಪ, ಮಹಾಲಿಂಗ ಸ್ವಾಮಿ, ಮಾಜಿ ಪುರಸಭೆ ಸದಸ್ಯ ಪ್ರವೀಣ್, ನಾಗಭೂಷಣ್ ಮತ್ತಿತರರಿದ್ದರು.

    ರುದ್ರಾಕ್ಷಿ, ವಿಭೂತಿ ಧರ್ಮ ಸೂಚಕವಲ್ಲ: ರುದ್ರಾಕ್ಷಿ ಹಾಗೂ ವಿಭೂತಿ ಯಾವುದೇ ಒಂದು ಧರ್ಮ ಜಾತಿಯ ಸೂಚಕವಲ್ಲ. ಅದು ಬದುಕಿನಲ್ಲಿ ಸಾತ್ವಿಕತೆ ಮೂಡಿಸುವ ಶಕ್ತಿ ಹೊಂದಿವೆ. ವೈಜ್ಞಾನಿಕವಾಗಿ ರುದ್ರಾಕ್ಷಿ ಹಾಗೂ ಭಸ್ಮ ಧಾರಣೆ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರು ವಿಭೂತಿ ಹಾಗೂ ರುದ್ರಾಕ್ಷಿ ಧರಿಸುವ ಮೂಲಕ ಸಾತ್ವಿಕ ಗುಣ ಬೆಳಸಿಕೊಳ್ಳಬೇಕು ಎಂದು ಶ್ರೀ ಶಾಂತವೀರ ಸ್ವಾಮೀಜಿ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts